ಮಡಿಕೇರಿ, ಆ. 3: ಕೊಡಗಿನಲ್ಲಿ ಕಕ್ಕಡ ಮಾಸ 18 ಕ್ರಮಿಸುವ ಮೂಲಕ ಇಂದಿನಿಂದ ಆಶ್ಲೇಷ ಮಳೆ ಆರಂಭ ಗೊಂಡರೂ; ಮೊದಲನೆಯ ದಿನವೇ ಮಳೆ ಜಿನುಗುವಂತಾಗಿ ಮಧ್ಯೆ ಮಧ್ಯೆ ಬಿಸಿಲು ಕಾಣಿಸಿಕೊಂಡು ಅನ್ನದಾತನಲ್ಲಿ ಮತ್ತಷ್ಟು ಆತಂಕ ಹುಟ್ಟು ಹಾಕಿದೆ. ಇನ್ನು ಜೀವನದಿ ಕಾವೇರಿಯ ಉಗಮಸ್ಥಳ ತಲಕಾವೇರಿ ವ್ಯಾಪ್ತಿಯಲ್ಲಿ ವಾಡಿಕೆಯಂತೆ 200 ಇಂಚು ದಾಟ ಬೇಕಿದ್ದ ಮಳೆ ಪ್ರಸಕ್ತ ವರ್ಷದಲ್ಲಿ ಒಟ್ಟು 110 ಇಂಚು ಮಾತ್ರ ಗೋಚರಿಸಿದೆ. ಅಂತೆಯೇ ಭಾಗಮಂಡಲ ಸುತ್ತಮುತ್ತ ಕೇವಲ 75 ಇಂಚು ಮಳೆಯಾಗಿದೆ.ಕಳೆದ ವರ್ಷ ಈ ಅವಧಿಗೆ ತಲಕಾವೇರಿ ವ್ಯಾಪ್ತಿಯಲ್ಲಿ 350 ಇಂಚು ಮಳೆ ಸುರಿದಿತ್ತು. ಇತ್ತ ಭಾಗಮಂಡಲ ವ್ಯಾಪ್ತಿಯಲ್ಲಿ 195 ಇಂಚು ಮಳೆ ದಾಖಲಾಗಿತ್ತು. ಉತ್ತರ ಕೊಡಗಿನ ಶಾಂತಳ್ಳಿ, ಸೂರ್ಲಬ್ಬಿ ಹಾಗೂ ಇತರ ಗ್ರಾಮೀಣ ಭಾಗಗಳಲ್ಲಿ ಕಳೆದ ಸಾಲಿಗೆ 210 ಇಂಚು ಮಳೆಯಾಗಿದ್ದರೆ; ಪ್ರಸಕ್ತ ಕೇವಲ 70 ಇಂಚು ಮಳೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ ಜಿಲ್ಲಾ ಅಂಕಿ ಅಂಶ ಇಲಾಖೆಯ ಅಂದಾಜಿ ನಂತೆ ಶೇ. 56 ರಷ್ಟು ಮಾತ್ರ ವಾಡಿಕೆಯ ಮಳೆಯಾಗಿದ್ದು; ಈ ಸಾಲಿನ ಮುಂಗಾರುವಿನಲ್ಲಿ ಕಕ್ಕಡ ಮಾಸ ಮುಗಿಯುವಂತಾದರೂ ಶೇ. 44 ರಷ್ಟು ಮಳೆ ಪ್ರಮಾಣ ಕಡಿಮೆ ಗೋಚರಿಸಿದೆ.

ಜಿಲ್ಲೆಯಲ್ಲಿ ಈ ವರ್ಷಾರಂಭ ದಿಂದ ಇದುವರೆಗೆ ಕೇವಲ 39 ಇಂಚು ಮಳೆ ಮಾತ್ರ ದಾಖಲಾಗಿದೆ. ಕಳೆದ ವರ್ಷ ಈ ವೇಳೆಗೆ 105 ಇಂಚು ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಈ ಅವಧಿಗೆ ಸರಾಸರಿ 51.58 ಇಂಚು ಮಳೆಯಾಗಿದೆ. ಕಳೆದ ವರ್ಷ 144 ಇಂಚು ದಾಖಲಾಗಿತ್ತು.

(ಮೊದಲ ಪುಟದಿಂದ) ವೀರಾಜಪೇಟೆ ತಾಲೂಕಿನಲ್ಲಿ ಜನವರಿಯಿಂದ ಇದುವರೆಗೆ ಕೇವಲ 39.35 ಇಂಚು ಮಳೆಯಾಗಿದೆ. ಕಳೆದ ಮುಂಗಾರು ಅವಧಿಯಲ್ಲಿ 83.28 ಇಂಚು ದಾಖಲಾಗಿತ್ತು.

ಅತ್ತ ಸೋಮವಾರಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷದಲ್ಲಿ ಸರಾಸರಿ 23.40 ಇಂಚು ಮಳೆಯಾಗಿದೆ. ಕಳೆದ ಅವಧಿಗೆ 83.12

ಇಂಚು ಸರಾಸರಿ ಮಳೆ ಗೋಚರಿಸಿತ್ತು.

25 ಅಡಿ ಕಡಿಮೆ : ಜಿಲ್ಲೆಯಲ್ಲಿ ಹಾಗೂ ಉತ್ತರ ಕೊಡಗಿನ ಗ್ರಾಮೀಣ ಭಾಗಗಳಲ್ಲಿ ಮುಂಗಾರು ಹಿನ್ನೆಡೆಯ ಪರಿಣಾಮ; ಹಾರಂಗಿ ಜಲಾಶಯದ 2859 ಅಡಿ ಗರಿಷ್ಠ ಮಟ್ಟಕ್ಕಿಂತಲೂ ಪ್ರಸಕ್ತ 25 ಅಡಿ ಕಡಿಮೆ ನೀರು ಸಂಗ್ರಹದೊಂದಿಗೆ ಕೇವಲ 2834 ಅಡಿ ಗೋಚರಿಸಿದೆ.

ಜಲಾಶಯಕ್ಕೆ ನೀರಿನ ಒಳ ಹರಿವು ಕೂಡ 1085 ಕ್ಯೂಸೆಕ್ಸ್ ಗೋಚರಿಸಿದ್ದು; ಕಳೆದ ವರ್ಷ ಈ ವೇಳೆ 3465 ಕ್ಯೂಸೆಕ್ಸ್ ಇತ್ತು. ಪ್ರಸಕ್ತ ನೀರಿನ ಒಳ ಹರಿವು 2380 ಕ್ಯೂಸೆಕ್ಸ್ ಕಡಿಮೆ ಕಂಡು ಬಂದಿದೆ.