ಮಡಿಕೇರಿ, ಆ. 2: ಸಹಮತ ವೇದಿಕೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ತಾ. 5 ರಂದು ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ನಡೆಯಲಿದ್ದು, ಇದರ ಅಂಗವಾಗಿ ಅಂದು ಮಡಿಕೇರಿ ನಗರದಲ್ಲಿ ಸಾಮರಸ್ಯ ನಡಿಗೆ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತರಳಬಾಳು ಜಗದ್ಗುರು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದೆ ಎಂದರು.

ಮಹದೇವಪೇಟೆಯ ಶ್ರೀ ಬಸವೇಶ್ವರ ದೇಗುಲದ ಬಳಿಯಿಂದ ವಿವಿಧ ಜಾತಿ ಧರ್ಮಗಳ ಧರ್ಮ ಗುರುಗಳು, ಜನಪ್ರತಿನಿಧಿಗಳು, ಸಮಾಜ, ಸಂಘ-ಸಂಸ್ಥೆಗಳ ನೇತಾರರು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಸ್ತಬ್ಧಚಿತ್ರ ಕಲಾ ತಂಡಗಳೊಂದಿಗೆ ಸಾಮರಸ್ಯ ನಡಿಗೆ ಬೆಳಿಗ್ಗೆ 10.30 ರಿಂದ ನಡೆಯಲಿದೆ ಎಂದು ಮಾಹಿತಿಯಿತ್ತರು.

11.30 ಕ್ಕೆ ಕಾವೇರಿ ಹಾಲ್ ಸಭಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಯಲಿದ್ದು, ಕೊಣನೂರು ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಪ್ರಕಾಶ್ ಕೂಡಿಗೆ ಸಂವಾದವನ್ನು ನೆರವೇರಿಸಿ ಕೊಡಲಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು, ಅಧ್ಯಕ್ಷತೆಯನ್ನು ಭಾರತೀಯ ವಿದ್ಯಾಭವನ ಮತ್ತು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಅವರು ವಹಿಸಲಿದ್ದಾರೆ ಎಂದರು. ವಿಷಯದ ಕುರಿತು ಚಿಂತಕ ಜಿ.ಎಸ್. ನಾಗರಾಜ್ ಉಪನ್ಯಾಸ ನೀಡಲಿದ್ದಾರೆ. ‘ಇಂದಿನ ಅಗತ್ಯ ಬಸವ ತತ್ತ್ವ’ ವಿಷಯವನ್ನು ಡಾ. ಕೆ. ಷರೀಫ ಮಂಡಿಸಲಿದ್ದಾರೆ. ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿರುವ ಆರ್. ಜಗದೀಶ್ ನಿರ್ದೇಶಿಸಿರುವ ‘ಮೋಳಿಗೆ ಮಾರಯ್ಯ’ ನಾಟಕ ಮಧ್ಯಾಹ್ನ 3.30 ಗಂಟೆಗೆ ಪ್ರದರ್ಶನಗೊಳ್ಳಲಿದೆ. ಸಮಾವೇಶದಲ್ಲಿ ವಿವಿಧ ಧರ್ಮ ಗುರುಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಟಿ.ಪಿ. ರಮೇಶ್ ತಿಳಿಸಿದರು.

“ಮತ್ತೆ ಕಲ್ಯಾಣ” ಕಾರ್ಯಕ್ರಮದ ಸಂಚಾಲಕ ಎಸ್. ಮಹೇಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಪ್ಪ, ಜಿಲ್ಲಾ ಕ್ರೈಸ್ತ ಸೇವಾ ಸಮಾಜದ ಅಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯು, ಅಹಿಂದ ಒಕ್ಕೂಟದ ಅಧ್ಯಕ್ಷ ಮುದ್ದಯ್ಯ ಹಾಗೂ ಪ್ರಮುಖ ಮುನೀರ್ ಅಹಮ್ಮದ್ ಉಪಸ್ಥಿತರಿದ್ದರು.