ಕುಶಾಲನಗರ, ಜು. 31: ಪತ್ರಿಕೆಗಳನ್ನು ಓದುವ ಹವ್ಯಾಸದ ಮೂಲಕ ಜ್ಞಾನಶಕ್ತಿ, ಸಾಮಾನ್ಯ ಜ್ಞಾನ ಗಳಿಸಲು ಸಾಧ್ಯ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಪ್ರೆಸ್‍ಕ್ಲಬ್ ಟ್ರಸ್ಟ್ ಮತ್ತು ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಜಿಲ್ಲಾ ಘಟಕದ ಜಂಟಿ ಅಶ್ರಯದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಿಕೆಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಬೇಕು. ಸಮಾಜದ ವಿದ್ಯಮಾನಗಳನ್ನು ಜನತೆಯ ಮುಂದಿಡುವ ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ನಿರ್ವಹಿಸಬೇಕೆಂದು ಕರೆ ನೀಡಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಸಹಾಯಕ ಪ್ರಾಧ್ಯಾಪಕ ಪುಟ್ಟರಾಜು, ಸಮಾಜದಲ್ಲಿ ಪತ್ರಿಕೆ ವಿರೋಧ ಪಕ್ಷದಂತೆ ಕಾರ್ಯ ನಿರ್ವಹಿಸುವಂತಾಗಬೇಕು ಎಂದರು.
ಅತಿಥಿಗಳಾಗಿ ಪಾಲ್ಗೊಂಡ ಜಿಪಂ ಮಾಜಿ ಸದಸ್ಯರಾದ ವಿ.ಪಿ.ಶಶಿಧರ್ ಮಾತನಾಡಿ, ಸಮಾಜದ ಕನ್ನಡಿಯಂತೆ ಪತ್ರಿಕಾ ಮಾಧ್ಯಮಗಳು ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.
ಪ್ರೆಸ್‍ಕ್ಲಬ್ ಟ್ರಸ್ಟ್‍ನ ಅಧ್ಯಕ್ಷರಾದ ಎಚ್.ಎಂ.ರಘು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಆರ್.ಕೆ.ನಾಗೇಂದ್ರಬಾಬು, ಪಟ್ಟಣ ಪೊಲೀಸ್ ಠಾಣಾಧಿಕಾರಿ ಜಗದೀಶ್, ಟ್ರಸ್ಟ್‍ನ ಗೌರವಾಧ್ಯಕ್ಷ ಟಿ.ಆರ್.ಪ್ರಭುದೇವ್, ಬೀದಿಬದಿ ವ್ಯಾಪಾರಿಗಳ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್.ಜಗದೀಶ್, ಕರ್ನಾಟಕ ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಆರ್.ಗಿರೀಶ್ ಮತ್ತಿತರರು ಪಾಲ್ಗೊಂಡಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ಹಿರಿಯ ಪತ್ರಕರ್ತರಾದ ಎಸ್.ನರೇಶ್‍ಚಂದ್ರ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಪಿ.ಪಿ.ಸೋಮೇಗೌಡ, ಕುಶಾಲನಗರ ಪಪಂ ಮುಖ್ಯಾಧಿಕಾರಿ ಎಸ್.ಎಂ. ಸುಜಯ್‍ಕುಮಾರ್, ಲೇಖಕಿ ಕೆ.ಜಿ. ರಮ್ಯ, ಬಿಗ್‍ಬಾಸ್ ಖ್ಯಾತಿಯ ಸುಮಾ ರಾಜ್‍ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಕಂದಾಯ ಪರಿವೀಕ್ಷಕ ಕೆ.ಜಿ. ಮಧುಸೂದನ್, ಆಶಾ ಕಾರ್ಯಕರ್ತೆ ಎಸ್.ಜ್ಯೋತಿ, ಸರಕಾರಿ ಪ್ರೌಢಶಾಲೆ ಶಿಕ್ಷಕಿ ಬಿ.ಪಿ.ಸವಿತಾ, ಖ್ಯಾತ ನಾಟಿ ಔಷಧಿ ವೈದ್ಯೆ ಲೀಲಾವತಿ ಗಣಪತಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಎಚ್.ಎಂ.ರಘು ಪ್ರಾಸ್ತಾವಿಕ ಭಾಷಣ ಮಾಡಿದರು, ಪ್ರಧಾನ ಕಾರ್ಯದರ್ಶಿ ಕೆ.ಟಿ. ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.