ಮಡಿಕೇರಿ, ಆ. 5: ಪರಿಸರವನ್ನು ಉಳಿಸುವ ಸಂಕಲ್ಪದೊಂದಿಗೆ ನಮ್ಮ ಆಸೆಗಳಿಗೆ ಕಡಿವಾಣ ಹಾಕಿ ಕಲ್ಯಾಣಕ್ಕಾಗಿ ಬದುಕೋಣ ಎಂದು ಶ್ರೀ ತರಳಬಾಳು ಜಗದ್ಗುರು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಸಮಾಜಕ್ಕೆ ಕರೆ ನೀಡಿದರು.ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಸಾಣೆಹಳ್ಳಿ ಜಗದ್ಗುರು ಶಾಖಾ ಮಠ ಹಾಗೂ ಸಹಮತ ವೇದಿಕೆಯ ಕೊಡಗು ಘಟಕದ ವತಿಯಿಂದ ಇಲ್ಲಿನ ಕಾವೇರಿ ಹಾಲ್‍ನಲ್ಲಿ ಏರ್ಪಡಿಸಲಾಗಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಜನರಲ್ಲಿ ಈಗ ಸಂಪಾದನೆಯ ದಾಹ ಹೆಚ್ಚಾಗಿದೆ. ಮನೆ, ಮಠ, ರೆಸಾರ್ಟ್ ಕಟ್ಟುತ್ತಾ ಮಿತಿಯಿಲ್ಲದ ನೀತಿ ಸೃಷ್ಟಿಯಾಗಿದೆ ಇವೆಲ್ಲವೂ ನಾಶವಾಗುತ್ತದೆ ಆಸೆಗೆ ಮಿತಿಯಿಲ್ಲದಿದ್ದರೆ ದುರಂತಕ್ಕೆ ನಾಂದಿಯಾಗುತ್ತದೆ ಎಂದು ಹೇಳಿದರು.ಹಣದಿಂದ ಶಾಂತಿ, ನೆಮ್ಮದಿ ಸಿಗುವದಿಲ್ಲ; ಆದರೂ ಸಂಪಾದನೆ ಮಾಡುತ್ತಿದ್ದೇವೆ. ಅದಕ್ಕೊಂದು ಅಂತಿಮ ಗಡಿ ಹಾಕುತ್ತಿಲ್ಲ ಎಂದು ಹೇಳಿದ ಸ್ವಾಮೀಜಿಗಳು; ಸಂಪತ್ತು ಬೇಕು, ನಮ್ಮ ಸ್ವಂತ ಶ್ರಮದಿಂದ ದುಡಿದಾಗ ಅದಕ್ಕೊಂದು ಶಕ್ತಿ ಇರುತ್ತದೆ. ಮೋಸ, ವಂಚನೆ ಮಾಡಿ ಶ್ರೀಮಂತ ಆಗುವದರಲ್ಲಿ ಅರ್ಥವಿಲ್ಲವೆಂದು ನುಡಿದರು. ಗಳಿಸುವ ಸಂಪಾದನೆಯಲ್ಲಿ ಸಮಾಜಕ್ಕೆ ದಾಸೋಹ ಕಾಯಕಕ್ಕೆ ಸ್ವಲ್ಪ ನೀಡಬೇಕು ಆದರೆ, ನಾವು ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ಲೌಕಿಕ ವಿಷಯದಲ್ಲಿ ಸಿಲುಕಿ ನರಳಾಡುತ್ತಿದ್ದೇವೆ ಎಂದು ವಿಷಾದಿಸಿದರು.
ಮಾತು ಮತ್ತು ವಿವೇಕ ಯಾವಾಗಲೂ ಎಚ್ಚರವಿರಬೇಕು. ಮಾತಿಗೆ ಮೌಲ್ಯ ತಂದುಕೊಡಬೇಕು. ನುಡಿದಂತೆ ನಡೆಯಬೇಕು. ಮಾತು ಮತ್ತು ಕೃತಿಯ ಮಧ್ಯೆ ಹೊಂದಾಣಿಕೆ ಇರಬೇಕು ಎಂದು ಅವರು ಪ್ರತಿಪಾದಿಸಿದರು.
ಮಾತು ಮತ್ತು ಕೃತಿಯ ನಡುವೆ ಹೊಂದಾಣಿಕೆ ಇಲ್ಲದಿದ್ದಲ್ಲಿ ಸಮಸ್ಯೆಗಳು ಸಾಲು ಸಾಲು ಸೃಷ್ಟಿಯಾಗುತ್ತವೆ ಎಂದರು.
(ಮೊದಲ ಪುಟದಿಂದ) ನಡೆ ಮತ್ತು ನುಡಿಯಲ್ಲಿ ಒಂದು ವ್ಯತ್ಯಾಸವು ಸಹ ಕಾಣಬಾರದು ಎಂದು ಸ್ವಾಮೀಜಿ ಅವರು ಹೇಳಿದರು.
ನಮ್ಮಲ್ಲಿ ಬುದ್ದಿವಂತರಿಗೆ ಕೊರತೆಯಿಲ್ಲ; ಆದರೆ ಎಲ್ಲರನ್ನೂ ವಿವೇಕಿಗಳ ಅನ್ನಲಾಗದು. ಬುದ್ದಿ ವಂತಿಕೆ ತಪ್ಪುದಾರಿಗೆ ಎಳೆದೊಯ್ಯುತ್ತದೆ. ಬುದ್ದಿವಂತಿಕೆ ವಿವೇಕವಾಗಿ ಪರಿವರ್ತನೆ ಆದಾಗ ತಪ್ಪು ಮಾಡಲು ಸಾಧ್ಯವಿಲ್ಲ.
12 ನೇ ಶತಮಾನದಲ್ಲಿ ಶರಣರು ಬುದ್ಧಿಯನ್ನು ವಿವೇಕವನ್ನಾಗಿ ಮಾಡಿ ಸಮಾಜ ಕಟ್ಟಿದ್ದಾರೆ. ಎಲ್ಲರನ್ನು ತಮ್ಮವರೆಂದು ಅಪ್ಪಿಕೊಳ್ಳಬೇಕು. ಸಮಸ್ಯೆಗಳನ್ನು ವಿವೇಕದಿಂದ ಪರಿಹಾರ ಮಾಡಿಕೊಳ್ಳಬೇಕು. ಆದರೆ ಜಾತಿಯ ವಿಜೃಂಭಣೆ ಕಾಣುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಇದಕ್ಕಾಗಿ ತಾಳ್ಮೆ ಅತೀ ಮುಖ್ಯ ಎಂದು ನುಡಿದರು. ಇತ್ತೀಚಿನ ದಿನಗಳಲ್ಲಿ ಬಹಿರ್ಮುಖ ಆಲೋಚನೆಗಳು ಹೆಚ್ಚಾಗಿವೆ. ಆದರೆ ಅಂತರ್ಮುಖಿ ಆಲೋಚನೆಗಳು ಕಡಿಮೆಯಾಗಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
12 ನೇ ಶತಮಾನದಲ್ಲಿ ಹೊಸ ಸಮಾಜ ಕಟ್ಟಲು ಶರಣರು ಶ್ರಮಿಸಿದರು. ಇಡೀ ವಿಶ್ವಕ್ಕೆ ವಚನ ಧರ್ಮ ಮಾದರಿ ಎಂದರು. ವೈಯಕ್ತಿಕ ನೆಲೆಗಟ್ಟನ್ನು ಗಟ್ಟಿಗೊಳಿಸಬೇಕು. ಪ್ರಕೃತಿಯ ಸಮತೋಲನ ಕಾಯು ್ದಕೊಳ್ಳಬೇಕು. ಕಾಯಕ ದಾಸೋಹ, ಕಾರ್ಯಕ್ರಮಗಳು ಜರುಗಬೇಕು ಎಂದರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಭಾರತೀಯ ವಿದ್ಯಾಭವನ ಮತ್ತು ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ, ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ವೀರಶೈವ ಜಿಲ್ಲಾ ಘಟಕದ ಅಧ್ಯಕ್ಷÀ ಶಿವಪ್ಪ, ಜಿ.ಪಂ. ಸದಸ್ಯೆ ಕುಮುದ ಧರ್ಮಪ್ಪ, ಕ್ರೈಸ್ತ ಸೇವಾಸಂಘದ ಕೆ.ಟಿ.ಬೇಬಿ ಮ್ಯಾಥ್ಯೂ, ವಿ.ಪಿ.ಶಶಿಧರ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಯಾಕೂಬ್, ಚಿಂತಕರಾದ ಜಿ.ಎನ್.ನಾಗರಾಜ್, ಡಾ.ಕೆ.ಷರೀಫಾ, ಮಹಮ್ಮದ್ ರಫಿ, ರೆವೆರೆಂಡ್ ಫಾದರ್, ಜೋಸೆಫ್, ರಾಜ್ಯ ಮಾಹಿತಿ ಆಯೋಗದ ಮಾಜಿ ಆಯುಕ್ತ ಕೆ.ವಿರೂಪಾಕ್ಷಯ್ಯ ಇತರರು ಇದ್ದರು.
ಸಹಮತ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಸ್ವಾಗತಿಸಿದರು. ಮುನೀರ್ ಅಹಮ್ಮದ್ ನಿರೂಪಿಸಿದರು. ಕುಶಾಲನಗರ ಅಕ್ಕನ ಬಳಗದವರು ವಚನ ಗೀತೆ ಹಾಡಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್.ಮಹೇಶ್ ವಂದಿಸಿದರು. ಇದಕ್ಕೂ ಮುನ್ನ ನಗರದ ಮಹದೇವಪೇಟೆಯ ಶ್ರೀ ಬಸವೇಶ್ವರ ದೇವಾಲಯ ಬಳಿಯಿಂದ ಸಾಮರಸ್ಯ ನಡಿಗೆ ಹೊರಟಿತು. ಸಾಮರಸ್ಯ ನಡಿಗೆಯಲ್ಲಿ ಹಲವು ಕಲಾ ತಂಡಗಳು, ಗಣ್ಯರು ಪಾಲ್ಗೊಂಡಿದ್ದರು.