ಮಡಿಕೇರಿ, ಆ. 4: ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿರುವ ಅರಮನೆಯನ್ನು ಹಿಂದಿನ ಗತವೈಭವದಂತೆ ನವೀಕರಣಗೊಳಿಸುವ ದಿಸೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯು ನೀಲನಕಾಶೆ ಸಿದ್ಧಗೊಳಿಸಿದೆ. ಅಲ್ಲದೆ ಈಗಾಗಲೇ ಕೇಂದ್ರ ಸರಕಾರದ ಸಂಬಂಧಿಸಿದ ಸಚಿವಾಲಯಕ್ಕೆ ಈ ಕುರಿತು ಅಭಿವೃದ್ಧಿ ಯೋಜನೆಯ ಪ್ರಸ್ತಾವನೆ ಸಲ್ಲಿಸಿದೆ. ಪ್ರಸಕ್ತ ಕರ್ನಾಟಕ ಪ್ರಾಚ್ಯವಸ್ತು ಇಲಾಖೆ ಹಾಗೂ ಜಿಲ್ಲಾಡಳಿತದ ಅಧೀನ ವಿರುವ ಅರಮನೆಯನ್ನು ತನ್ನ ಸ್ವಾಧೀನಕ್ಕೆ ವಹಿಸಲು ಕ್ರಮ ವಹಿಸುವಂತೆಯೂ ತಾ. 8 ರಂದು ರಾಜ್ಯ ಉಚ್ಛನ್ಯಾಯಾಲಯಕ್ಕೆ ಕೋರಿಕೆ ಮಂಡಿಸಲಾಗಿದೆ.ಈ ಸಂಬಂಧ ಮೊನ್ನೆಯಷ್ಟೇ ಮಡಿಕೇರಿ ಅರಮನೆಯ ಸ್ಥಿತಿಗತಿ ಬಗ್ಗೆ ಉಚ್ಛನ್ಯಾಯಾಲಯದ ನಿರ್ದೇಶನದಂತೆ; ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರಾಗಿರುವ ನಿವೃತ್ತ ಅಧಿಕಾರಿ ವಿರೂಪಾಕ್ಷಯ್ಯ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀಕ್ಷಕಿ ಮೂರ್ತೇಶ್ವರಿ ಮತ್ತು ಸಂಬಂಧಿಸಿದ ಇಂಜಿನಿಯರ್‍ಗಳು ಜಂಟಿ ಪರಿಶೀಲನೆ ನಡೆಸಿದ್ದಾರೆ.ಆ ಬಳಿಕ ಪ್ರಸಕ್ತ ಜಿಲ್ಲಾಡಳಿತದ ಅಧೀನವಿರುವ (ಮೊದಲ ಪುಟದಿಂದ) ಅರಮನೆಯಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಕಚೇರಿಗಳ ತೆರವಿಗೂ ಕ್ರಮ ಕೈಗೊಂಡಿದ್ದಾರೆ. ಮಾತ್ರವಲ್ಲದೆ ಕೋಟೆಯ ಸುತ್ತ ಬೆಳೆದುನಿಂತಿದ್ದ ಕಾಡು, ಗಿಡಗಂಟಿಗಳನ್ನು ಕಿತ್ತೊಗೆಯಲಾಗಿದೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಕೇಂದ್ರ ಪ್ರಾಚ್ಯ ವಸ್ತು ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕಿ ಮೂರ್ತೇಶ್ವರಿ ಅವರು, ಮೊನ್ನೆ ಜಂಟಿ ವೀಕ್ಷಣೆಗೆ ಬಂದಿದ್ದ ವೇಳೆ ಕೋಟೆ ಹಾಗೂ ಅರಮನೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕುರಿತು ಪ್ರಸ್ತಾಪಿಸುತ್ತಾ ತೀವ್ರ ಬೇಸರ ವ್ಯಕ್ತಪಡಿಸಿದರು. ಇದುವರೆಗೆ ಕಚೇರಿಗಳನ್ನು ಹೊಂದಿದ್ದ ಯಾರೊಬ್ಬರು ಅರಮನೆಯ ಕಳಚಿ ಬೀಳುತ್ತಿರುವ ಮಾಡು ದುರಸ್ತಿಗೊಳಿಸದಿರುವದು ವಿಷಾದನೀಯ ಎಂದು ಅಭಿಪ್ರಾಯಪಟ್ಟರು.

ಮಡಿಕೇರಿ ಅರಮನೆ ಹಾಗೂ ಕೋಟೆಯ ನಿರ್ವಹಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವ ದಿಸೆಯಲ್ಲಿ ತಾ. 8 ರಂದು ನ್ಯಾಯಾಲಯಕ್ಕೆ ಸೂಕ್ತ ವರದಿ ನೀಡಲು ಇಲಾಖೆಯಿಂದ ಕ್ರಮಕ್ಕೆಗೊಳ್ಳಲಾಗುತ್ತಿದ್ದು; ಸಂಪೂರ್ಣ ಕೋಟೆಯೊಂದಿಗೆ ಅರಮನೆಯನ್ನು ಕೇಂದ್ರೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವಹಿಸಿಕೊಡುವಂತೆ ಮನವಿ ಸಲ್ಲಿಸುತ್ತಿರುವದಾಗಿ ವಿವರಿಸಿದರು.

ಕಾಲಮಿತಿ ಕಡ್ಡಾಯ : ಸಾಮಾನ್ಯವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀನವಿರುವ ಯಾವದೇ ಸ್ಮಾರಕಗಳನ್ನು, ಸಾರ್ವಜನಿಕ ವೀಕ್ಷಣೆಗಾಗಿ ಬೆಳಿಗ್ಗೆ ಸೂರ್ಯೋದಯದೊಂದಿಗೆ 6 ಗಂಟೆಯಿಂದ ಸಂಜೆ ಸೂರ್ಯಾಸ್ತಮ ಸಂದರ್ಭ 6 ಗಂಟೆಯ ತನಕ ತೆರೆದಿರುವದು ನಿಯಮವಾಗಿದೆ. ಆನಂತರದಲ್ಲಿ ಬಾಗಿಲುಗಳು ಮುಚ್ಚುವದರೊಂದಿಗೆ ರಕ್ಷಣೆ ಕಲ್ಪಿಸಲಾಗುತ್ತದೆ. ಆದರೆ ಮಡಿಕೇರಿ ಕೋಟೆಯ ಯಾವದೇ ದ್ವಾರಗಳು ಮುಚ್ಚುವ ಅಥವಾ ಬಾಗಿಲು ತೆರೆದಿಡುವ ಕ್ರಮ ಇಲ್ಲದೆ ಜಾನುವಾರುಗಳೊಂದಿಗೆ ಅಕ್ರಮಗಳಿಗೆ ಅನುವು ಮಾಡಿಕೊಟ್ಟಂತಾಗಿದೆ ಎಂದು ಅಧಿಕಾರಿ ನೆನಪಿಸಿದರು.

ಈ ಎಲ್ಲವನ್ನು ಗಣನೆಗೆ ತೆಗೆದುಕೊಂಡು ಕೋಟೆ ಆವರಣದ ಸ್ವಚ್ಛತೆಗೆ ಮತ್ತು ಸುರಕ್ಷಾ ಕ್ರಮಗಳಿಗೆ ಒತ್ತು ನೀಡಿದ್ದು; ಇಡೀ ಪರಿಸರ ವರನ್ನು ಸ್ವಚ್ಛಗೊಳಿಸುತ್ತಿರು ವದಾಗಿ ವಿವರಿಸಿದರು. ನ್ಯಾಯಾಲಯ ಸಂಪೂರ್ಣ ಕೋಟೆಯೊಂದಿಗೆ ಅರಮನೆಯನ್ನು ಕೇಂದ್ರೀಯ ಇಲಾಖೆಗೆ ವಹಿಸಿದರೆ, ಆದಷ್ಟು ಬೇಗ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವದು ಎಂದು ವಿಶ್ವಾಸದ ನುಡಿಯಾಡಿದರು.