ಮಡಿಕೇರಿ, ಆ. 4: ಕರ್ನಾಟಕ ಋಣ ಪರಿಹಾರ ಕಾಯ್ದೆಗೆ ರಾಷ್ಟ್ರಪತಿಗಳು ಸಮ್ಮತಿಸಿ ಅಂಕಿತ ಮಾಡಿರುವ ಹಿನ್ನೆಲೆ ಕರ್ನಾಟಕ ಋಣ ಪರಿಹಾರ ಕಾಯ್ದೆಯು ಆದೇಶ ಹೊರಡಿಸಿದ ದಿನದಿಂದ ಒಂದು ವರ್ಷದ ಅವಧಿಗೆ ಮಾತ್ರ ಜಾರಿಯಲ್ಲಿದ್ದು, ಋಣ ಪಡೆಯಲು ಕಾಯ್ದೆ ಜಾರಿಗೆ ಬಂದ ದಿನಾಂಕದಿಂದ 90 ದಿನಗಳೊಳಗಾಗಿ ಉಪ ವಿಭಾಗಾಧಿಕಾರಿಗಳು, ಕಂದಾಯ ಇಲಾಖೆಯವರಿಗೆ ಆಯಾಯ ಕಾರ್ಯ ವ್ಯಾಪ್ತಿಯಲ್ಲಿ ವಾಸಿಸುವ ಋಣಿ ಎಂದರೆ ಒಬ್ಬ ಭೂರಹಿತ ಕೃಷಿ ಕಾರ್ಮಿಕ, ದುರ್ಬಲ ವರ್ಗಕ್ಕೆ ಸೇರಿದ ಒಬ್ಬ ಅಥವಾ ಒಬ್ಬ ಸಣ್ಣ ರೈತರು ಋಣ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಈ ಕಾಯ್ದೆಯ ಸದುದ್ದೇಶವು ಖಾಸಗಿ ಲೇವಾದೇವಿ/ ಗಿರವಿದಾರರಿಂದ ಪಡೆದಂತಹ ಸಾಲದ ಋಣದಿಂದ ಮುಕ್ತಗೊಳಿಸುವ ಸಲುವಾಗಿ ಹಾಗೂ ರಾಜ್ಯದಲ್ಲಿರುವ ಸಣ್ಣ ರೈತರು, ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗಗಳ ಜನರಿಗೆ ಸಾಲದ ಋಣ ಪರಿಹಾರ ಒದಗಿಸಲು ಈ ಕಾಯ್ದೆಯು ಜಾರಿಗೆ ಬಂದಿದೆ.
ಸರ್ಕಾರದ ಈ ಮಹತ್ತರ ಕಾರ್ಯರೂಪದ ಋಣ ಪರಿಹಾರ ಯೋಜನೆಯು ಕಾಯ್ದೆಯ ಮೂಲಕ 2019ರ ಜುಲೈ 23 ರಿಂದ ಜಾರಿಗೆ ಬಂದಿದೆ. ಭೂ ರೈತ ಕೃಷಿ ಕಾರ್ಮಿಕರು, ಸಣ್ಣ ರೈತರು ಮತ್ತು ದುರ್ಬಲ ವರ್ಗಗಳ ಜನರಿಗೆ ಋಣದಿಂದ ಪರಿಹಾರ ಒದಗಿಸುವದು ಮತ್ತು ಅವರ ಆರ್ಥಿಕ ಅಭಿವೃದ್ಧಿ ಕಾಣುವ ಹಿತದೃಷ್ಟಿಯಿಂದ ಕರ್ನಾಟಕ ಋಣ ಪರಿಹಾರ ವಿಧೇಯಕ-2018 ಜಾರಿಗೆ ತರಲಾಗಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.