ಸೋಮವಾರಪೇಟೆ, ಜು.28: ‘ಬಿ ಕಮ್ ಎ ಫಾರ್ಮರ್ ಫಾರ್ ಎ ಡೇ’ ಎಂಬ ಘೋಷಣೆಯೊಂದಿಗೆ ಇಲ್ಲಿನ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಸೇರಿದಂತೆ ಇನ್ನಿತರ ವಾಣಿಜ್ಯ ನಗರಿಗಳ ಐ.ಟಿ. ಕಂಪೆನಿ ಉದ್ಯೋಗಿಗಳು ಕೆಸರು ಗದ್ದೆಗಿಳಿದು ನಾಟಿ ಮಾಡುವ ಮೂಲಕ ‘ಒಂದು ದಿನದ ರೈತ’ರಾದರು.

ಸೋಮವಾರಪೇಟೆಯ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಕಲ್ಕಂದೂರಿನ ಪುಷ್ಪ ಮತ್ತು ಕುಮಾರ್ ಅವರುಗಳ ಗದ್ದೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉದ್ಯೋಗಿಗಳು ಭಾಗವಹಿಸಿ ನಾಟಿ ಮಾಡುವ ಮೂಲಕ ರೈತರಾದರು.

ಗ್ರಾಮೀಣ ಪ್ರದೇಶದ ಶ್ರಮಜೀವಿಗಳು, ದೇಶದ ಅನ್ನದಾತರ ಜೀವನವನ್ನು ಪರಿಚಯಿಸುವ ನಿಟ್ಟಿನಲ್ಲಿ ಅಸೋಸಿಯೆಷನ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ತಿಳಿಸಿದರು.

ಬೆಂಗಳೂರು ಸೇರಿದಂತೆ ಇನ್ನಿತರ ವಾಣಿಜ್ಯ ನಗರಿಯಲ್ಲಿರುವ ಬೃಹತ್ ಕಂಪೆನಿಯಲ್ಲಿ ಉದ್ಯೋಗ ಮಾಡುತ್ತಿರುವ ಉದ್ಯೋಗಿಗಳಿಗೆ, ತಾನು ಸೇವಿಸುವ ಅಕ್ಕಿಯನ್ನು ಹೇಗೆ ಬೆಳೆಯುತ್ತಾರೆ ಎಂಬದೇ ತಿಳಿದಿರುವದಿಲ್ಲ. ಈ ನಿಟ್ಟಿನಲ್ಲಿ ಭತ್ತ ಬೆಳೆಯುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿ, ಅವರಿಂದಲೇ ನಾಟಿ ಮಾಡಿಸುವ ಮೂಲಕ ಭತ್ತ ಕೃಷಿಯ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ ಎಂದರು.

ಇದರೊಂದಿಗೆ ರೈತರ ಬಗ್ಗೆ ಅಭಿಮಾನ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಇಂದಿನ ಯುವ ಜನಾಂಗ ಕೃಷಿಯಿಂದಲೇ ವಿಮುಖಗೊಳ್ಳುತ್ತಿದ್ದು, ಗ್ರಾಮೀಣ ಭಾಗದಲ್ಲಿ ಹಲವಷ್ಟು ಗದ್ದೆಗಳು ಪಾಳು ಬೀಳುವಂತಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ವತಿಯಿಂದ ಯುವ ಜನಾಂಗಕ್ಕೂ ಕೃಷಿ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶ್ರೀನಿಧಿ ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ 70ಕ್ಕೂ ಅಧಿಕ ಐ.ಟಿ. ಕಂಪೆನಿಗಳ ಉದ್ಯೋಗಿ ಗಳೊಂದಿಗೆ, ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‍ನ ಪದಾಧಿಕಾರಿಗಳು, ಸ್ಥಳೀಯ ರೈತರು ಭಾಗವಹಿಸಿ ನಾಟಿ ಮಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖಾ ಸಹಾಯಕ ನಿರ್ದೇಶಕ ಡಾ. ರಾಜಶೇಖರ್, ಠಾಣಾಧಿಕಾರಿ ಶಿವಶಂಕರ್, ಉದ್ಯಮಿಗಳಾದ ಕೊತ್ನಳ್ಳಿ ಅರುಣ್, ಮಲೆನಾಡ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಯಶ್ವಂತ್ ಬೆಳ್ಳಿಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.

ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‍ನ ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ ಸೇರಿದಂತೆ ಪದಾಧಿಕಾರಿಗಳು ಕಾರ್ಯಕ್ರಮ ಆಯೋಜಿಸಿದ್ದರು.

ಪರಸ್ಪರ ಚರ್ಚೆಯಿಂದ ಸಮಸ್ಯೆಗೆ ಪರಿಹಾರ - ರವಿಶಂಕರ್

ಕುಶಾಲನಗರ, ಜು 28: ಪರಸ್ಪರ ಚರ್ಚೆಗಳ ಮೂಲಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸಾಧ್ಯ ಎಂದು ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಕನ್ನಿಕಾ ಸಭಾಂಗಣದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಮೈಸೂರು ವಿಭಾಗೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಯಾವದೇ ಸಮುದಾಯದಲ್ಲಿ ಸಂಖ್ಯೆ ಮುಖ್ಯವಲ್ಲ. ಸಾಧನೆ ಮುಖ್ಯ. ಅಚಲ ನಿರ್ಧಾರ, ವಿಶ್ವಾಸ, ಶ್ರದ್ಧೆ ಮೂಲಕ ಯಾವದೇ ಗುರಿ ಸಾಧಿಸಬಹುದು. ನೇರ ದಿಟ್ಟ ಆಲೋಚನೆ ಮೂಲಕ ಯಶಸ್ಸು ಗಳಿಸಬಹುದು ಎಂದರು.

ಸಮುದಾಯದ ಪುನರ್ವಸು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಸ್ಥಳೀಯರೇ ಆದ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಯುವಜನಾಂಗ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು.

ಸಮುದಾಯದ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡುವದು ಪೋಷಕರ ಜವಾಬ್ದಾರಿಯಾಗಿದೆ. ಜ್ಞಾನ ಸಂಪಾದನೆಗೆ ಪರಸ್ಪರ ಸಹಾಯ ಅಗತ್ಯ ಎಂದರು. ಸಮುದಾಯದ ಮಕ್ಕಳ ಶೈಕ್ಷಣಿಕ ವ್ಯಾಸಂಗಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವದಾಗಿ ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಹಲವು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ರಾಜ್ಯಾಧ್ಯಕ್ಷ ಆರ್.ಪಿ.ರವಿಶಂಕರ್, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಸಭಾದ ವಿಭಾಗೀಯ ಉಪಾಧ್ಯಕ್ಷ ಕೆ.ಜಿ. ಪಾರ್ಥಸಾರಥಿ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಂಘಟನಾ ಕಾರ್ಯದರ್ಶಿ ಎ.ಆರ್.ರವಿಕುಮಾರ್, ನಿರ್ದೇಶಕರಾದ ಎಸ್.ಎನ್. ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರಪ್ರಸಾದ್, ಜಿಲ್ಲಾ ಕಾರ್ಯದರ್ಶಿ ಸತ್ಯನಾರಾಯಣ, ಮಹಾಸಭಾದ ಸಂಘಟನಾ ಕಾರ್ಯದರ್ಶಿ ಅರಕ್‍ನಾಥ್ ರವಿ ಮಾತನಾಡಿದರು.

ಕುಶಾಲನಗರ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ.ನಾಗೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಗಿಡಗಳನ್ನು ನೀಡುವ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು.

ಸಮಾವೇಶದಲ್ಲಿ 6 ಜಿಲ್ಲೆಗಳ ವಿಭಾಗ ಮಟ್ಟದ 800 ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಾಧಕರಾದ ಕುಶಾಲನಗರದ ಡಾ.ಶಾಂತಲಕ್ಷ್ಮಿ ರವಿಕುಮಾರ್, ಪಪಂ ಸದಸ್ಯರಾದ ಬಿ.ಅಮೃತ್‍ರಾಜ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ನಂತರದ ಕಾರ್ಯಕ್ರಮದಲ್ಲಿ ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿ ವೃತಾನಂದ ಜಿ ಮಹಾರಾಜ್ ಅವರಿಂದ ಸಂಸ್ಕಾರ, ಸೇವೆ ಸಂಘಟನೆ ವಿಷಯದ ಬಗ್ಗೆ ಉಪನ್ಯಾಸ ನಡೆಯಿತು.

ಬೆಳಗ್ಗೆ ಕುಶಾಲನಗರ ಆರ್ಯವೈಶ್ಯ ಮಂಡಳಿಯ ನೂತನ ಸಾಲಿನ ಅಧ್ಯಕ್ಷ ವಿ.ಪಿ.ನಾಗೇಶ್ ಮತ್ತು ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಸಂಜೆ ಆಯೈವೈಶ್ಯ ಮಹಿಳಾ ಮಂಡಳಿ, ಯುವತಿಯರ ಮಂಡಳಿ, ಬಾಲಕಿಯರ ಸಂಘದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆದವು.

ಈ ಸಂದರ್ಭ ಮಂಡಳಿಯ ಉಪಾಧ್ಯಕ್ಷರಾದ ಎಸ್.ಎಂ.ಸತೀಶ್, ಕಾರ್ಯದರ್ಶಿ ಬಿ.ಎಲ್.ಅಶೋಕ್ ಕುಮಾರ್, ಖಜಾಂಚಿ ನಟರಾಜ್ ಮತ್ತು ನಿರ್ದೇಶಕರುಗಳು ಇದ್ದರು. ಸಮ್ಮೇಳನದಲ್ಲಿ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಸೇರಿದಂತೆ ವಿವಿಧ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಪ್ರತಿನಿಧಿಗಳು ಇದ್ದರು.