ಮಡಿಕೇರಿ, ಜು. 29: ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಬೀದಳ್ಳಿ ಗ್ರಾಮದಲ್ಲಿ ಗೋ ಶಾಲೆಯೊಂದಿಗೆ ಆಯುರ್ವೇದ ಚಿಕಿತ್ಸಾ ಕೇಂದ್ರ ಆರಂಭಿಸಿರುವ ದಿಸೆಯಲ್ಲಿ ಸುಂಟಿ ಕೊಪ್ಪ ಗ್ರಾ.ಪಂ. ಸದಸ್ಯನೊಬ್ಬ ನಕಲಿ ದಾಖಲೆ ಸೃಷ್ಟಿಸಿರುವದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.
ಕೊಡಗು ಜಿಲ್ಲಾಧಿಕಾರಿ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಬೆನ್ನಲ್ಲೇ ಪೊಲೀಸ್ ಠಾಣಾ ಧಿಕಾರಿ ಎಂ. ಷಣ್ಮುಗಂ ತಂಡ ಪೊಲೀಸ್ ವರಿಷ್ಠಾ ಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗ ದರ್ಶನದಲ್ಲಿ ತನಿಖೆ ಕೈಗೊಂಡಿದ್ದು, ಈ ವೇಳೆ ಗ್ರಾ.ಪಂ. ಸದಸ್ಯ ಹೇಮಂತ್ ಕುಮಾರ್ ಎಂಬಾತನ ಕೈವಾಡ ಪತ್ತೆಯಾಗಿದೆ.ಬೀದಳ್ಳಿಯಲ್ಲಿ ಗೋಶಾಲೆಗೆ ಜಾಗ ಪಡೆದಿರುವ ಕೇರಳ ಮೂಲದ ಆರ್. ಸತ್ಯಜಿತ್, ಅಜಿತ್‍ಕುಮಾರ್ ಹಾಗೂ ಇತರರನ್ನು ಪತ್ತೆ ಹಚ್ಚಿರುವ ಪೊಲೀಸರು ಈ ಮಂದಿಯ ಹೇಳಿಕೆ ಪಡೆದು ಕೊಂಡಿದ್ದಾರೆ. ಆ ಸಂದರ್ಭ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇಲಾಖೆ ಯಿಂದ ಗೋಶಾಲೆ ಆರಂಭಿಸಲು ದಾಖಲಾತಿ ಗಳನ್ನು ಸಿದ್ಧಪಡಿಸಿ ಕೊಡುವದಾಗಿ ಗ್ರಾ.ಪಂ. ಸದಸ್ಯ ಮಧ್ಯಸ್ಥಿಕೆ ವಹಿಸಿಕೊಂಡಿದ್ದಾಗಿ ಗೊತ್ತಾಗಿದೆ. ಆ ಬೆನ್ನಲ್ಲೇ ಗ್ರಾ.ಪಂ. ಸದಸ್ಯನ ಮನೆಗೆ ದಾಳಿ ನಡೆಸಿರುವ ಪೊಲೀಸರು ತಪಾಸಣೆ ನಡೆಸಿದ ಸಂದರ್ಭ; ಆತ ತಲೆಮರೆಸಿಕೊಂಡಿದ್ದು, ಗೋಶಾಲೆ ಆರಂಭಿಸಲು ಸೃಷ್ಟಿಸಿದ್ದ ನಕಲಿ ದಾಖಲೆ ಪತ್ರದ ಪ್ರತಿಗಳು ಹಾಗೂ ಮುದ್ರೆ ಇತ್ಯಾದಿ ಮನೆಯಲ್ಲಿ ಪತ್ತೆಯಾಗಿವೆ. ಈ ಎಲ್ಲವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ ಎಂದು ಗೊತ್ತಾಗಿದೆ.
ಅಲ್ಲದೆ ಜಿಲ್ಲಾಧಿಕಾರಿ ಹೆಸರು ದುರ್ಬಳಕೆ ಪ್ರಕರಣ ಸೇರಿದಂತೆ ಈತನ ವಿರುದ್ಧ ಸಾಕಷ್ಟು ಅಪರಾಧ ಆರೋಪಗಳಿದ್ದು, ಸೆರೆಸಿಕ್ಕ ಬಳಿಕವಷ್ಟೇ ತನಿಖೆಯಿಂದ ಎಲ್ಲವನ್ನು ಬಯಲಿಗೆಳೆಯಲು ಸಾಧ್ಯವೆಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.