(ವರದಿ : ಕೆ. ಕೆ. ನಾಗರಾಜಶೆಟ್ಟಿ.)

ಕೂಡಿಗೆ, ಜು. 29 : ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯ್ತಿಯ ಹುದುಗೂರು ಮೀಸಲು ಅರಣ್ಯದ ಸಮೀಪ ಸೀಗೆಹೊಸೂರಿನಲ್ಲಿರುವ 1965 ರಲ್ಲಿ ತೋಟಗಾರಿಕಾ ಇಲಾಖೆಯ ಕ್ಷೇತ್ರವು ಆರಂಭವಾಗಿ ರಾಜ್ಯ ಸರ್ಕಾರದ ಅಧೀನದಲ್ಲಿ ತೋಟಗಾರಿಕಾ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ. ಅಂದು ಸರ್ಕಾರ 100 ಎಕರೆ ಜಾಗವನ್ನು ತೋಟಗಾರಿಕಾ ಇಲಾಖೆಗೆ ಗುರುತಿಸಿತ್ತು. ಆದರೆ, ಆ 100 ಎಕರೆ ಪ್ರದೇಶವು ದಾಖಲಾತಿಯಲ್ಲಿ ಮಾತ್ರ ದಾಖಲಾಗಿದ್ದು, ಪ್ರಸ್ತುತ 17 ಎಕರೆ ಪ್ರದೇಶ ಮಾತ್ರ ಇರುವದು ಕಂಡುಬರುತ್ತಿದೆ.

100 ಎಕರೆ ಪ್ರದೇಶದಲ್ಲಿ ಸಮೀಪದಲ್ಲಿರುವ ಮೀಸಲು ಅರಣ್ಯ ಇಲಾಖೆಯ ಒತ್ತುವರಿ ಮಾಡಿಕೊಂಡು, ಅರಣ್ಯ ಸಸಿಗಳನ್ನು ನೆಡುತ್ತಿರುವದು ಕಂಡುಬರುತ್ತಿದೆ. ರಾಜ್ಯ ಸರ್ಕಾರದಿಂದ ತೋಟಗಾರಿಕಾ ಇಲಾಖೆಗಳ ಸಹಾಯಕ ನಿರ್ದೇಶಕರ ನೇಮಕಾತಿಯಾಗದೆ ಮತ್ತು ಹಣ ಬಿಡುಗಡೆಯಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ ತೋಟಗಾರಿಕಾ ಕ್ಷೇತ್ರವು ಅಭಿವೃದ್ಧಿ ಹೊಂದದೆ ಕಾಡುಮಾಯವಾಗಿತ್ತು. ಇದೀಗ ರಾಜ್ಯ ಸರ್ಕಾರವು ಹಾರಂಗಿಯ ಅಧೀನಕ್ಕೆ ಬರುವ ಹಾರಂಗಿ ಮತ್ತು ಸೀಗೆಹೊಸೂರು ತೋಟಗಾರಿಕಾ ಕ್ಷೇತ್ರಕ್ಕೆ ಸಹಾಯಕ ತೋಟಗಾರಿಕಾ ನಿರ್ದೇಶಕರ ನೇಮಕ ಮಾಡಿ, ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆ ಮಾಡಿರುವದರಿಂದ ಈಗಿರುವ 17 ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಸಸ್ಯ ಕ್ಷೇತ್ರ ನಿರ್ಮಾಣವಾಗಿದೆ.

2017-18ರಲ್ಲಿ ನೇಮಕಗೊಂಡ ಅಧಿಕಾರಿ ವರದರಾಜ್ ಅವರ ಪ್ರಯತ್ನದಲ್ಲಿ ಸರ್ಕಾರಕ್ಕೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಕ್ರಿಯಾಯೋಜನೆ ಕಳುಹಿಸಿದ ಹಿನ್ನೆಲೆಯಲ್ಲಿ, ಅಭಿವೃದ್ಧಿ ಮತ್ತು ನಿರ್ವಹಣೆಗೆ ಮೊದಲ ಕಂತಿನಲ್ಲಿ ರೂ.3 ಲಕ್ಷ ಮಂಜೂರಾಗಿ ಆ ಹಣದಲ್ಲಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸೇರಿ, ಪಾಳು ಬಿದ್ದಿದ್ದ ತೋಟಗಾರಿಕಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಮುಂದಾದ ಹಿನ್ನೆಲೆಯಲ್ಲಿ ಇದೀಗ ತೋಟಗಾರಿಕಾ ಕ್ಷೇತ್ರವು ಸಸ್ಯ ಕ್ಷೇತ್ರವಾಗಿ ಆಕರ್ಷಿಸುತ್ತಿದೆ.

2018-19ನೇ ಸಾಲಿನಲ್ಲಿ ರೂ. 33 ಲಕ್ಷ ಬಿಡುಗಡೆಯಾಗಿ ಈ ಅನುದಾನದಲ್ಲಿ ತೋಟಗಾರಿಕಾ ಕ್ಷೇತ್ರವನ್ನು ವಿವಿಧ ಹಂತಗಳಲ್ಲಿ ಅಭಿವೃದ್ಧಿ ಪಡಿಸಲು ಕ್ರಿಯಾಯೋಜನೆಯ ಅಡಿಯಲ್ಲಿ ಕಾಮಗಾರಿಗಳನ್ನು ಕೈಗೊಂಡು ಹೊಸ ಟ್ರಾನ್ಸ್‍ಫಾರಂ ಅನ್ನು ಅಳವಡಿಸಿಕೊಳ್ಳುವದರ ಮೂಲಕ ಪ್ರಮುಖವಾಗಿ ಬೇಕಿರುವ ನೀರಿನ ಸೌಕರ್ಯಕ್ಕೆ ಎರಡು ಕೊಳವೆ ಬಾವಿಗಳನ್ನು ಕೊರೆಸಿ ನೀರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವದರ ಮೂಲಕ ಸಸ್ಯಕ್ಷೇತ್ರದ ಪ್ರಗತಿಗೆ ಪ್ರಥಮ ಹೆಜ್ಜೆ ಇರಿಸಿದ್ದಾರೆ. ನಂತರ ಸಮೀಪ ದಲ್ಲಿರುವ ಹುದುಗೂರು ಮೀಸಲು ಅರಣ್ಯದಿಂದ ಕಾಡಾನೆ ಹಾವಳಿ ಯಿಂದ ಮೊದಲು ಬೆಳೆಸಲಾದ ಸೀಬೆ, ಮಾವು ಮರಗಳು ಹಾಳಾಗಿದ್ದರಿಂದ ಆನೆಗಳು ಸಸ್ಯಕ್ಷೇತ್ರಕ್ಕೆ ಲಗ್ಗೆ ಇಡದಂತೆ 17 ಎಕರೆ ಪ್ರದೇಶದ ಸುತ್ತಲೂ ಕಂದಕವನ್ನು ತೋಡಿಸಿ, ಸೋಲಾರ್ ಬೇಲಿ ಅಳವಡಿಸಲಾಗಿದೆ. ಈ ಕ್ಷೇತ್ರಕ್ಕೆ ತೆರಳಲು ರಸ್ತೆಯೇ ಇರದೆ ಕಾಲುದಾರಿಯಂತಿದ್ದ ರಸ್ತೆಯನ್ನು ಅಭಿವೃದ್ಧಿ ಪಡಿಸುವದರ ಜೊತೆಗೆ ಕ್ಷೇತ್ರದ ಮುಂಭಾಗದಲ್ಲಿ ಹರಿಯುವ ಕಕ್ಕೆಹೊಳೆಗೆ ಇಲಾಖೆ ವತಿಯಿಂದ ಕಿರು ಸೇತುವೆಯನ್ನು ನಿರ್ಮಿಸಿ, ಕ್ಷೇತ್ರದೊಳಗೆ ವಾಹನಗಳು ತೆರಳಲು ಅನುಕೂಲ ಮಾಡಲಾಗಿದೆ.

ಈ ಕ್ಷೇತ್ರದಲ್ಲಿ ಇದೀಗ ಅಲಹಬಾದ್ ಸೀಬೆ, 7.5 ಎಕರೆ ಪ್ರದೇಶದಲ್ಲಿ ತೆಂಗು, ಪಾಲಿಹೌಸ್, 1 ಎಕರೆ ಪ್ರದೇಶದಲ್ಲಿ ಕೊಡಗು ಕಿತ್ತಳೆ ಅಭಿವೃದ್ಧಿಗೆ ಸಸಿಗಳನ್ನು ಬೆಳೆಸಲಾಗುತ್ತಿದೆ. ಜಿಲ್ಲಾ ಪಂಚಾಯ್ತಿಯ ನಿಯಮಾನುಸಾರ ಈ ಕ್ಷೇತ್ರದಲ್ಲಿ ಬೆಳೆಸಲಾದ ಕಾಳು ಮೆಣಸು ಬಳ್ಳಿಗಳನ್ನು ಹಾಗೂ ಇನ್ನಿತರ ಗಿಡಗಳನ್ನು ರೈತರಿಗೆ ಮತ್ತು ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಇದರಿಂದ ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷ ಸಸ್ಯಗಳ ಮಾರಾಟದಿಂದ ಬಂದ ರೂ. 4.5 ಲಕ್ಷ ಆದಾಯವನ್ನು ಸರ್ಕಾರಕ್ಕೆ ಸಂದಾಯ ಮಾಡಲಾಗುತ್ತಿದೆ. ಈಗಾಗಲೇ ಕ್ಷೇತ್ರದಲ್ಲಿ ಕಾಡಾನೆಗಳಿಂದ ಹಾನಿಗೊಳಾಗಿದ್ದ ತೆಂಗಿನ ಫಸಲನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಲ್ಲಿ ತೆಂಗು ಮತ್ತು ಸೀಬೆ ಬೆಳೆಗೆ ಮಣ್ಣಿನ ಪರೀಕ್ಷೆಯ ಫಲಿತಾಂಶದ ಪ್ರಕಾರ ಈ ಕ್ಷೇತ್ರದಲ್ಲಿ 1200 ತೆಂಗಿನ ಸಸಿಗಳನ್ನು ಬೆಳೆಸಲಾಗುತ್ತಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಮತ್ತು ಸಹಕಾರ ಸಿಗುತ್ತಿರುವದರಿಂದ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿಸಲು ಈ ಕ್ಷೇತ್ರದ ಸಹಾಯಕ ನಿರ್ದೇಶಕ ವರದರಾಜ್ ಪ್ರಯತ್ನಿಸುತ್ತಿದ್ದಾರೆ.

ಸಿಬ್ಬಂದಿಗಳ ಕೊರತೆ : ತೋಟಗಾರಿಕಾ ಸಹಾಯಕ ಸಿಬ್ಬಂದಿ ಹುದ್ದೆ, ಮತ್ತು ಸಿಬ್ಬಂದಿಗಳ ಕೊರತೆ ಇದ್ದು, ಈ ಖಾಲಿ ಹುದ್ದೆಗಳಿಗೆ ನೇಮಕವಾದಲ್ಲಿ ಕ್ಷೇತ್ರದ ಅಭಿವೃದ್ಧಿ ಪಡಿಸಲು ಹೆಚ್ಚು ಸಹಕಾರಿಯಾಗುತ್ತದೆ ಎಂದು ಕ್ಷೇತ್ರದ ಅಧಿಕಾರಿಗಳು ತಿಳಿಸಿದ್ದಾರೆ. ಸಹಾಯಕ ನಿರ್ದೇಶಕರನ್ನು ಮಾತನಾಡಿಸಿದಾಗ, ತೋಟಗಾರಿಕಾ ಇಲಾಖೆಯ ರಾಜ್ಯ ಸರ್ಕಾರದ ಅಧೀನದಲ್ಲಿ ಬರುವ ಹಾರಂಗಿ ಮತ್ತು ಸೀಗೆಹೊಸೂರು ತೋಟಗಾರಿಕಾ ಕ್ಷೇತ್ರವನ್ನು ಮಾದರಿ ಕ್ಷೇತ್ರಗಳನ್ನಾಗಿಸಲು ಸರ್ಕಾರ ಮತ್ತು ಸಿಬ್ಬಂದಿಗಳ ಸಹಕಾರದಿಂದ ಪ್ರಯತ್ನಿಸಲಾಗುತ್ತಿದೆ. ಸೀಗೆಹೊಸೂರು ತೋಟಗಾರಿಕಾ ಕ್ಷೇತ್ರವು 1965ರಿಂದಲೂ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ನಿರ್ವಹಣೆಯಿಲ್ಲದೆ ಪಾಳುಬಿದ್ದಂತಿತ್ತು. ಇದೀಗ ಅನುದಾನ ಬಿಡುಗಡೆಯಿಂದ ಮಾದರಿ ತೋಟವನ್ನಾಗಿಸಲು ಮುಂದಾಗಿದ್ದೇವೆ ಎಂದು ವರದರಾಜ್ ತಿಳಿಸಿದ್ದಾರೆ.