ಬೆಂಗಳೂರ, ಜು. 28: ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರಕಾರದ ವಿರುದ್ಧ ಅಸಮಾಧಾನಗೊಂಡು; ರಾಜೀನಾಮೆ ಸಲ್ಲಿಸುವ ಮೂಲಕ ಮುಂಬೈನಲ್ಲಿ ಬೀಡು ಬಿಟ್ಟಿರುವ 14 ಮಂದಿ ಕರ್ನಾಟಕ ವಿಧಾನಸಭೆಯ ಶಾಸಕರನ್ನು ಇಂದು ವಿಧಾನ ಸಭಾಧ್ಯಕ್ಷರಾಗಿರುವ ಕೆ.ಆರ್. ರಮೇಶ್‍ಕುಮಾರ್ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ. ತಾ. 25 ರಂದು ಇತರ ಮೂವರನ್ನು ಕೂಡ ಅನರ್ಹಗೊಳಿಸಿರುವ ಹಿನ್ನೆಲೆ; ಒಟ್ಟು ಅನರ್ಹ ಶಾಸಕರ ಸಂಖ್ಯೆ 17ಕ್ಕೆ ಏರಿದ್ದು, ಪ್ರಸಕ್ತ ವಿಧಾನಸಭೆಯ ಅವಧಿ ಮುಗಿಯುವವರೆಗೂ ಕೂಡ ಇವರುಗಳು ಅನರ್ಹರಾಗಿರುತ್ತಾರೆ.ಹೀಗಾಗಿ ಕರ್ನಾಟಕ ವಿಧಾನಸಭೆಯಲ್ಲಿ ತಾ. 29 ರಂದು (ಇಂದು) ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತುಗೊಳಿಸುವ ಹಾದಿ ಸುಗಮವಾದಂತಾಗಿದೆ. ಭಾನುವಾರದೊಂದಿಗೆ ಸರಕಾರಿ ಕೆಲಸ ಕಾರ್ಯಗಳಿಗೆ ರಜೆಯ ದಿನವಾದ ಇಂದು ವಿಧಾನಸಭಾ ಅಧ್ಯಕ್ಷರು ದಿಢೀರ್ ಸುದ್ದಿಗೋಷ್ಠಿ ನಡೆಸುವ ಮೂಲಕ; ವಿಧಾನ ಸಭೆಯ 11 ಮಂದಿ ಕಾಂಗ್ರೆಸ್ ಶಾಸಕರು ಹಾಗೂ 3 ಮಂದಿ ಜೆಡಿಎಸ್ ಶಾಸಕರ ವಿರುದ್ಧ ತಾವು ಹಿಂದಿನ ಅನೇಕ ರಾಜ್ಯಗಳ ವಿಧಾನಸಭಾ ಅಧ್ಯಕ್ಷರುಗಳು ಹಾಗೂ ಲೋಕಸಭೆಯ ಅಧ್ಯಕ್ಷರುಗಳ ತೀರ್ಪು ಆಧರಿಸಿ ಕ್ರಮ ಜರುಗಿಸುತ್ತಿರುವದಾಗಿ ಘೋಷಿಸಿದರು. ಅಲ್ಲದೆ ಹಿರಿಯ ಸಂಸದೀಯ ಪಟು ಜೈಪಾಲ್ ರೆಡ್ಡಿ ಅವರ ಸಾವಿನ ಇಂದಿನ ದುಃಖದ ನಡುವೆ ತಾವು ಈ ತುರ್ತು ಆದೇಶ ನೀಡುತ್ತಿರುವದಾಗಿ ಉಲ್ಲೇಖಿಸಿದರು.ಎಂ.ಸಿ.ಎನ್. - ಎ.ಕೆ.ಎಸ್.: ಪ್ರಸಕ್ತ ಉಪರಾಷ್ಟ್ರಪತಿಗಳಾಗಿ ರುವ ರಾಜ್ಯಸಭಾ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ; ಕೊಡಗಿನ ಕಾನೂನು ತಜ್ಞರು, ಹಿರಿಯ ಶಾಸಕಾಂಗ ಪಟುಗಳಾಗಿದ್ದ ಎಂ.ಸಿ. ನಾಣಯ್ಯ ಹಾಗೂ ಎ.ಕೆ. ಸುಬ್ಬಯ್ಯ ಅವರುಗಳ ಹೆಸರು ಕೂಡ ಸ್ಮರಿಸಿಕೊಂಡ ವಿಧಾನಸಭಾಧ್ಯಕ್ಷರು; ಅರೆಕ್ಷಣ ಗದ್ಗಧಿತರಾಗಿ ತಮ್ಮ ಆದೇಶ ವ್ಯಕ್ತಪಡಿಸಿದರು.

ಆ ಪ್ರಕಾರ ನಿರೀಕ್ಷೆಯಂತೆಯೇ ಮುಂಬೈಗೆ ಹಾರಿರುವ ಎಲ್ಲ 14 ಅತೃಪ್ತ ಶಾಸಕರಿಗೆ ರಮೇಶ್ ಕುಮಾರ್ ಅವರು ಶಾಕ್ ನೀಡಿದ್ದು, ಅವರ ಶಾಸಕತ್ವ ಅನರ್ಹಗೊಳಿಸಿರುವದಾಗಿ ತಿಳಿಸಿದರು. ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ರಾಜರಾಜೇಶ್ವರಿ ನಗರದ ಮುನಿರತ್ನ, ಚಿಕ್ಕಬಳ್ಳಾಪುರದ ಡಾ. ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, (ಎಲ್ಲರು ಕಾಂಗ್ರೆಸ್) ಹುಣಸೂರಿನ ಹೆಚ್. ವಿಶ್ವನಾಥ್ ಮತ್ತು ಕೆ.ಆರ್.ಪೇಟೆಯ ನಾರಾಯಣಗೌಡ (ಜೆಡಿಎಸ್) ಈ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದರು.

ಭಾನುವಾರವೂ ಕಚೇರಿ ಕಾರ್ಯನಿರ್ವಹಣೆ, ದಿಢೀರ್ ಸುದ್ದಿಗೋಷ್ಠಿ ಕುರಿತು ಸ್ಪಷ್ಟನೆ ನೀಡಿದ ಸ್ಪೀಕರ್ ಜುಲೈ 23ರಂದು ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತಯಾಚನೆ ಮಾಡುವಲ್ಲಿ ವಿಫಲವಾಗಿದ್ದರಿಂದ ರಾಜೀನಾಮೆ ನೀಡಿದ್ದರು. ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಜುಲೈ 26ರಂದು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮನ್ನು ಸಂಪರ್ಕಿಸಿ, ತಾ. 31ರಂದು ಸರ್ಕಾರದ ಧನವಿನಿಯೋಗ ಮಸೂದೆ ಅಂತ್ಯಗೊಳ್ಳಲಿದೆ. ಹಾಗಾಗಿ ಧನವಿನಿಯೋಗ ಮಸೂದೆ ಮತ್ತು ಇತರ ಬೇಡಿಕೆಗಳ ಮೇಲೆ ಮತಯಾಚನೆ ಆಗಬೇಕಿದೆ. ಸಭೆಯ ವಿಶ್ವಾಸಮತ ಪಡೆಯಬೇಕಿದೆ. ಆದ ಕಾರಣ ಸೋಮವಾರ ಅಧಿವೇಶನ ಕರೆಯಲು ಅವಕಾಶ ನೀಡಬೇಕು ಎಂದು ಕೋರಿದ್ದಾರೆ ಎಂದು ವಿವರಿಸಿದರು.

ಸೋಮವಾರ ಅಧಿವೇಶನ ನಡೆಸಲು ಸಿದ್ಧತೆ ನಡೆಸುವಂತೆ ಕಚೇರಿಯ ಕಾರ್ಯದರ್ಶಿಗಳಿಗೂ ಸೂಚನೆ ನೀಡಿದ್ದೇನೆ. ಬಹುಮತ ಸಾಬೀತಿಗೆ ಸೋಮವಾರ ಕರೆದ ಹಿನ್ನೆಲೆಯಲ್ಲಿ ಉಳಿದ ಎಲ್ಲ ರಾಜೀನಾಮೆ ಮತ್ತು ಅನರ್ಹತೆ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕಿದೆ. ಹಾಗಾಗಿ ನಮ್ಮ ಕಚೇರಿಯ ಅಧಿಕಾರಿಗಳು ಶನಿವಾರ ಮತ್ತು ಭಾನುವಾರ ಕೂಡ ಕೆಲಸ ಮಾಡಿದ್ದಾರೆ. ಸೋಮವಾರ ಸದನದಲ್ಲಿ ತಾವು ತೊಡಗಿ ಕೊಳ್ಳುವದರಿಂದ ಇಂದೇ ಎಲ್ಲ ಅತೃಪ್ತ ಶಾಸಕರ ರಾಜೀನಾಮೆ ಅರ್ಜಿಗಳ ಇತ್ಯರ್ಥ ಮಾಡಲಾಗುವದು ಎಂದು ಹೇಳಿದರು.

ಸ್ಪೀಕರ್ ಆಗಿರುವ ಕಾರಣಕ್ಕೆ ನನ್ನ ಮೇಲೆ ಮಾನಸಿಕ ಒತ್ತಡ ಹಾಕಲಾಗಿದೆ. ಖಿನ್ನನಾಗಿದ್ದೇನೆ ತಮ್ಮ ವೈಯಕ್ತಿಕ ಜೀವನದಲ್ಲಿ ತುಳಸಿದಾಸಪ್ಪ, ಅಬ್ದುಲ್ ನಜೀರ್ ಸಾಬ್, ಬಿ.ಎ.ಮೊಯಿದ್ದೀನ್ ಅವರಂಥವರಿಂದ ಪ್ರಭಾವಿತನಾಗಿದ್ದೇನೆ; ನನ್ನನ್ನು ರೂಪಿಸಿದವರು ಅವರುಗಳು ಎಂದು ಹೇಳಿದರು.

ಅಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಸಲಹೆ ಮೇರೆಗೆ ಸೋಮವಾರ ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಕರೆಯಲಾಗಿದೆ. ವಿಶ್ವಾಸಮತಯಾಚನೆ, ಧನವಿನಿಯೋಗ ಮಸೂದೆ ಮೇಲೆ ಚರ್ಚೆ, ಪರಿಶೀಲನೆ ಮತ್ತು ಮತಕ್ಕೆ ಹಾಕುವ ವಿಚಾರವನ್ನು ಸ್ಪಷ್ಟವಾಗಿ ನಮೂದಿಸಿ ವಿಧಾನಮಂಡಲ ಕಾರ್ಯದರ್ಶಿಯ ಮೂಲಕ ಎಲ್ಲಾ ಸದಸ್ಯರಿಗೆ ಸೂಚನಾ ಪತ್ರವನ್ನು ಕಳುಹಿಸಿ ಕೊಟ್ಟಿದ್ದೇನೆ. ಇದಕ್ಕಾಗಿ ನಮ್ಮ ಕಾರ್ಯಾಲಯ ಶನಿವಾರ, ಭಾನುವಾರ ಎರಡೂ ದಿನ ಕೆಲಸ ಮಾಡಿದೆ ಎಂದು ಹೇಳಿದರು.

ಈ ಹಿಂದೆಯೇ ತಾ. 25 ರಂದು ವಿಧಾನಸಭಾ ಅಧ್ಯಕ್ಷರು ರಾಣೆಬೆನ್ನೂರು ಪಕ್ಷೇತರ ಶಾಸಕ ಆರ್. ಶಂಕರ್, ಕಾಂಗ್ರೆಸ್ ಶಾಸಕರುಗಳಾದ ರಮೇಶ್ ಜಾರಕಿಹೊಳೆ ಹಾಗೂ ಮಹೇಶ್ ಕುಮಟಳ್ಳಿ ಅವರುಗಳನ್ನು ಅನರ್ಹಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಜೆಪಿ ಹಾದಿ ಸುಗಮ : ಇಂದಿನ ವಿಧಾನಸಭಾ ಅಧ್ಯಕ್ಷರ ಈ ನಡೆಯಿಂದ; ತಾ. 29 ರಂದು (ಇಂದು) ಬಿಜೆಪಿ ವಿಶ್ವಾಸ ಮತಯಾಚನೆ ಹಾದಿ ಸುಗಮವಾದಂತಾಗಿದೆ ಎಂದು ರಾಜಕೀಯ ಪರಿಣಿತರ ಲೆಕ್ಕಾಚಾರವಾಗಿದೆ.

ಅಸಮಾಧಾನ - ಸ್ವಾಗತ : ವಿಧಾನಸಭಾ ಅಧ್ಯಕ್ಷ ರಮೇಶ್ ಕುಮಾರ್ ಅವರ ನಡೆಯನ್ನು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ, ಜೆಡಿಎಸ್ ವರಿಷ್ಠ ದೇವೇಗೌಡ ಅವರುಗಳು ಸ್ವಾಗತಿಸಿದ್ದಾರೆ. ಈ ನಡುವೆ ಅತೃಪ್ತ ಶಾಸಕರುಗಳ ಸಹಿತ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಈ ಎಲ್ಲ ಬೆಳವಣಿಗೆ ನಡುವೆ ತಾ. 29 ರಂದು (ಇಂದು) ವಿಧಾನಸಭಾ ಕಲಾಪದೊಂದಿಗೆ; ವಿಶ್ವಾಸ ಮತಯಾಚನೆ ಹಾಗೂ ಇತರ ಬೆಳವಣಿಗೆಗಳನ್ನು ಕಾದುನೋಡಬೇಕಿದೆ. ಅಲ್ಲದೆ ಅತೃಪ್ತರು ಈಗಾಗಲೇ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಲಿರುವದಾಗಿ ಘೋಷಿಸಿದ್ದಾರೆ. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಆಯ್ಕೆ ಮಾಡಿಕೊಳ್ಳಲಿರುವ ಹಾದಿ; ಅತೃಪ್ತರ ನಡೆ ಕೂಡ ಜನವಲಯದಲ್ಲಿ ಅಚ್ಚರಿಗೆ ಎಡೆಮಾಡಿದಂತಾಗಿದೆ.