ಪಾಲಿಬೆಟ್ಟ, ಆ. 5: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಶ್ವತ ವೈದ್ಯರಿಲ್ಲದೆ ದಿನನಿತ್ಯ ಬರುವ ರೋಗಿಗಳು ಸಂಕಷ್ಟ ಎದುರಿಸುತ್ತಿದ್ದು ಸರ್ಕಾರದ ಉಚಿತ ವೈದ್ಯಕೀಯ ಸೇವೆ ಲಭ್ಯವಿಲ್ಲದೆ ಪರದಾಡುವಂತಾಗಿದೆ

ಹೊಸೂರು ,ಚೆನ್ನಯ್ಯಕೋಟೆ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಿಂದ ಅಂದಾಜು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಈ ಆಸ್ಪತ್ರೆಯನ್ನು ಅವಲಂಭಿತರಾಗಿದ್ದಾರೆ ದಿನನಿತ್ಯ ನೂರಾರು ಮಂದಿ ರೋಗಿಗಳು ಆಸ್ಪತ್ರೆಗೆ ಆಗಮಿಸಿದರೂ ವೈದ್ಯಕೀಯ ಸೇವೆ ಸಿಗದೇ ವೀರಾಜಪೇಟೆ, ಅಮ್ಮತ್ತಿ ,ಗೋಣಿಕೊಪ್ಪ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಪಾಲಿಬೆಟ್ಟ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹಾಗೂ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯೂ ಸಿಗದೆ ಹಲವು ಮಂದಿ ಮೃತಪಟ್ಟ ಘಟನೆಯೂ ನಡೆದಿದೆ ಕಾರ್ಮಿಕ ವರ್ಗವೇ ಹೆಚ್ಚಾಗಿದ್ದು ಅನಾರೋಗ್ಯ ಸಂದರ್ಭದಲ್ಲಿ ವೈದ್ಯರಿಗಾಗಿ ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿದೆ

ಐವತ್ತು ಬೆಡ್‍ಗಳ ಆಸ್ಪತ್ರೆಯಾಗಿದ್ದು ನಾಲ್ಕು ವೈದ್ಯರು ಇರಬೇಕಾದ ಆಸ್ಪತ್ರೆಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಶಾಶ್ವತವಾಗಿ ವೈದ್ಯರ ನೇಮಕ ಮಾಡಿಲ್ಲ. ಕೆಲವೊಮ್ಮೆ ವಾರದಲ್ಲಿ ಎರಡು ದಿನಕ್ಕೆ ನೇಮಕ ಮಾಡಿರುವ ವೈದ್ಯರು ಸರಿಯಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿಲ್ಲ ಎಂಬ ಆರೋಪವೂ ವ್ಯಕ್ತಗೊಂಡಿದೆ. ರಾತ್ರಿ ವೇಳೆಯಲ್ಲಿ ಯಾವದೇ ವೈದ್ಯರ ಸೇವೆ ಇಲ್ಲದೆ ತುರ್ತು ಸಂದರ್ಭದಲ್ಲಿ ರೋಗಿಗಳ ಸ್ಥಿತಿ ದೇವರೇ ಗತಿ ಎಂಬಂತಾಗಿದೆ.

ಏಳು ದಾದಿಯರು ಸೇವೆ ಸಲ್ಲಿಸಬೇಕಾದ ಆಸ್ಪತ್ರೆಯಲ್ಲಿ ಮೂವರು ಮಾತ್ರವಿದ್ದು ಶೀತ, ಜ್ವರ ,ಕೆಮ್ಮು, ತಲೆನೋವುಗಳಿಗೆ ದಾದಿಯರೇ ಮಾತ್ರೆಗಳನ್ನು ನೀಡುತ್ತಿದ್ದಾರೆ. ಎಕ್ಸರೇ ಹಾಗೂ ಲ್ಯಾಬ್ ಟೆಕ್ನೀಷಿಯನ್ ಇಲ್ಲದೆ ಯಂತ್ರೋಪಕರಣಗಳು ಮೂಲೆ ಸೇರುತ್ತಿವೆ. ಆಂಬ್ಯುಲೆನ್ಸ್ ವ್ಯವಸ್ಥೆಯೂ ಇಲ್ಲದ ಆಸ್ಪತ್ರೆ ಇದ್ದು ಇಲ್ಲದಂತಾಗಿದೆ ಅಗತ್ಯ ವೈದ್ಯರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

-ಪುತ್ತಂ ಪ್ರದೀಪ್