ವೀರಾಜಪೇಟೆ, ಆ. 2: ತಿಂಗಳ ಹಿಂದೆ ಖಾಸಗಿ ವಾಹನವೊಂದರಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮತ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ವೀರಾಜಪೇಟೆ ಗ್ರಾಮಾಂತರ ಪ್ರದೇಶವಾದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದ ತೋಟದ ಅಂಚಿನಲ್ಲಿ ತಾ. 17-05-2019 ರಂದು ಬೆಳಿಗ್ಗೆ ಖಾಸಗಿ ಕಾರಿನಲ್ಲಿ (ಕೆಎ.-14ಎನ್-2913) ಅಕ್ರಮವಾಗಿ ಧನ, ಕರುಗಳನ್ನು ಸಾಗಿಸಲಾಗುತ್ತಿತ್ತು. ಕಾರು ನಿಯಂತ್ರಣ ತಪ್ಪಿ ಅಪಘಾತವಾಗಿತ್ತು. ಅಕ್ರಮಿತರು ವಾಹನವನ್ನು ಬಿಟ್ಟು ತಲೆಮರೆಸಿಕೊಂಡಿದ್ದರು. ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು.

ಆರೋಪಿಗಳ ಶೋಧ ಮುಂದುವರಿಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮೂಡಬಿದಿರೆ ನಿವಾಸಿ ಕೆ.ಅಬ್ದುಲ್ ಬಷೀರ್ (ಅರ್‍ಗ ಬಷೀರ್) ಎಂಬಾತನನ್ನು ದಸ್ತಗಿರಿ ಮಾಡಿದ ಪೊಲೀಸರು ಇಂದು ನಗರಕ್ಕೆ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯ ಮೇಲೆ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಆರೋಪಿಯನ್ನು ಪತ್ತೆ ಹಚ್ಚಲು ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾದ ಪತ್ತೆ ಕಾರ್ಯ ನಿರ್ವಹಿಸುತಿದ್ದ ಸಿಬ್ಬಂದಿಗಳಾದ ಚಂದ್ರಶೇಖರ್ ಮತ್ತು ಹರೀಶ್ ಮಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಮತೋರ್ವ ಆರೋಪಿ ತಲೆ ಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರೆದಿದೆ.

ಡಿವೈಎಸ್ಪಿ ಮುರುಳೀಧರ್ ಮಾರ್ಗದರ್ಶನದಲ್ಲಿ ವೃತ್ತ ನೀರಿಕ್ಷಕ ಕ್ಯಾತೆಗೌಡ ನಿರ್ದೇಶನದ ಮೇರೆಗೆ ಎ.ಎಸ್.ಐ ಚಂದ್ರಪ್ಪ, ಸಿಬ್ಬಂದಿಗಳಾದ ರಾಮಪ್ಪ, ರವಿಕುಮಾರ್, ಮತ್ತು ರಮೇಶ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. -ಕೆ.ಕೆ.ಎಸ್. ವೀರಾಜಪೇಟೆ