ಮಡಿಕೇರಿ, ಆ. 4: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜೀವ ವಿಜ್ಞಾನ ಬೋಧನಾ ಕೊಠಡಿಗಳನ್ನು ಹಾಗೂ ಕೌಶಲ್ಯ ತರಬೇತಿ ಕೇಂದ್ರವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಮಣ್ಯ ಎಡಪಡಿತ್ತಾಯ ಉದ್ಘಾಟಿಸಿದರು.
ಪೋಷಕರು ಮತ್ತು ಅಧ್ಯಾಪಕರ ನಿಧಿ, ಹಳೆಯ ವಿದ್ಯಾರ್ಥಿ ಸಂಘ, ಪ್ರೊ. ಮೂಡೇರ ಜಗದೀಶ್ ಮತ್ತು ನೇಹಾ ಯುನಿಫಾಮ್ರ್ಸ್ ಇವರ ಆರ್ಥಿಕ ನೆರವಿನೊಂದಿಗೆ ಹದಿನೇಳು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕೊಠಡಿಗಳು ನಿರ್ಮಾಣವಾಗಿವೆ. ಜೀವ ವಿಜ್ಞಾನ ಬೋಧನಾ ಕೊಠಡಿಗಳಿಗೆ ಸರ್ ಜೆ.ಸಿ. ಬೋಸ್ ಮತ್ತು ಎಸ್. ರಾಮಾನುಜನ್ ಹಾಲ್ ಅವರ ಹೆಸರಿಡಲಾಗಿದೆ.
ಉದ್ಘಾಟನೆಯ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಪಿ. ಸುಬ್ರಮಣ್ಯ ಎಡಪಡಿತ್ತಾಯ, ರಾಜ್ಯದ ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ದ್ವಿತೀಯ ಸ್ಥಾನದಲ್ಲಿದ್ದು, ವಿಶ್ವವಿದ್ಯಾನಿಲಯದ ಘನತೆಯನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯಲು ಶ್ರಮಿಸುವದಾಗಿ ತಿಳಿಸಿದರು.
ದುಂದುವೆಚ್ಚಕ್ಕೆ ಕಡಿವಾಣ ಹಾಕುವದು ಸೇರಿದಂತೆ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿಗೆ ಸಮಾನ ಪ್ರಾಶಸ್ತ್ಯ ನೀಡುವ ಮೂಲಕ ಆಡಳಿತದಲ್ಲಿ ಗಮನಾರ್ಹ ಸುಧಾರಣೆ ತರುವದಾಗಿ ಅವರು ಭರವಸೆ ನೀಡಿದರು.
ವೇದಿಕೆಯಲ್ಲಿ ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ, ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಬಿ. ಅಯ್ಯಪ್ಪ, ಪೋಷಕರ ಮತ್ತು ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಆನಂದ್ ಅವರು ಉಪಸ್ಥಿತರಿದ್ದರು. ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.