ಚೇರಂಬಾಣೆ, ಜು. 31: ಕನ್ನಡದ ಸೇವೆ ಕನ್ನಡ ಸಾಹಿತ್ಯ ಪರಿಷತ್‍ನಿಂದ ಮಾತ್ರ ಸಾಧ್ಯವಿಲ್ಲ. ಪ್ರತಿಯೋರ್ವ ಕನ್ನಡಿಗರೂ ಸಹ ಭಾಷೆಯ ಮೇಲೆ ಮಮತೆ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಕನ್ನಡದ ಸೇವೆ ಸುಲಲಿತ ವಾಗುತ್ತದೆ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಹಾಗೂ ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅಭಿಪ್ರಾಯಿಸಿದರು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನಿಂದ ಚೇರಂಬಾಣೆಯ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯನ್ನು ಆಡುವದರೊಂದಿಗೆ ಸಾಹಿತ್ಯ, ಬರವಣಿಗೆಯ ಬಗ್ಗೆಯೂ ಒತ್ತು ನೀಡಬೇಕು. ಕನ್ನಡ ಸಾಧಕರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕು. ಪುಸ್ತಕಗಳನ್ನು ಖರೀದಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸಾಹಿತ್ಯ ಚಟುವಟಿಕೆ ನಿರಂತರವಾಗಿರಬೇಕು. ಬರವಣಿಗೆಗೆ ಅಧ್ಯಯನ ಮುಖ್ಯ. ಬರಹಗಾರರು ತಮ್ಮ ಜ್ಞಾನವನ್ನು ಸೀಮಿತಗೊಳಿಸಬಾರದು. ಯಾವ ಕೆಲಸ ಮಾಡಿದರೂ ಆತ್ಮತೃಪ್ತಿಯಿಂದ ಮಾಡಬೇಕು. ಹಾಗಾದಾಗ ಮಾತ್ರ ಕಾರ್ಯದಲ್ಲಿ ಸಂತೃಪ್ತಿ ಸಿಗುತ್ತದೆ. ಸಾಗರದಂತಹ ತಾಳ್ಮೆಯಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ಕಸಾಪದಿಂದ ಈವರೆಗೆ 16 ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲೂ ಕನ್ನಡ ಸಾಹಿತ್ಯದ ಚಟುವಟಿಕೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ದೇಶದ ಮುಂದಿನ ಪ್ರಜೆಗಳಾಗಿದ್ದು, ಬಾಲ್ಯದಿಂದಲೇ ಸಾಹಿತ್ಯ, ಸಂಗೀತ, ಕಲೆಗಳನ್ನು ಅಳವಡಿಸಿಕೊಳ್ಳಬೇಕಿದೆ. ಇಂತಹ ವಿದ್ಯಾರ್ಥಿಗಳು ಸಮಾಜಕ್ಕೆ ಎಂದಿಗೂ ಮಾರಕವಾಗುವದಿಲ್ಲ ಎಂದು ಅಭಿಪ್ರಾಯಿಸಿದರು.
ನಿಕಟಪೂರ್ವ ಅಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ, ಕನ್ನಡ ಕಬ್ಬಿಣದ ಕಡಲೆಯಲ್ಲ; ಭೂಷಣವಿರುವ ಭಾಷೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡವನ್ನು ಕಟ್ಟುನಿಟ್ಟಾಗಿ ಮಾತನಾಡುವ ಕಾನೂನು ತರಬೇಕು. ರಾಜಕಾರಣಿಗಳು ಮನಸ್ಸು ಮಾಡಿದರೆ ಈ ಕಾನೂನು ಜಾರಿ ಕಷ್ಟವೇನಲ್ಲ. ಕನ್ನಡವನ್ನು ಕಡೆಗಣಿಸಬೇಡಿ. ಪ್ರತಿಯೋರ್ವರೂ ಅವರವರ ಭಾಷೆಗೆ ಆದ್ಯತೆ ನೀಡುತ್ತಿದ್ದು, ನಾವುಗಳೂ ಸಹ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಕನ್ನಡವನ್ನು ಕಡೆಗಣಿಸದೇ ಆಂಗ್ಲಭಾಷೆಯನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ಸಮ್ಮೇಳನಾಧ್ಯಕ್ಷ ಕಿಗ್ಗಾಲು ಗಿರೀಶ್ ಅವರು ಬರೆದ ‘ವಿದ್ಯಾರ್ಥಿಗಳಲ್ಲಿ ಲೈಂಗಿಕ ಶಿಕ್ಷಣದ ಅಗತ್ಯತೆ’ ಮತ್ತು ‘ರಂಗನಾಥನ ಹನಿಮೂನ್ ಪ್ರಸಂಗ’ ಎಂಬ ಎರಡು ಪುಸ್ತಕಗಳನ್ನು ಲೇಖಕರು ಮತ್ತು ಕಲಾವಿದರ ಬಳಗದ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಕನ್ನಡ ಸಾಯುವಂತಹ ಪಟ್ಟಿಯಲ್ಲಿದೆ ಎಂದು ವರದಿ ಹೇಳುತ್ತಿದ್ದು, 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಭಾಷೆಗೆ ಇಂತಹ ಸ್ಥಿತಿ ಬರುತ್ತಿರುವದು ದುರಂತ. ಕನ್ನಡ ಸಾಹಿತ್ಯಗಳು ಇನ್ನಷ್ಟು ಗಟ್ಟಿಗೊಳ್ಳಬೇಕು. ವಿದ್ಯಾರ್ಥಿಗಳ ಪಠ್ಯಕ್ರಮದಲ್ಲೂ ಸಾಹಿತ್ಯಕ್ಕೆ ಆದ್ಯತೆ ನೀಡಬೇಕು ಎಂದರು.
ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪಟ್ಟಣಕ್ಕೆ ಹೋದವರು ಭಾಷೆ, ಸಾಹಿತ್ಯವನ್ನು ಕಳೆದುಕೊಳ್ಳುತ್ತಿದ್ದು, ಕೊನೆಗೊಮ್ಮೆ ತಮ್ಮನ್ನು ತಾವೇ ಕಳೆದುಕೊಳ್ಳುತ್ತಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಭಾಷೆ, ಸಂಸ್ಕøತಿ ಇನ್ನೂ ಜೀವಂತವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಕಿಗ್ಗಾಲು ಗಿರೀಶ್, ಬೇಂಗೂರು ಗ್ರಾ.ಪಂ. ಅಧ್ಯಕ್ಷ ಕೆ.ಬಿ. ಅಶೋಕ್, ಸದಸ್ಯರಾದ ಸುಗುಣ, ಮಿತ್ರ ಚಂಗಪ್ಪ, ಪಿಡಿಓ ಚೋಂದಕ್ಕಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ವೀರಾಜಪೇಟೆ ಅಧ್ಯಕ್ಷ ಮಧೋಶ್ ಪೂವಯ್ಯ, ಕಸಾಪ ಗೌರವ ಕಾರ್ಯದರ್ಶಿ ಕೂಡಕಂಡಿ ದಯಾನಂದ, ಕಿಶನ್ ಪೂವಯ್ಯ, ಭಾಗಮಂಡಲ ಕಸಾಪ ಅಧ್ಯಕ್ಷ ಎ.ಎಸ್. ಶ್ರೀಧರ್, ಮೂರ್ನಾಡು ಘಟಕದ ಅಧ್ಯಕ್ಷ ಸುಕುಮಾರ್, ಪ್ರಾಂಶುಪಾಲ ಪ್ರಕಾಶ್, ಪತ್ರಿಕಾಭವನ ಮ್ಯಾನೇಜಿಂಗ್ ಟ್ರಸ್ಟಿ ಮನುಶೆಣೈ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಉಪನ್ಯಾಸಕ ಪರಮೇಶ್ವರ, ಆಕಾಶವಾಣಿ ಉದ್ಘೋಶಕಿ ಬಾಳೆಯಡ ದಿವ್ಯ ಮಂದಪ್ಪ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು. ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಕುಡೆಕಲ್ ಸಂತೋಷ್ ಸ್ವಾಗತಿಸಿ, ಪದಾಧಿಕಾರಿ ಕಿಶೋರ್‍ಕುಮಾರ್ ವಂದಿಸಿದರು.