ಸಿದ್ದಾಪುರ, ಆ. 5: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಗೆ ಖಾಯಂ ಪಿ.ಡಿ.ಓ. ನೇಮಕ ಮಾಡಬೇಕೆಂದು ಒತ್ತಾಯಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಪ್ರತಿಭಟನೆ ನಡೆಸಿದರು.
ನೆಲ್ಯಹುದಿಕೇರಿ ಗ್ರಾ.ಪಂ.ಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪಿ.ಡಿ.ಓ ನಂಜುಂಡಸ್ವಾಮಿ ಅವರನ್ನು ಕೆ ನಿಡುಗಣೆ ಗ್ರಾಮ ಪಂಚಾಯಿತಿಗೆ ವರ್ಗಾಯಿಸಲಾಗಿದ್ದು, ಅವರ ಬದಲಿಗೆ ಪ್ರಬಾರ ಕಾರ್ಯದರ್ಶಿಯನ್ನು ನೇಮಕ ಮಾಡಲಾಗಿತ್ತು. ಇದೀಗ ಅವರು ಕೂಡ ವರ್ಗಾವಣೆಗೊಂಡಿದ್ದಾರೆ. ಈ ಹಿನೆÀ್ನಲೆಯಲ್ಲಿ ನೆಲ್ಯಹುದಿಕೇರಿ ಗ್ರಾ.ಪಂ.ಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಖಾಯಂ ಪಿ.ಡಿ.ಓ. ನೇಮಕ ಮಾಡಬೇಕೆಂದು ಒತ್ತಾಯಿಸಿ ಪಂಚಾಯಿತಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ಗ್ರಾ.ಪಂ. ಸದಸ್ಯ ಎ.ಕೆ. ಹಕೀಂ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯು ವಿಶಾಲ ವಾಗಿದ್ದು, ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಬಡವರು ಸೇರಿದಂತೆ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳಿಗೆ ದಿನನಿತ್ಯ ಪಂಚಾಯಿತಿಗೆ ಆಗಮಿಸುತ್ತಿದ್ದಾರೆ. ಖಾಯಂ ಪಿ.ಡಿ.ಓ ಇಲ್ಲದೆ ಸಮಸ್ಯೆ ಉಂಟಾಗಿದೆ. ಕೂಡಲೇ ಖಾಯಂ ಪಿ.ಡಿ.ಓ. ಅವರನ್ನು ಜಿಲ್ಲಾಡಳಿತ ನೇಮಕ ಮಾಡಬೇಕೆಂದು ಒತ್ತಾಯಿಸಿದರು. ತಪ್ಪಿದಲ್ಲಿ ಪಂಚಾಯಿತಿ ಕಚೇರಿಯನ್ನು ಮುಚ್ಚಿ ಹೋರಾಟ ಮಾಡಲಾಗುವದೆಂದು ಎಚ್ಚರಿಸಿದರು. ಪತಿಭಟನೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.