ಕೂಡಿಗೆ, ಜು. 29 : ಹಾರಂಗಿ ಅಣೆಕಟ್ಟೆಯಿಂದ ನಾಲೆಗಳಿಗೆ ಈಗಾಗಲೇ ನೀರನ್ನು ಹರಿಬಿಡ ಲಾಗಿದೆ. ರಾಜ್ಯ ಸರ್ಕಾರ ಮತ್ತು ಕಾವೇರಿ ನೀರಾವರಿ ಮಂಡಳಿಯು ಕಳೆದ ವಾರ ಬೆಂಗಳೂರಿನಲ್ಲಿ ತೀರ್ಮಾನ ಕೈಗೊಂಡು ದನಕರು ಗಳಿಗೆ ಮತ್ತು ಕೆರೆ ಕಟ್ಟೆಗಳು ತುಂಬಲು ಹಾರಂಗಿ ಅಣೆಕಟ್ಟೆ ಯಿಂದ 500 ಕ್ಯೂಸೆಕ್ ನೀರನ್ನು ಹರಿಸಲು ಆದೇಶಿದ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಯಿಂದ ಅಧಿಕಾರಿಗಳು ಮುಖ್ಯ ನಾಲೆಗೆ 500 ಕ್ಯೂಸೆಕ್ ನೀರನ್ನು ಹರಿಬಿಟ್ಟಿರುತ್ತಾರೆ. ಮೇಲಾಧಿಕಾರಿಗಳ ಆದೇಶದಲ್ಲಿ ಹಾರಂಗಿ ಅಚ್ಚುಕಟ್ಟು ಪ್ರದೇಶದ ಮುಖ್ಯ ನಾಲೆಗೆ ದನಕರುಗಳಿಗೆ ಮತ್ತು ಕೆರೆಕಟ್ಟೆಗಳಿಗೆ ಮಾತ್ರ ನೀರನ್ನು ಹರಿಸಲಾಗಿದೆ.

ಜಿಲ್ಲೆಯಲ್ಲಿ ಈ ಭಾರಿ ಮಳೆ ಪ್ರಮಾಣ ತೀರಾ ಕಡಿಮೆಯಾಗಿದ್ದು, ಹಾರಂಗಿ ನೀರನ್ನು ನಂಬಿ ರೈತರ ಭತ್ತದ ಮಡಿಗಳನ್ನು ಸಿದ್ಧಪಡಿಸಿ ಕೊಂಡು ನಾಟಿ ಮಾಡಲು ಹಾರಂಗಿ ಯಿಂದ ನೀರನ್ನು ಬಿಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದರೂ, ಅಧಿಕಾರಿಗಳು ಭತ್ತದ ಕೃಷಿ ಮಾಡಲು ನೀರನ್ನು ಬಿಡದಿರುವದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಸಿದ್ಧಪಡಿಸಿರುವ ಭತ್ತದ ಮಡಿ ಗಳು ಗದ್ದೆಯಲ್ಲಿಯೇ ಒಣಗಿ ಹೋಗುತ್ತಿದ್ದು ರೈತರು ಆತಂಕದಲ್ಲಿದ್ದಾರೆ.

ಈ ಬಗ್ಗೆ ಅಧಿಕಾರಿಗಳಿಗೆ ಕೃಷಿ ಮಾಡಲು ನೀರನ್ನು ಹರಿಸಲು ಮನವಿ ಮಾಡಿದರೂ, ನಾವು ಜವಬ್ದಾರರಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವದು ಸಮಂಜಸ ವಾದದ್ದಲ್ಲ ಎಂದು ನೀರು ಬಳಕೆ ದಾರರ ಸಂಘದ ಆರೋಪವಾಗಿದೆ. ಜುಲೈ ಅಂತ್ಯದವರೆಗೆ ರೈತರು ಭತ್ತದ ಬೆಳೆ ಮಾಡಲು ಭತ್ತದ ಬಿತ್ತನೆ ಸಸಿ ಮಡಿಗಳನ್ನು ನಾಟಿ ಮಾಡುವದು ಸಂಪ್ರದಾಯ. ಈ ವ್ಯಾಪ್ತಿಯ ಮಣ್ಣು ತೇವಾಂಶದಿಂದ ಕೂಡಿರುವ ದರಿಂದ ಈಗ ಹರಿಸುತ್ತಿರುವ ನಾಲೆಯ ನೀರಿನ ಮಟ್ಟವು ಸ್ಪಲ್ಪ ಪ್ರಮಾಣದಲ್ಲಿ ನೀರನ್ನು ಕೃಷಿಗೆ ಹರಿಸಿದ್ದಲ್ಲಿ ಸಿದ್ಧ ಮಾಡಿರುವ ಸಸಿ ಮಡಿಗಳಲ್ಲಿ ನಾಟಿ ಮಾಡಲು ಸಹಕಾರಿಯಾಗುತ್ತದೆ. ಇಲ್ಲದಿದ್ದಲ್ಲಿ ನೀರು ಮುಖ್ಯನಾಲೆಯಲ್ಲಿ ಹೆಚ್ಚಾಗಿ ಸೋರಿಕೆಯ ಮೂಲಕ ಹೊಳೆ ಸೇರುತ್ತಿದೆ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಜಲಾನಯನ ಪ್ರದೇಶದ ಪರಿಶೀಲಿಸಿ ಸೋರಿಕೆ ನೀರನ್ನಾದರೂ ಬೇಸಾಯಕ್ಕೆ ಹರಿಸಿ ಅನುಕೂಲ ಮಾಡಿಕೊಡಬೇಕೆಂದು ಈ ವ್ಯಾಪ್ತಿಯ ನೀರು ಬಳಕೆದಾರರ ಸಂಘ ಹಾಗೂ ರೈತರು ಒತ್ತಾಯಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಿದ್ದಾರೆ.