ಸೋಮವಾರಪೇಟೆ,ಜು.28: ಕಳೆದ ತಾ. 20 ರಿಂದ ಇಂದಿನವರೆಗೆ ಮಲೇಶಿಯಾದಲ್ಲಿ ನಡೆದ ಮೇಲಕ ಕಬಡ್ಡಿ ವಿಶ್ವಕಪ್ 2019 ಪಂದ್ಯಾವಳಿಯಲ್ಲಿ ಭಾರತ ತಂಡ ವಿಜಯಶಾಲಿಯಾಗಿದ್ದು, ಚೊಚ್ಚಲ ಮೇಲಕ ಕಬಡ್ಡಿ ವಿಶ್ವಕಪ್‍ನ್ನು ತನ್ನ ಮುಡಿಗೇರಿಸಿಕೊಂಡಿದೆ.ಇದರೊಂದಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಕೊಡಗಿನ ಕಬಡ್ಡಿ ಪಟು ಹೊಟ್ಟೆಯಂಡ ಸಚಿನ್ ಪೂವಯ್ಯ ಅವರು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಬೆಸ್ಟ್ ಡಿಫೆಂನ್ಸಿವ್ ಪ್ಲೇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ತಾಲೂಕಿನ ಗೋಣಿಮರೂರು ಗ್ರಾಮದ ಯುವ ಕಬಡ್ಡಿ ಆಟಗಾರ ಸಚಿನ್ ಪೂವಯ್ಯ ಅವರು ಕಳೆದ ಬಾರಿ ದೇಶದ ಪ್ರತಿಷ್ಠಿತ ಪ್ರೊ ಕಬ್ಬಡ್ಡಿ ಲೀಗ್ ಮಾದರಿಯಲ್ಲಿ ನಡೆದ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ನಲ್ಲಿ ಪುಣೆ ಫ್ರೈಡ್ ತಂಡದ ಪರ ಆಟವಾಡಿ ಗಮನ ಸೆಳೆದಿದ್ದರು.ಇದೀಗ ವಿಶ್ವದ 12 ರಾಷ್ಟ್ರಗಳು (ಮೊದಲ ಪುಟದಿಂದ) ಭಾಗವಹಿಸಿದ್ದ ಮೇಲಕ ಕಬಡ್ಡಿ ವಿಶ್ವಕಪ್ ಪಂದ್ಯಾಟದಲ್ಲಿ ಮಿಂಚುವ ಮೂಲಕ ವೈಯುಕ್ತಿಕ ಪ್ರಶಸ್ತಿಯನ್ನೂ ಸಂಪಾದಿಸಿರುವ ಸಚಿನ್, ಗೋಣಿಮರೂರು ಗ್ರಾಮದ ಪೂವಯ್ಯ.ಹೆಚ್.ಎಸ್ ಮತ್ತು ಸರಸು ಹೆಚ್.ಪಿ ದಂಪತಿಯ ಪುತ್ರ. ಬಾಲ್ಯದಿಂದಲೇ ಕಬಡ್ಡಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಸಚಿನ್, ತಮ್ಮ ವಿದ್ಯಾಭ್ಯಾಸವನ್ನು ಸೋಮವಾರಪೇಟೆ ಹಾಗೂ ಕುಶಾಲನಗರದಲ್ಲಿ ಮುಗಿಸಿದ ನಂತರ ಸೋಮವಾರಪೇಟೆಯ ಸತ್ಯ ಸ್ಪೋಟ್ಸ್ ಕ್ಲಬ್‍ನಲ್ಲಿ ಕಬಡ್ಡಿ ತಂಡದ ಸದಸ್ಯರಾದರು. ಕ್ಲಬ್ ನ ದೈಹಿಕ ಶಿಕ್ಷಣ ಶಿಕ್ಷಕ ಕೆ.ಬಿ.ಸತೀಶ್ ಅವರ ಬಳಿ ತರಬೇತಿಯನ್ನು ಪಡೆಯುವ ಮೂಲಕ ಸತ್ಯ ಸ್ಪೋಟ್ಸ್ ಕ್ಲಬ್ ಕಬಡ್ಡಿ ತಂಡದಲ್ಲಿ ಪಾಲ್ಗೊಂಡು ವಿವಿಧ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಉತ್ತಮ ಆಟಗಾರರಾಗಿ ರೂಪುಗೊಂಡರು.