ಸೋಮವಾರಪೇಟೆ, ಆ. 4: ರೈತರಿಗೆ ಉಪಯೋಗವಾಗಲೆಂದು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮಾರುಕಟ್ಟೆ ಪ್ರಾಂಗಣವನ್ನು ನಿರ್ಮಿಸಿ, ಇದರ ಉಸ್ತುವಾರಿಗೆಂದು ರೈತ ಪ್ರತಿನಿಧಿಗಳನ್ನು ಚುನಾವಣೆ ಮೂಲಕ ಆರಿಸಿ ಕಳಿಸಿದರೂ ಸಹ ಸರ್ಕಾರದ ಆಶಯ ಈಡೇರುತ್ತಿದೆಯೇ? ಎಂದು ಪ್ರಶ್ನಿಸಿದರೆ ಉತ್ತರ ಮಾತ್ರ ಇಲ್ಲ ಎನ್ನುವಂತಾಗಿದೆ.ಸೋಮವಾರಪೇಟೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಅವ್ಯವಸ್ಥೆ ಒಂದಲ್ಲ..,ಎರಡಲ್ಲ! ಮೇಲ್ನೋಟಕ್ಕೆ ಈ ಮಾರುಕಟ್ಟೆ ಪ್ರಾಂಗಣ ಸಂಬಂಧಿಸಿದ ಅಧಿಕಾರಿಗಳು ಮತ್ತು ಕೆಲ ಪ್ರತಿನಿಧಿಗಳಿಗೆ ‘ಚಿನ್ನದ ಮೊಟ್ಟೆ ಇಡುವ ಕೋಳಿ’ಯಂತಾಗಿದೆಯೇ ಹೊರತು;ರೈತರಿಗೆ ಮಾತ್ರ ಯಾವದೇ ಪ್ರಯೋಜನವಾಗುತ್ತಿರುವಂತೆ ಕಂಡುಬರುತ್ತಿಲ್ಲ.ದಾಖಲೆಗಳಲ್ಲಿ ಮಾತ್ರ ಈ ಮಾರುಕಟ್ಟೆಗೆ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ವಹಣೆ, ಅಭಿವೃದ್ಧಿ ಕಾರ್ಯಗಳು ನಡೆದಿದ್ದರೆ, ವಾಸ್ತವದಲ್ಲಿ ಇದು ನೀರಿನಲ್ಲಿ ಹುಣಸೇ ಹಣ್ಣು ತೊಳೆದಷ್ಟೇ ಫಲಪ್ರದ!ಸೋಮವಾರಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆಯ ಉಪ ಮಾರುಕಟ್ಟೆ ಪ್ರಾಂಗಣದಲ್ಲಿರುವ ಮುಚ್ಚಿದ ಹರಾಜು ಕಟ್ಟೆಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸುವ ಕಾಮಗಾರಿಗೆ ಒಟ್ಟು 90,962 ಹಣವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಮೊತ್ತ ಬಿಡುಗಡೆಯಾಗಿರುವದು 2019ನೇ ಮಾರ್ಚ್‍ನಲ್ಲಿ. ಆದರೆ ನಂಬಲೇಬೇಕಾದ ವಿಷಯವೆಂದರೆ ಇಷ್ಟೊಂದು ಮೊತ್ತದಲ್ಲಿ ಅಳವಡಿಸಿರುವ ವಿದ್ಯುತ್ ದೀಪಗಳಲ್ಲಿ ಒಂದೇ ಒಂದು ದೀಪವೂ ಇಂದು ಉರಿಯುತ್ತಿಲ್ಲ!
(ಮೊದಲ ಪುಟದಿಂದ) ಪರಿಣಾಮ ರೈತರು ಹಾಗೂ ರೈತ ಮಹಿಳೆಯರು ಕತ್ತಲಿನಲ್ಲಿ ವ್ಯಾಪಾರ ವಹಿವಾಟು ಮಾಡಬೇಕಿದೆ. ಸೋಮವಾರದಂದು ಸೋಮವಾರ ಪೇಟೆಯಲ್ಲಿ ಸಂತೆ ನಡೆಯುತ್ತಿದ್ದು, ಗ್ರಾಮೀಣ ಭಾಗದಿಂದ ಭಾನುವಾರ ಮಧ್ಯರಾತ್ರಿಯೇ ರೈತರು ಹಾಗೂ ರೈತ ಮಹಿಳೆಯರು ಮಾರುಕಟ್ಟೆಗೆ ಆಗಮಿಸುತ್ತಾರೆ. ತಾವು ಬೆಳೆದ ಶುಂಠಿ, ಬಾಳೆ, ಕಿತ್ತಳೆ, ವಿವಿಧ ಹುಳಿ, ಹಸಿ ಮೆಣಸು, ತರಕಾರಿಗಳನ್ನು ವಾಹನಗಳಲ್ಲಿ ತಂದು ಆರ್‍ಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.
ರಾತ್ರಿ 1ರಿಂದ ಬೆಳಗ್ಗಿನ ಜಾವ 6 ಗಂಟೆಯವರೆಗೆ ಇಲ್ಲಿ ವಹಿವಾಟು ನಡೆಯುತ್ತಿದ್ದು, 90,962 ಹಣದಲ್ಲಿ ಅಳವಡಿಸಿರುವ ದೀಪಗಳು ಬೆಳಕಿನ ಬದಲಿಗೆ ಕತ್ತಲನ್ನೇ ಸೂಸುತ್ತಿವೆ. ಇಂತಹ ಕತ್ತಲ ಸನ್ನಿವೇಶದಲ್ಲಿ ಗ್ರಾಮೀಣ ಪ್ರದೇಶದ ರೈತರು ವ್ಯಾಪಾರ ನಡೆಸಬೇಕಾದ ಸ್ಥಿತಿಗೆ ಪ್ರಾಂಗಣವನ್ನು ತಂದಿಟ್ಟ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗಕ್ಕೆ ಏನೆನ್ನಬೇಕೋ? ಎಂಬದು ಯಕ್ಷಪ್ರಶ್ನೆ!
ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ಕತ್ತಲಿನಲ್ಲೇ ಮಾರಾಟ ಮಾಡುವ ಮಂದಿ ಹಲವಷ್ಟು ಬಾರಿ ಚರಂಡಿಗೆ ಬಿದ್ದು ಗಾಯಪಡಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲೆಂದು ಚರಂಡಿ ನಿರ್ಮಿಸಲಾಗಿದ್ದು, ಇದರ ಮೇಲ್ಭಾಗ ಸ್ಲ್ಯಾಬ್ ಅಳವಡಿಸದೇ ಇರುವದರಿಂದ ಇಂತಹ ದುರಂತಗಳು ಘಟಿಸುತ್ತಲೇ ಇವೆ. ಚರಂಡಿಯಲ್ಲಿ ಇದೀಗ ಕುರುಚಲು ಬೆಳೆದು ನಿಂತಿದ್ದು, ಗುಂಡಿ ಕಾಣದೇ ರೈತರು ಚರಂಡಿಯೊಳಗೆ ಬೀಳುತ್ತಿದ್ದಾರೆ.
ಕಳೆದ ವಾರ ಬೀದಳ್ಳಿಯ ರೈತ ಮಹಿಳೆಯೋರ್ವರು ತಾವು ಬೆಳೆದ ಬಾಳೆಯನ್ನು 750 ರೂಪಾಯಿಗೆ ಮಾರಾಟ ಮಾಡಿದ್ದು, ಖರೀದಿದಾರ ಕತ್ತಲಲ್ಲಿ ಒಂದಷ್ಟು ನೋಟುಗಳನ್ನು ಮಹಿಳೆಯ ಕೈಗೆ ತುರುಕಿದ್ದಾನೆ. ವ್ಯಾಪಾರ ಮುಗಿಸಿ ಬೆಳಕಿಗೆ ಬಂದು ನೋಡುವಾಗ ಕೇವಲ 350 ರೂಪಾಯಿಗಳು ಮಾತ್ರ ಇರುವದು ಕಂಡುಬಂದಿದೆ. ಆರ್‍ಎಂಸಿ ಕರುಣಿಸಿರುವ ಕತ್ತಲಲ್ಲಿ ಇಂತಹ ಕರಾಮತ್ತುಗಳು ಆಗಾಗ್ಗೆ ನಡೆಯುತ್ತಲೇ ಇವೆ.
ಇನ್ನು ಮಾರುಕಟ್ಟೆಯಲ್ಲಿ ಕೊರೆಸಲಾಗಿರುವ ಬೋರ್‍ವೆಲ್‍ಗೆ ನೀಡಿರುವ ವಿದ್ಯುತ್ ಸಂಪರ್ಕ ದಿಂದಲೇ ನೇರವಾಗಿ ಬೀದಿ ದೀಪಗಳಿಗೆ ವಿದ್ಯುತ್ ಕಲ್ಪಿಸಲಾಗಿದೆ. ಇದರಿಂದಾಗಿ ಬಲ್ಬ್‍ಗಳು ಕೆಟ್ಟು ಹೋಗುತ್ತಿವೆ ಎಂಬದು ರೈತರ ವಾದ. ಇಂತಹ ಅನೇಕ ಅವ್ಯವಸ್ಥೆಗಳಿದ್ದರೂ ಸಹ ಆರ್‍ಎಂಸಿಯ ಅಭಿವೃದ್ಧಿಗೆಂದು ಲಕ್ಷಾಂತರ ರೂಪಾಯಿ ವ್ಯಯವಾಗುತ್ತಿರುವದು ಮಾತ್ರ ನಿಂತಿಲ್ಲ.
9 ಸಾವಿರದ ಕೆಲಸಕ್ಕೆ 99 ಸಾವಿರ: ಇನ್ನು ಆರ್‍ಎಂಸಿ ಪ್ರಾಂಗಣದಲ್ಲಿ ನಿರ್ಮಿಸಿರುವ ಶೌಚಾಲಯಕ್ಕೆ 2 ಬಾಗಿಲು ಅಳವಡಿಸಿ ಗೋಡೆಗೆ ಬಣ್ಣ ಬಳಿದಿರುವದಕ್ಕೆ ಬರೋಬ್ಬರಿ 90,087 ರೂಪಾಯಿ ಬಿಲ್ ಮಾಡಲಾಗಿದೆ ಎಂದರೆ ನಂಬಲೇಬೇಕು!
ಫೈಬರ್‍ನ ಬಾಗಿಲಿಗೆ ಒಂದಕ್ಕೆ 1800 ರೂಪಾಯಿ ಮೌಲ್ಯವಿದ್ದು, ಒಂದಿಷ್ಟು ಡಿಸೈನ್ ಬೇಕಿದ್ದರೆ 200 ರಿಂದ 300 ರೂಪಾಯಿ ಹೆಚ್ಚುವರಿಯಾಗಲಿದೆ ಎಂದು ಸೋಮವಾರಪೇಟೆಯಲ್ಲಿಯೇ ಹಾರ್ಡ್‍ವೇರ್ ಅಂಗಡಿ ಇಟ್ಟುಕೊಂಡಿರುವವರು ತಿಳಿಸಿದ್ದಾರೆ.
ಅವರ ಪ್ರಕಾರವೇ ಬಾಗಿಲಿಗೆ ತಲಾ 2100ರಂತೆ ಎರಡು ಬಾಗಿಲಿಗೆ 4200 ಆಗಲಿದೆ. ಮೂರು ಲೀಟರ್ ಬಣ್ಣ ಬಳಿದಿರುವದಕ್ಕೆ 2,500 ರೂ., ಕೂಲಿ 2 ಸಾವಿರ ಎಂದಿಟ್ಟು ಕೊಂಡರೂ ಸಹ 8,700 ಆಗಲಿದೆ. 9 ಸಾವಿರವೂ ವ್ಯಯವಾಗದ ಈ ಕೆಲಸಕ್ಕೆ ಬಿಲ್ ಮಾಡಿರುವದು ಗಮನಿಸಿದರೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಬದಲಾಗಿರುವದು ಗೋಚರಿಸಲಿದೆ.
ಆರ್‍ಎಂಸಿಯಲ್ಲಿ ಆಗಿರುವ ಇಷ್ಟು ಕೆಲಸಕ್ಕೆ ಬರೋಬ್ಬರಿ 90,087 ರೂಪಾಯಿ ಬಿಲ್ ಮಾಡಲಾಗಿದೆ ಎಂದರೆ, ಸರ್ಕಾರದ ಹಣವನ್ನು ನುಂಗಲು ಎಷ್ಟೊಂದು ಪೈಪೋಟಿ ಇದೆ ಎಂಬದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಇನ್ನು ನಬಾರ್ಡ್ ಅನುದಾನದಡಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮಾರುಕಟ್ಟೆ ಶೆಡ್‍ಗಳನ್ನು ನಿರ್ಮಿಸಲಾಗಿದ್ದು, ಕಳಪೆ ಗುಣಮಟ್ಟದ ಪರಿಕರಗಳನ್ನು ಬಳಸಿರುವದರಿಂದ ಈಗಲೇ ಶೀಟ್‍ಗಳು ತೂತು ಬಿದ್ದಿವೆ. ಕಳೆದ 2014-15ನೇ ಸಾಲಿನ ಅನುದಾನದಲ್ಲಿ 2 ಕೋಟಿ ವೆಚ್ಚದಲ್ಲಿ 4 ಮಾರುಕಟ್ಟೆ ಕಟ್ಟಡ, ಸಿಮೆಂಟ್ ರಸ್ತೆ ನಿರ್ಮಿಸಿದ್ದು, ಛಾವಣಿ ಶೀಟ್‍ಗಳು ಈಗಾಗಲೇ ತೂತು ಬೀಳುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.
ಒಟ್ಟಾರೆ ರೈತರಿಗೆ ಉಪಯೋಗ ವಾಗಲೆಂದು ಸರ್ಕಾರ ಬಿಡುಗಡೆ ಮಾಡುವ ಹಣ ಉಪಯೋಗ ಕ್ಕಿಂತಲೂ ದುರುಪಯೋಗವೇ ಹೆಚ್ಚು ಎಂಬಂತಾಗಿದೆ. ‘ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ’ಯಂತಾಗಿರುವ ಆರ್‍ಎಂಸಿ ಅವ್ಯವಸ್ಥೆಗಳಿಗೆ ಕಡಿವಾಣ ಹಾಕಬೇಕಾದ ಆಡಳಿತ ಮಂಡಳಿಯಲ್ಲೇ ಎಲ್ಲರೂ ಸರಿಯಿಲ್ಲ ಎಂಬದು ಮೇಲ್ನೋಟಕ್ಕೆ ಬಯಲಾಗಿದೆ!
- ವಿಜಯ್ ಹಾನಗಲ್