ಮಡಿಕೇರಿ, ಜು. 29: ಮೂಲತಃ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹಾಕತ್ತೂರು ನಿವಾಸಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್‍ನ ಸ್ಥಾಪಕ ಶರಫುಲ್ ಉಲಮಾ(ಪಂಡಿತ ಶ್ರೇಷ್ಠ) ಬಿರುದಾಂಕಿತ ಹಿರಿಯ ಧರ್ಮಗುರು, ಪಿ.ಎಂ ಅಬ್ಬಾಸ್ ಉಸ್ತಾದ್ (73) ಅವರು ಇಂದು ವಿಧಿವಶರಾದರು.

ತಮ್ಮ ಧಾರ್ಮಿಕ ವಿದ್ಯಾಭ್ಯಾಸವನ್ನು ಕೊಂಡಂಗೇರಿಯಲ್ಲಿ ಆರಂಭಿಸಿ ಆ ಬಳಿಕ ಮಂಗಳೂರು ಸಮೀಪದ ಉಳ್ಳಾಲ ಹಾಗೂ ಕೇರಳದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪಡೆದ ಅಬ್ಬಾಸ್ ಉಸ್ತಾದ್ ಅವರು, ಹಲವಾರು ಮಸೀದಿಗಳಲ್ಲಿ ಧಾರ್ಮಿಕ ಗುರುವಾಗಿ ಸೇವೆ ಸಲ್ಲಿಸಿದ್ದಾರೆ. ಮಂಜನಾಡಿಯ ಅವರ ವಿದ್ಯಾಸಂಸ್ಥೆಯಲ್ಲಿ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ.

14 ವರ್ಷಗಳ ಹಿಂದೆ ಕೊಡಗಿನಲ್ಲಿ ಬಡ ಮತ್ತು ಅನಾಥ ಮುಸ್ಲಿಂ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹವನ್ನು ಪ್ರಾರಂಭಿಸಿದ ಕೀರ್ತಿ ಅಬ್ಬಾಸ್ ಉಸ್ತಾದ್ ಅವರಿಗೆ ಸಲ್ಲುತ್ತದೆ.

ಹಲವು ಇಸ್ಲಾಮ್ ಧಾರ್ಮಿಕ ಕೃತಿಗಳನ್ನು ರಚಿಸಿರುವ ಅಬ್ಬಾಸ್ ಉಸ್ತಾದ್ ಬಡ ಮತ್ತು ಅನಾಥ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣದ ವ್ಯವಸ್ಥೆಯನ್ನು ಮಾಡುವ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪತ್ನಿ, ಐವರು ಪುತ್ರರು ಹಾಗೂ ಮೂವರು ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತಾ 30 ರಂದು (ಇಂದು) ಬೆಳಿಗ್ಗೆ 9 ಗಂಟೆಗೆ ಮಂಜನಾಡಿಯ ಅಲ್ ಮದೀನದಲ್ಲಿ ನೆರವೇರಲಿದೆ.