ಮಡಿಕೇರಿ, ಜು. 31: ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಸಂದರ್ಭದಲ್ಲಿ ಮತ್ತು ಇನ್ನಿತರ ಸಂದರ್ಭದಲ್ಲಿ ಹಲವಾರು ಪ್ರತಿಭಟನೆಗಳು ನಡೆದಿದ್ದು, ಆಗ ಹೂಡಲಾಗಿರುವ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಬಿಜೆಪಿ ಪ್ರಮುಖರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಕಚೇರಿಯಲ್ಲಿ ಇಂದು ನೂತನ ಮುಖ್ಯಮಂತ್ರಿಗಳಿಗೆ ಕೊಡಗಿನ ಒಡಿಕತ್ತಿ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದ ಬಿಜೆಪಿ ಪ್ರಮುಖರ ನಿಯೋಗ ಈ ಬಗ್ಗೆ ಮನವಿ ಸಲ್ಲಿಸಿತು. ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಪ್ರಮುಖರು ಈ ಹಿಂದೆ ನೀಡಿದ್ದ ಭರವಸೆಯಂತೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿದ ಬಗ್ಗೆ ಮುಖ್ಯಮಂತ್ರಿಗಳನ್ನು ಹಾಗೂ ಈ ಕುರಿತು ಪ್ರಯತ್ನಿಸಿದ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಅಭಿನಂದಿಸಿದರು.ಶಾಸಕ ಬೋಪಯ್ಯ ಪತ್ರಈ ವಿಚಾರದ ಬಗ್ಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಟಿಪ್ಪು ಜಯಂತಿ ಸಂದರ್ಭದಲ್ಲಿ ಹಲವರ ಮೇಲೆ ಹೂಡಲಾಗಿರುವ ಮೊಕದ್ದಮೆಯ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ತರಿಸಿಕೊಂಡು ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಿ ಈ ಮೊಕದ್ದಮೆಗಳನ್ನು ಹಿಂಪಡೆಯುವಂತೆ ಕೋರಿದ್ದಾರೆ.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರೂ ಈ ಕುರಿತು ಮನವಿ ಸಲ್ಲಿಸಿದ್ದಾರೆ. ನಿಯೋಗದಲ್ಲಿ ಬಿಜೆಪಿಯ ಪ್ರಮುಖರಾದ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಬೆಲ್ಲು ಸೋಮಯ್ಯ, ತಳೂರು ಕಿಶೋರ್ ಕುಮಾರ್, ಅರುಣ್ ಭೀಮಯ್ಯ, ರಘು ನಾಣಯ್ಯ, ಕಾಂಗೀರ ಸತೀಶ್,

(ಮೊದಲ ಪುಟದಿಂದ) ಸುಭಾಶ್ ಸೋಮಯ್ಯ, ಅರಮಣಮಾಡ ಉದಯ್ ಸೇರಿದಂತೆ ಜಿ.ಪಂ. ಸದಸ್ಯರು, ಇತರರು ಪಾಲ್ಗೊಂಡಿದ್ದರು.

ಹಿಂ.ಜಾ.ವೇ. ಆಗ್ರಹ

ಟಿಪ್ಪು ಜಯಂತಿ ಆಚರಣೆಯನ್ನು ರದ್ದುಪಡಿಸಿರುವ ರಾಜ್ಯ ಸರಕಾರದ ಕ್ರಮವನ್ನು ಸ್ವಾಗತಿಸಿರುವ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಘಟಕ, ಟಿಪ್ಪು ಜಯಂತಿ ಸಂದರ್ಭ ಹಿಂದಿನ ಸರಕಾರ ಅಮಾಯಕರ ಮೇಲೆ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್ ಅವರು, ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ ಜಿಲ್ಲೆಯ ನೂರಾರು ಹಿಂದೂ ಕಾರ್ಯಕರ್ತರ ಮೇಲೆ ವಿನಾಕಾರಣ ಕೇಸು ದಾಖಲಿಸಲಾಗಿತ್ತು. ಈ ಪ್ರಕರಣಗಳನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಇಂದಿನ ಸರಕಾರ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಮೇವಡ ಅಯ್ಯಣ್ಣ, ಉಪಾಧ್ಯಕ್ಷ ಸುಭಾಷ್ ತಿಮ್ಮಯ್ಯ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಂ.ಬಿ.ಉಮೇಶ್, ಜಿಲ್ಲಾ ಪದಾಧಿಕಾರಿಗಳಾದ ತಿರುಪತಿ ಹಾಗೂ ಶಾಂತೆಯಂಡ ತಿಮ್ಮಯ್ಯ ಉಪಸ್ಥಿತರಿದ್ದರು.

ದ್ವೇಷದ ರಾಜಕಾರಣ - ಕಾಂಗ್ರೆಸ್

ರಾಜ್ಯದಲ್ಲಿ ನೂತನವಾಗಿ ರಚನೆಗೊಂಡಿ ರುವ ಬಿಜೆಪಿ ನೇತೃತ್ವದ ಸರಕಾರ ಜನಪರವಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾಳಜಿ ತೋರದೆ ಅಧಿಕಾರಕ್ಕೆ ಬಂದ ತಕ್ಷಣ ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದುಗೊಳಿಸುವ ಮೂಲಕ ದ್ವೇಷ ರಾಜಕಾರಣವನ್ನು ಪ್ರದರ್ಶಿಸಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎ.ಕೆ.ಹ್ಯಾರಿಸ್ ಆರೋಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ದ್ವೇಷದ ರಾಜಕಾರಣ ಮಾಡುವದಿಲ್ಲವೆಂದು ಹೇಳುತ್ತಲೇ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟಿಪ್ಪು ಜಯಂತಿಯನ್ನು ರದ್ದು ಮಾಡಿರುವದು ಸರಿಯಾದ ಕ್ರಮವಲ್ಲ, ಟಿಪ್ಪುವಿನ ಜಯಂತಿ ಒಂದು ಅರ್ಥಪೂರ್ಣ ಆಚರಣೆಯಾಗಿದ್ದು, ಇದನ್ನು ಸ್ಥಗಿತಗೊಳಿಸಿರುವ ಬಿಜೆಪಿ ಸರಕಾರ ಆರಂಭದಲ್ಲೇ ಸಂಕುಚಿತ ಮನೋಭಾವವನ್ನು ಪ್ರದರ್ಶಿಸಿದೆ ಎಂದು ಟೀಕಿಸಿದ್ದಾರೆ.