ಮಡಿಕೇರಿ, ಆ. 4: ಮೀನುಗಾರರು ಹಾಗೂ ವಿಶೇಷವಾಗಿ ಮಹಿಳಾ ಮೀನುಗಾರರು, ಮೀನುಗಾರಿಕೆ ಚಟುವಟಿಕೆಗಳಾದ ಮೀನು ಮಾರಾಟ, ಪರಿಕರಗಳ ಖರೀದಿ, ಮೀನಿನ ವ್ಯಾಪಾರಕ್ಕಾಗಿ ಬಂಡವಾಳ, ಮೀನಿನ ಸಂರಕ್ಷಣೆ ಹಾಗೂ ಮೀನಿನ ಸಾಗಾಣಿಕೆ ಇತರ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಶೇ. 2 ರಷ್ಟು ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳಿಂದ ಸಾಲ ಪಡೆಯುವ ಯೋಜನೆಯನ್ನು ಮೀನುಗಾರಿಕೆ ಇಲಾಖೆ ಅನುಷ್ಟಾನಗೊಳಿಸುತ್ತಿದೆ.

ಈ ಯೋಜನೆಯಲ್ಲಿ ರೂ. 50 ಸಾವಿರವರೆಗೆ ಸಾಲ ಪಡೆಯಲು ಅವಕಾಶವಿರುತ್ತದೆ. ಸಾಲವನ್ನು 24 ತಿಂಗಳೊಳಗೆ (2 ವರ್ಷ) ಬ್ಯಾಂಕ್‍ಗಳಿಗೆ ಮರುಪಾವತಿಸಿದ ಮೀನುಗಾರರು ವ್ಯತ್ಯಾಸದ ಬಡ್ಡಿ ಮೊತ್ತಕ್ಕೆ ಪ್ರಯೋಜನ ಪಡೆಯಲು ಅರ್ಹರಾಗುತ್ತಾರೆ.

ಮೀನುಗಾರಿಕೆ ಚಟುವಟಿಕೆಯ ಉದ್ದೇಶಗಳನ್ನು ಅಂತಿಮಗೊಳಿಸಿಕೊಂಡು ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಿದ ನಂತರ ಸೂಕ್ತ ಶಿಫಾರಸ್ಸಿನೊಂದಿಗೆ ಅರ್ಜಿದಾರರ ವ್ಯಾಪ್ತಿಯ ಬ್ಯಾಂಕ್‍ಗಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗುವದು. ಪ್ರಸ್ತಾವನೆ ನಂತರ ಬ್ಯಾಂಕ್‍ಗಳು ಸಾಲವನ್ನು ಮಂಜೂರು ಮಾಡುತ್ತವೆ. ಈ ರೀತಿ ಸಾಲ ಪಡೆದುಕೊಂಡ ಮೀನುಗಾರರು 24 ತಿಂಗಳೊಳಗಾಗಿ ಸಾಲವನ್ನು ಮರು ಪಾವತಿಸಿದಲ್ಲಿ ವ್ಯತ್ಯಾಸದ ಬಡ್ಡಿ ಮೊತ್ತದ ಪ್ರಯೋಜನ ಪಡೆಯುತ್ತಾರೆ.

2017-18 ಮತ್ತು 2018-19ನೇ ಸಾಲಿನಲ್ಲಿ ಕರಾವಳಿಯ 3 ಜಿಲ್ಲೆಗಳಲ್ಲಿ ಒಟ್ಟು 23507 ಮೀನುಗಾರರ ರೂ. 60.584 ಕೋಟಿ ಸಾಲ ವಸೂಲಾತಿಗೆ ಬಾಕಿ ಇರುತ್ತದೆ. ಈ ಬಾಕಿ ಇರುವ ಸಾಲದ ಮೊತ್ತ ರೂ. 60.584 ಕೋಟಿಗಳನ್ನು ಸಚಿವ ಸಂಪುಟ ಸಭೆಯಲ್ಲಿ ಸರಕಾರ ಮನ್ನಾ ಮಾಡಿರುವದರಿಂದ ಸುಮಾರು 23507 ಮೀನುಗಾರರು ಆರ್ಥಿಕ ಸಂಕಷ್ಟದಿಂದ ಹೊರಬಂದು ಅವರ ಜೀವನವನ್ನು ಸುಧಾರಿಸಿಕೊಂಡು ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಂತಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.