ಕುಶಾಲನಗರ, ಜು. 31: ಅಂಗಡಿಯೊಂದಕ್ಕೆ ರಾತ್ರಿ ವೇಳೆ ನುಗ್ಗಿ ಕಳ್ಳತನ ಮಾಡಲು ಪ್ರಯತ್ನಿಸಿದ ಇಬ್ಬರು ಕಳ್ಳರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ತಡರಾತ್ರಿಯಲ್ಲಿ ರಥಬೀದಿಯ ಲಕ್ಷ್ಮಣ್ ಚೌಧರಿ ಎಂಬವರ ಹರಿ ಪ್ರಾವಿಷನ್ ಸ್ಟೋರ್ನ ರೋಲಿಂಗ್ ಶಟರ್ ಮುರಿದು ನುಗ್ಗಿದ ಇಬ್ಬರು ಕಳ್ಳರು ಅಂಗಡಿಯೊಳಗಿದ್ದ ಸಾಮಗ್ರಿಗಳು ಮತ್ತು ನಗದು ದೋಚಲು ಹೊರಟ ಸಂದರ್ಭ ಶಬ್ಧ ಕೇಳಿದ ಎದುರು ಮನೆಯ ಮಹಿಳೆಯೊಬ್ಬರು ಮಾಲೀಕರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ ಹಿನ್ನೆಲೆಯಲ್ಲಿ ಕೂಡಲೆ ಸ್ಥಳಕ್ಕೆ ಆಗಮಿಸಿ ಓರ್ವ ಕಳ್ಳನನ್ನು ಹಿಡಿಯುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ. ಇನ್ನೋರ್ವ ಪರಾರಿಯಾಗಿದ್ದು, ಬೆಳಗ್ಗಿನ ಜಾವ ಕುಶಾಲನಗರ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ರಾಜಸ್ತಾನದ ನಿವಾಸಿಗಳಾದ ಸುರೇಂದ್ರ ಸಿಂಗ್ (30), ಅಮರ್ ಸಿಂಗ್ (21) ಎಂಬವರುಗಳು ಬಂಧನಕ್ಕೆ ಒಳಗಾದ ಖದೀಮರು. ಸುರೇಂದ್ರ ಸಿಂಗ್ನನ್ನು ಹಿಡಿದ ಸ್ಥಳೀಯರು ಗೂಸಾ ನೀಡಿದ ಹಿನ್ನೆಲೆಯಲ್ಲಿ ತೀವ್ರ ಗಾಯಗೊಂಡ ಆತನನ್ನು ವಶಕ್ಕೆ ಪಡೆದು ಪೊಲೀಸರು ಚಿಕಿತ್ಸೆ ನೀಡಿ ನಂತರ ಬಂಧಿಸಿ ಕ್ರಮಕೈಗೊಂಡಿದ್ದಾರೆ. ಇನ್ನೋರ್ವ ಆರೋಪಿ ಅಮರ್ಸಿಂಗ್ನನ್ನು ಕುಶಾಲನಗರ ಬಸ್ ನಿಲ್ದಾಣದಲ್ಲಿ ಪಟ್ಟಣ ಪೊಲೀಸ್ ಠಾಣಾಧಿಕಾರಿ ಜಗದೀಶ್ ಮತ್ತು ಸಿಬ್ಬಂದಿ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಅಮರ್ಸಿಂಗ್ ಈ ಹಿಂದೆ ಕುಶಾಲನಗರದಲ್ಲಿ ಅಂಗಡಿಯೊಂದ ರಲ್ಲಿ ಸಹಾಯಕನಾಗಿ ಕೆಲಸ ನಿರ್ವಹಿ ಸುತ್ತಿದ್ದ ಎಂದು ತಿಳಿದು ಬಂದಿದೆ. ಸುರೇಂದ್ರ ಸಿಂಗ್ ನಂಜನಗೂಡಿನಿಂದ ಎರಡು ದಿನಗಳ ಹಿಂದೆ ಕುಶಾಲನಗರಕ್ಕೆ ಬಂದಿದ್ದ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಜಗದೀಶ್, ಸಿಬ್ಬಂದಿಗಳಾದ ಕೃಷ್ಣಶೆಟ್ಟಿ, ಸುನಿಲ್, ಉಮೇಶ್, ಚಂದ್ರಶೇಖರ್ ಪಾಲ್ಗೊಂಡಿದ್ದರು.