ಮಡಿಕೇರಿ ಆ.3 : ಮಡಿಕೇರಿ: ನಗರದ ಅರಣ್ಯ ಭವನ ವ್ಯಾಪ್ತಿಯ ಸುಮಾರು 68 ಕುಟುಂಬಗಳ ತೆರವು ಕಾರ್ಯಾಚರಣೆ ನಡೆಯಲಿದೆ ಎಂದು ಇತ್ತೀಚೆಗೆ ಕಾವೇರಿ ಸೇನೆ ನೀಡಿರುವ ಹೇಳಿಕೆ ಖಂಡನೀಯವಾಗಿದ್ದು, ಇದು ಸ್ಥಳೀಯ ಜನಪ್ರತಿನಿಧಿಯೊಬ್ಬರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಷಡ್ಯಂತ್ರವಾಗಿದೆ ಎಂದು ರಾಘವೇಂದ್ರ ದೇವಾಲಯ ಸಮೀಪದ ನಿವಾಸಿಗಳು ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕೀಲ ಕಾರೇರ ಕವನ್ ಅವರು, 68 ಕುಟುಂಬ ಗಳನ್ನು ತೆರವುಗೊಳಿಸು ವಂತೆ ನ್ಯಾಯಾಲಯ ಯಾವದೇ ಆದೇಶ ನೀಡಿಲ್ಲ. ಅರಣ್ಯ ಪ್ರದೇಶ ಒತ್ತುವರಿಯಾಗಿರುವದನ್ನು ತೆರವುಗೊಳಿಸಲು ಮೂರು ತಿಂಗಳ ಕಾಲಾವಕಾಶವನ್ನು ಅರಣ್ಯಾಧಿಕಾರಿಗಳು ಕೇಳಿದ್ದು, ಅರಣ್ಯ ಪ್ರದೇಶ ಒತ್ತುವರಿ ಯಾಗಿದ್ದರೆ ತೆರವುಗೊಳಿಸಿ ಎಂದಷ್ಟೇ ತಿಳಿಸಿದೆ. ಆದರೆ ಕಾವೇರಿಸೇನೆಯ ರವಿಚಂಗಪ್ಪ ಅವರು ಹೇಳಿರುವ ಪ್ರದೇಶದಲ್ಲಿರುವ ಮನೆಗಳು ಕಾನೂನಾತ್ಮಕವಾಗಿದ್ದು, ಈ ಪ್ರದೇಶವು ಸ್ವಾತಂತ್ರ್ಯಪೂರ್ವದಲ್ಲೇ ಭೂ ಪರಿವರ್ತನೆಯಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾವೇರಿಸೇನೆಯು ಕಳೆದ ಸಾಲಿನ ಏಪ್ರಿಲ್ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ರಿಟ್
(ಮೊದಲ ಪುಟದಿಂದ) ಅರ್ಜಿಯ ಹಿನ್ನೆಲೆಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯು ಅರಣ್ಯ ಭವನದ ಸುತ್ತಮುತ್ತಲ ಪ್ರದೇಶದ ಜಂಟಿ ಸರ್ವೆ ನಡೆಸಿದ್ದು, ಈ ಸಂದರ್ಭ ಸುಮಾರು 282 ಎಕರೆ ಪ್ರದೇಶದ ಪೈಕಿ 7.8 ಎಕರೆಯಷ್ಟೇ ಒತ್ತುವರಿಯಾಗಿರುವದು ದೃಢಪಟ್ಟಿದೆ. ಈಗ ವಾಸವಿರುವ ಕುಟುಂಬಗಳ ಜಾಗ ‘ಡಿನೋಟಿಫೈ’ ಆಗಿರುವದರಿಂದ ತೆರವು ಮಾಡಲು ಅವಕಾಶವಿಲ್ಲ ಎಂದು ಅವರು ಹೇಳಿದರು.
ತಾವು ಪರಿಸರದ ಸಂರಕ್ಷಕರು ಎಂದು ಹೇಳಿಕೊಳ್ಳುತ್ತಿರುವ ಕೊಡಗು ವೈಲ್ಡ್ ಲೈಫ್ ಸಂಸ್ಥೆಯ ಕಟ್ಟಡವೇ ‘ಡಿನೋಟಿಫೈ’ ಆಗದ 11 ಸೆಂಟ್ ಜಾಗದಲ್ಲಿದ್ದು, ಅದರ ಬಗ್ಗೆ ಪರಿಸರವಾದಿ ಕಾವೇರಿ ಸೇನೆ ಯಾಕೆÉ ಮಾತನಾಡುತ್ತಿಲ್ಲ ಎಂದು ಕವನ್ ಅವರು ಪ್ರಶ್ನಿಸಿದರು. ಅಲ್ಲದೆ ಕಾವೇರಿ ಸೇನೆಯು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ರಿಟ್ ಅರ್ಜಿ ಸಲ್ಲಿಸಿದ್ದು, ತನ್ನ ತಪ್ಪಿನ ಅರಿವಾದ ಬಳಿಕ ಅದರಲ್ಲಿ ಪ್ರತಿವಾದಿಯಾಗಿದ್ದ ರಾಜಕಾರಣಿ ಯೊಬ್ಬರ ಹೆಸರನ್ನು ಕೈಬಿಟ್ಟಿದೆ. ಅಲ್ಲದೆ ನ್ಯಾಯಾಲಯದ ಆದೇಶವಾಗ ದಿದ್ದರೂ, ಆದೇಶವಾಗಿದೆ ಎಂದು ಜನರಲ್ಲಿ ಭೀತಿ ಹುಟ್ಟಿಸುತ್ತಿದೆ ಎಂದು ಟೀಕಿಸಿದರು.
ಈ ಭಾಗದಲ್ಲಿ ಸುಮಾರು 300 ಕುಟುಂಬಗಳು ವಾಸ ಮಾಡುತ್ತಿದ್ದು, ಸರಕಾರಕ್ಕೆ ಸೇರಿದ ವಿದ್ಯಾರ್ಥಿ ನಿಲಯ ಮಾತ್ರವಲ್ಲದೆ, ಗೌಡ ಸಮಾಜ ಮತ್ತು ಕೊಡವ ಸಮಾಜಕ್ಕೆ ಸೇರಿದ ಆಸ್ತಿಯೂ ಇಲ್ಲಿದೆ. ಆದರೆ ಎಲ್ಲವೂ ಕಾನೂನು ಬದ್ಧವಾಗಿದೆ ಎಂದು ಕವನ್ ಸ್ಪಷ್ಟಪಡಿಸಿದರು.
ಪೊನ್ನಚ್ಚನ ಮಧುಸೂದನ್ ಮಾತನಾಡಿ, ಶಾಸಕ ಕೆ.ಜಿ.ಬೋಪಯ್ಯ ಅವರನ್ನು ರಾಜಕೀಯವಾಗಿ ಕುಗ್ಗಿಸಲು ಕಾವೇರಿ ಸೇನೆ ಈ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ 2018 ಏಪ್ರಿಲ್ನಲ್ಲಿ ಇದೇ ಪ್ರಕರಣವನ್ನು ಕಾವೇರಿ ಸೇನೆ ಪ್ರಸ್ತಾಪಿಸಿತ್ತು. ಇದೀಗ ಬೋಪಯ್ಯ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಮತ್ತೆ ಪ್ರಕರಣ ಕುರಿತು ಹೇಳಿಕೆ ನೀಡಿ ಸಮಾಜದಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಯತ್ನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಸರವಾದಿ ಸಂಘಟನೆ ಎಂದು ಹೇಳಿಕೊಳ್ಳುತ್ತಿರುವ ಕಾವೇರಿ ಸೇನೆ ಕಾವೇರಿ ನದಿ ಮತ್ತು ಕೊಡಗು ಜಿಲ್ಲೆಗೋಸ್ಕರ ಯಾವ ರೀತಿಯ ಉಪಕಾರ ಮಾಡಿದೆ ಎಂದು ಅವರು ಪ್ರಶ್ನಿಸಿದರು.
ಕೋಡಿ ಚಂದ್ರಶೇಖರ್ ಮಾತನಾಡಿ, ಶಾಸಕರನ್ನು ರಾಜಕೀಯವಾಗಿ ಮುಗಿಸುವ ಭರದಲ್ಲಿ ಇತರ ನಿವಾಸಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಇಲ್ಲಿರುವ ಎಲ್ಲಾ ಕುಟುಂಬಗಳು ಡಿ ನೋಟಿಫೈಡ್ ಪ್ರದೇಶದಲ್ಲಿ ವಾಸವಿದ್ದು, ತೆರವುಗೊಳಿಸಲು ಸಾಧ್ಯವಿಲ್ಲ. ಕಾನೂನಾತ್ಮಕ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ಅಗತ್ಯ ಬಿದ್ದರೆ ಉಚ್ಛ ನ್ಯಾಯಾಲಯ ಮಾತ್ರವಲ್ಲದೆ ಸರ್ವೋಚ್ಛ ನ್ಯಾಯಾಲಯದಲ್ಲೂ ಈ ಬಗ್ಗೆ ದಾಖಲೆ ಸಹಿತ ಹೋರಾಟ ಮಾಡಲು ತಯಾರಿರುವದಾಗಿ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಳಚಂಡ ಪವನ್, ವಿಜಯ ಹಾಗೂ ಅರಣ್ ಕುಮಾರ್, ಉಪಸ್ಥಿತರಿದ್ದರು.