ಶನಿವಾರಸಂತೆ, ಜು. 29: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಧಾರಾಕಾರೆ ಮಳೆ ಸುರಿಯಿತು. ಬೆಳಿಗ್ಗೆಯಿಂದಲೂ ಉತ್ತಮ ಮಳೆಯಾಗುತ್ತಿದ್ದು; ರೈತರು ಹರ್ಷಚಿತ್ತರಾಗಿ ನೆಮ್ಮದಿಯ ನಿಟ್ಟುಸಿರು ಹೊರಚೆಲ್ಲಿದರು. ಪಟ್ಟಣಕ್ಕೆ ಎರಡು ಇಂಚು ಮಳೆಯಾಗಿದೆ ಪಟ್ಟಣದ ರಸ್ತೆ, ಚರಂಡಿಗಳಲ್ಲಿ ನೀರು ತುಂಬಿ ಹರಿಯಿತು.
ಈ ವಿಭಾಗದಲ್ಲಿ ಶನಿವಾರದಿಂದ ಉತ್ತಮ ಮಳೆಯಾಗುತ್ತಿದ್ದು; ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗೆ ರೈತರು ಮತ್ತೆ ಚಾಲನೆ ನೀಡಿದ್ದಾರೆ. ಗದ್ದೆಗಳಲ್ಲಿ ನೀರಾಗಿದೆ ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಗೆ ಎರಡೂವರೆ ಇಂಚು, ಹಂಡ್ಲಿ, ನಿಡ್ತ, ಗೌಡಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೂವರೆ ಇಂಚು ಮಳೆಯಾಗಿದೆ. ಗದ್ದೆಗಳಲ್ಲಿ ಮಳೆ, ಗಾಳಿ, ಚಳಿ ಲೆಕ್ಕಿಸದೇ ರೈತರು, ಕೂಲಿಕಾರ್ಮಿಕರು ದುಡಿಯುತ್ತಿದ್ದು, ನಾಟಿ ಕೆಲಸ ಭರದಿಂದ ಸಾಗಿದೆ.
ಗದ್ದೆಗಳಲ್ಲಿ ಭತ್ತದ ಪೈರು ಬೆಳೆದಿದ್ದು; ನಾಟಿ ಮಾಡಿದರೂ ಮುಂದೆ ಇಳುವರಿ ಕಡಿಮೆಯಾಗುತ್ತದೆ. ಬೀಜ ಅಗೆ ಹಾಕಿ 25 ದಿನಕ್ಕೆ ನಾಟಿ ಮಾಡಬೇಕಿತ್ತು. ಇದೀಗ ಮಳೆಯಾಗುತ್ತಿದ್ದು; 40 ದಿನ ತಡವಾಗಿ ನಾಟಿ ಮಾಡುತ್ತಿರುವದರಿಂದ ಉತ್ತಮ ಫಸಲು ನಿರೀಕ್ಷಿಸುವಂತಿಲ್ಲ. ಅಕ್ಕಿಯ ದರವೂ ಕುಸಿದಿದೆ. ರೈತರಲ್ಲಿ ಗದ್ದೆ ಬೇಸಾಯದ ಬಗ್ಗೆ ನಿರಾಸಕ್ತಿ ಮೂಡುತ್ತಿದೆ ಎಂದು ಶಿಡಿಗಳಲೆ ಗ್ರಾಮದ ಕೃಷಿಕ ಎಸ್.ಎಂ. ಉಮಾಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.