ಸೋಮವಾರಪೇಟೆ, ಆ. 1: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಶೌಚಾಲಯದ ತ್ಯಾಜ್ಯವನ್ನು ಚರಂಡಿ ಮೂಲಕ ನೇರವಾಗಿ ಕಕ್ಕೆಹೊಳೆಗೆ ಬಿಡುತ್ತಿರುವ ಘಟನೆಗಳು ಆಗಿಂದಾಗ್ಗೆ ನಡೆಯುತ್ತಿವೆ.
ಶೌಚಾಲಯದ ತ್ಯಾಜ್ಯವನ್ನು ಸಕ್ಕಿಂಗ್ ಯಂತ್ರದ ಮೂಲಕ ಹೊರ ತೆಗೆಯುವ ಸಿಬ್ಬಂದಿಗಳು, ಎಲ್ಲರ ಕಣ್ತಪ್ಪಿಸಿ ಪಟ್ಟಣದ ಚರಂಡಿಯ ಮೂಲಕ ಹರಿಬಿಡುತ್ತಿದ್ದು, ಇಂತಹ ತ್ಯಾಜ್ಯ ಇಡೀ ಪಟ್ಟಣವನ್ನು ಗಬ್ಬೆಬ್ಬಿಸಿ ಹರಿದು ಕಕ್ಕೆಹೊಳೆ ಸೇರುತ್ತಿದೆ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಶೌಚಾಲಯ ಮತ್ತು ಸರ್ಕಾರಿ ಬಸ್ ನಿಲ್ದಾಣದ ಶೌಚಾಲಯದ ಪಿಟ್‍ಗಳಿಂದ ಯಂತ್ರದ ಮೂಲಕ ತ್ಯಾಜ್ಯವನ್ನು ಮೇಲೆತ್ತಿ, ನಂತರ ಮೀನು-ಮಾಂಸ ಮಾರಾಟ ಮಳಿಗೆಯ ಹಿಂಭಾಗದಲ್ಲಿನ ಚರಂಡಿ ಮೂಲಕ ಹರಿಬಿಡಲಾಗುತ್ತಿದೆ.
ಇಂತಹ ತ್ಯಾಜ್ಯ ಮಾರ್ಕೆಟ್ ಏರಿಯಾ, ವರ್ಕ್‍ಶಾಪ್ ಏರಿಯಾ ಮುಖಾಂತರ ಹರಿದು ಪಟ್ಟಣದ ಕಕ್ಕೆಹೊಳೆ ಸೇರುತ್ತಿದೆ. ಶೌಚಾಲಯದ ತ್ಯಾಜ್ಯವನ್ನು ಹರಿಬಿಡುವ ಸಂದರ್ಭ ಇಲ್ಲಿನ ನಿವಾಸಿಗಳು ಮೂಗುಮುಚ್ಚಿ ಕೊಂಡು ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಡೀ ಪ್ರದೇಶ ದುರ್ನಾತ ಬೀರುತ್ತಿದ್ದು, ಹಲವಷ್ಟು ಮಂದಿ ಮನೆ, ವರ್ಕ್‍ಶಾಪ್‍ನ ಒಳಗೇ ವಾಂತಿ ಮಾಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಪಂಚಾಯಿತಿ ಸಿಬ್ಬಂದಿ ಗಳನ್ನು ಪ್ರಶ್ನಿಸಿದರೆ ಉಡಾಫೆಯ ಉತ್ತರ ನೀಡುತ್ತಾರೆ ಎಂದು ಸ್ಥಳೀಯರು ಪತ್ರಿಕೆ ಮೂಲಕ ಆರೋಪಿಸಿದ್ದಾರೆ. ತ್ಯಾಜ್ಯವನ್ನು ನೇರವಾಗಿ ಕಕ್ಕೆಹೊಳೆಗೆ ಬಿಡುತ್ತಿರುವದರಿಂದ ಹೊಳೆಯ ನೀರು ಮಲಿನವಾಗುತ್ತಿದೆ.
ಪಟ್ಟಣದ ಕಕ್ಕೆಹೊಳೆಯ ನೀರನ್ನು ಜಾನುವಾರುಗಳು ಕುಡಿಯುತ್ತಿದ್ದರೆ, ಹಲವಷ್ಟು ರೈತರು ಕೃಷಿಗೆ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಜಲಮೂಲಕ್ಕೆ ಪಂಚಾಯಿತಿಯವರು ಕಲುಷಿತ ತ್ಯಾಜ್ಯ ಬಿಡುತ್ತಿರುವದು ಎಷ್ಟರ ಮಟ್ಟಿಗೆ ಸರಿ? ಎಂಬದು ಸಾರ್ವಜನಿಕರ ಪ್ರಶ್ನೆ.
ಇನ್ನಾದರೂ ಪಂಚಾಯಿತಿಯ ಸಿಬ್ಬಂದಿಗಳು ಇಂತಹ ಉಡಾಫೆಯ ಮಾತು, ಕೆಟ್ಟ ಕೃತ್ಯಗಳನ್ನು ನಿಲ್ಲಿಸಬೇಕಿದೆ. ಒಂದು ವೇಳೆ ಮುಂದುವರೆದರೆ ಪರಿಸರ ಮತ್ತು ಮಾಲಿನ್ಯ ನಿಯಂತ್ರಣಾಧಿಕಾರಿಗಳೇ ಇವರುಗಳಿಗೆ ಬುದ್ಧಿ ಹೇಳಬೇಕಿದೆ. ಅದಕ್ಕೂ ಮೊದಲು ಪಂಚಾಯಿತಿಯ ಮುಖ್ಯಾಧಿಕಾರಿಗಳು ಪ್ರಾಂಜಲ ಮನಸ್ಸಿನಿಂದ ‘ಹೊಳೆಗೆ ಶೌಚಾಲಯದ ನೀರು ಹರಿಸುವದು ಸರಿಯೋ? ತಪ್ಪೋ?’ ಎಂಬದನ್ನು ನಿರ್ಧರಿಸಬೇಕಿದೆ!
- ವಿಜಯ್ ಹಾನಗಲ್