ವೀರಾಜಪೇಟೆ, ಆ. 2: ಬದುಕಿನಲ್ಲಿ ಪರಿಸರದಿಂದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವ ನಾವುಗಳು ಪರಿಸರದ ಉಳಿವಿಗಾಗಿ ಕಾಡುಗಳನ್ನು ಸಂರಕ್ಷಿಸಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್‍ಗಣಪತಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಒಕ್ಕೂಟದ ಬೇಟೋಳಿ ಸದಸ್ಯರಿಗೆ ಬಾಳುಗೊಡು ಕಂಡಿಮಕ್ಕಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಪರಿಸರದ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾಡುಗಳ ನಾಶವಾದರೆ ಮಳೆ ಬೆಳೆ ಇಲ್ಲದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮನೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಅದನ್ನು ಪೋಷಿಸಬೇಕು ಎಂದರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಸದಾಶಿವ ಗೌಡ ಮಾತನಾಡಿ ತಾ. 15 ರೊಳಗೆ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎಲ್ಲಾ ದೇವಾಲಯಗಳು, ಮಸೀದಿ, ಚರ್ಚ್ ಹಾಗೂ ಇತರೆಡೆಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದು ಹೇಳಿದರು.

ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷ ಬಿ.ಆರ್. ಗಣೇಶ್, ಉಪಾಧ್ಯಕ್ಷೆ ಪ್ರಪುಲ್ಲಾ, ಸ್ಥಳೀಯ ಗ್ರಾ.ಪಂ. ಸದಸ್ಯರಾದ ಪುಷ್ಪವಲ್ಲಿ, ಮತ್ತು ಶೋಭ, ಅಂಗನವಾಡಿ ಮಾಜಿ ಕಾರ್ಯಕರ್ತೆ ಮೀನಾ ಮಾಚಮ್ಮ, ಹಿರಿಯ ಗ್ರಾವiಸ್ಥರಾದ ಕಾವೇರಪ್ಪ ಮತ್ತು ಪುರುಷೋತ್ತಮ ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಮೇಲ್ವಿಚಾರಕಿ ರತ್ನಾ ಮೈಪಾಲ ಇತರರು ಉಪಸ್ಥಿತರಿದ್ದರು.