ಸಿದ್ದಾಪುರ, ಜು. 28: ಒಂಟಿ ಸಲಗವೊಂದು ಕಾರ್ಮಿಕ ಮಹಿಳೆಯ ಮೇಲೆ ದಾಳಿ ನಡೆಸಿದ ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾಲ್ನೂರು ಗ್ರಾಮದಲ್ಲಿ ನಡೆದಿದೆ. ವಾಲ್ನೂರು ಗ್ರಾಮದ ನಿವಾಸಿಯಾಗಿರುವ ಕಲಾವತಿ (55) ಎಂಬವರು ತಮ್ಮ ಮನೆಯಿಂದ ಕೂಲಿ ಕೆಲಸಕ್ಕೆಂದು ತೆರಳುವ ಸಂದರ್ಭದಲ್ಲಿ ಮನೆಯ ಬಳಿಯ ತೋಟವೊಂದರಿಂದ ಒಂಟಿ ಸಲಗವೊಂದು ದಿಢೀರನೆ ಕಲಾವತಿಯವರ ಮೇಲೆ ದಾಳಿ ನಡೆಸಿ ಸೊಂಡಿಲಿನಿಂದ ಎತ್ತಿ ಎಸೆದಿದೆ ಎನ್ನಲಾಗಿದೆ.ಕಾಡಾನೆಯ ದಾಳಿಗೆ ಸಿಲುಕಿದ ಮಹಿಳೆಯ ಬಲ ಕೈಯಿಗೆ ಹಾಗೂ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿದೆ. ಮಹಿಳೆ ಕಿರುಚಿಕೊಂಡಾಗ ಸಮೀಪದ ನಿವಾಸಿಗಳು ಆಗಮಿಸಿ ಗಾಯಗೊಂಡಿದ್ದ ಕಲಾವತಿ ಅವರನ್ನು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಪ್ರಯೋಜನವಾಗದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ವಿಲಾಸ್ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಗಾಯಾಳುವಿ ನೊಂದಿಗೆ ಮೈಸೂರಿಗೆ ತೆರಳಿದ್ದಾರೆ. ವಾಲ್ನೂರು - ತ್ಯಾಗತ್ತೂರು ಭಾಗದಲ್ಲಿ ಮಿತಿ ಮೀರಿದ ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಭಯದಿಂದಲೇ ದಿನ ದೂಡುವಂತಾಗಿದೆ.
- ವಾಸು, ಸುಧಿ