ವೀರಾಜಪೇಟೆ, ಜು. 29: ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇಂದ್ರ ಸಭಾಂಗಣದಲ್ಲಿ ನಡೆಯಿತು.ತಹಶೀಲ್ದಾರ್ ಕೆ.ಪುರಂದರ ರಾಷ್ಟ್ರಧ್ವಜ, ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ನಾಡಧ್ವಜ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ ಪರಿಷತ್ ಧ್ವಜಾರೋಹಣ ಮಾಡಿದರು. ಕಾರ್ಗಿಲ್ ವೀರ ಪೆಮ್ಮಂಡ ಕಾವೇರಪ್ಪ ದ್ವಾರವನ್ನು ಕದನೂರು ಗ್ರಾಮ ಪಂಚಾಯತ್ ಸದಸ್ಯೆ ಪಿ.ಎ. ವಾಣಿ ಸ್ವಾತಂತ್ರ್ಯ ಹೋರಾಟಗಾರ ಕೂವಲೇರ ಸೂಫಿ ಸ್ಮಾರಕ ದ್ವಾರವನ್ನು ತಾ.ಪಂ.ಸದಸ್ಯ ಮಾಳೇಟಿರ ಪ್ರಶಾಂತ್, ಜನಪದ ವೀರ ಮಹಿಳೆ ಅಳಮಂಡ ದೊಡ್ಡವ್ವ ಸ್ಮಾರಕ ದ್ವಾರವನ್ನು ತಾ.ಪಂ. ಸದಸ್ಯೆ ಆಲತಂಡ ಸೀತಮ್ಮ ಉದ್ಘಾಟಿಸಿದರು. 9.30ಕ್ಕೆ ಮಡಿಕೇರಿ - ವೀರಾಜಪೇಟೆ ಮುಖ್ಯ ರಸ್ತೆಯಿಂದ, ಕಳಸಹೊತ್ತ ಹೆಂಗಳೆಯರು, ಕಲಾತಂಡಗಳು, ಮಕ್ಕಳ ಬ್ಯಾಂಡ್ ಸೆಟ್, ಇತ್ಯಾದಿಗಳೊಂದಿಗೆ ಸಮ್ಮೇಳನಾಧ್ಯಕ್ಷೆ ನಾಯಕಂಡ ಬೇಬಿ ಚಿಣ್ಣಪ್ಪ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಶ್ರೀ ಲಿಂಗರಾಜೇಂದ್ರ ಸಭಾಂಗಣಕ್ಕೆ ಕರೆ ತರಲಾಯಿತು. ಮೆರವಣಿಗೆಯನ್ನು ಜಿ.ಪಂ. ಸದಸ್ಯ ವಿಜು ಸುಬ್ರಮಣಿ ಉದ್ಘಾಟಿಸಿದರು.

ಲಿಂಗೈಕ್ಯ ಶ್ರೀ ಶಾಂತಮಲ್ಲ ಸ್ವಾಮಿ ಮುಖ್ಯದ್ವಾರ, (ಸಭಾಂಗಣದ ಮುಂಭಾಗ)ವನ್ನು ಮಾಜಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ ಉದ್ಘಾಟಿಸಿದರು.ಸಾಹಿತಿ ಪುಗ್ಗೇರ ಕರುಂಬಯ್ಯ ಸ್ಮಾರಕ ಪುಸ್ತಕ ಮಳಿಗೆಯನ್ನು ಹಿರಿಯರಾದ ನಾಯಡ ವಾಸು ನಂಜಪ್ಪ, ಲಿಂಗೈಕ್ಯ ದೊಡ್ಡ ಮಹಂತಪ್ಪ ಸ್ವಾಮಿ ಸಭಾಂಗಣವನ್ನು ಕದನೂರು ಗ್ರಾಮ ಪಂಚಾಯ್ ಸದಸ್ಯೆ ಅಲ್ಲಪ್ಪಿರ ಶ್ವೇತಾ, -ಲಿಂಗೈಕ್ಯ ಸೋಮಶೇಖರ ಸ್ವಾಮಿ ವೇದಿಕೆಯ ಉದ್ಘಾಟನೆಯನ್ನು ಜಿ.ಪಂ.ಸದಸ್ಯ ಅಚ್ಚಪಂಡ ಮಹೇಶ್ ಉದ್ಘಾಟಿಸಿದರು.

ಚಿತ್ರಕಲಾವಿದ ಬಿ.ಆರ್. ಸತೀಶ್ ನಾಡಗೀತೆ ಹಾಡುವ ಸಂದರ್ಭ ಕನ್ನಡಾಂಬೆಯ ಚಿತ್ರವನ್ನು ಬಿಡಿಸಿ ಎಲ್ಲರ ಗಮನ ಸೆಳೆದರು.

ಸಭಾ ಕಾರ್ಯಕ್ರಮ

ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆಗೆ 2000 ವರ್ಷಗಳ ಸಾಂಸ್ಕøತಿಕ ಇತಿಹಾಸ ಇದೆ. ಯಾವದೇ ಭಾಷೆಯ ತೀವ್ರತೆ ಹಾಗೂ ಬೆಳವಣಿಗೆ ಆಗಬೇಕಾದರೆ ಹೆಚ್ಚಾಗಿ ನಾವು ಆ ಭಾಷೆಯನ್ನು ಬಳಸಬೇಕು.

(ಮೊದಲ ಪುಟದಿಂದ) ಕನ್ನಡ ಭಾಷೆಯಲ್ಲಿ ಹುಟ್ಟಿ ಬೆಳೆದ ಮಂದಿಯೇ ಕನ್ನಡವನ್ನು ಬಳಸಲು ಹಿಂಜರಿಯುತ್ತಾರೆ. ಜಿಲ್ಲೆಯಲ್ಲಿ 70ರ ದಶಕದಲ್ಲಿ ಅರಮೇರಿ ಮಠಾಧೀಶ ಶಾಂತಮಲ್ಲ ಸ್ವಾಮಿಗಳು ಹುಲ್ಲಿನ ನೆರಿಕೆಯಲ್ಲಿ ಕನ್ನಡದ ಭವನವನ್ನು ನಿರ್ಮಿಸಿ ಕನ್ನಡದ ಬಗ್ಗೆ ಇದ್ದ ವ್ಯಾಮೋಹವನ್ನು ಮೆರೆದಿದ್ದರು.

80ರ ದಶಕದಲ್ಲಿ ಕೇರಳದ ಎರ್ನಾಕುಲಂನಲ್ಲಿ ದಕ್ಷಿಣ ಭಾರತದ ಭಾಷೆಗಳ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಆಯಾಯ ರಾಜ್ಯದಲ್ಲಿ ಶೇ. 90ರಷ್ಟಿದ್ದರೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಶೇ. 30 ರಷ್ಟು ಮಾತ್ರ ಇತ್ತು. ನಮಗೆ ನಮ್ಮ ಭಾಷೆಯ ಬಗ್ಗೆ ಇರುವ ಉಪೇಕ್ಷೆ ಎದ್ದು ಕಾಣುತ್ತಿದೆ. ಇಂಗ್ಲೀಷ್ ಭಾಷೆಯಲ್ಲಿ ವ್ಯಾಸಂಗ ಮಾಡಿದರೆ ಎಲ್ಲವೂ ಸಿಗುತ್ತದೆ ಎಂಬ ಭ್ರಮೆ ನಮ್ಮಲ್ಲಿದೆ. ಕನ್ನಡಕ್ಕಿಂತ ಶ್ರೇಷ್ಠ ಭಾಷೆ ಬೇರೊಂದಿಲ್ಲ. ಸಮ್ಮೇಳನಗಳಲ್ಲಿ ಮಾಡುವ ನಿರ್ಣಯಗಳು ಹಾಗೂ ಠರಾವುಗಳು ಕೇವಲ ಭರವಸೆಗಳಾಗಿಯೇ ಉಳಿದುಕೊಂಡಿವೆ ಎಂದು ಹೇಳಿದರು.

ಸಾಹಿತ್ಯ ಪರಿಷತ್ತಿನ ಜಿಲ್ಲಾಧÀ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ; ನಮ್ಮ ಅವಧಿಯಲ್ಲಿ ಮಕ್ಕಳ ಸಮ್ಮೇಳನ, ಮಹಿಳೆಯರ ಸಮ್ಮೇಳನ, ಕೃಷಿ ಸಮ್ಮೇಳನ ಸೇರಿದಂತೆ 15ನೇ ಸಮ್ಮೇಳನವಾಗಿದೆ. ತಾಲೂಕು ವಿಭಜನೆಗೊಂಡು, ವೀರಾಜಪೇಟೆ ತಾಲೂಕಿನ ಪ್ರಥಮ ಸಮ್ಮೇಳನವಾಗಿದೆ. ಇಡೀ ರಾಜ್ಯಕ್ಕೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿಯೇ ಅತಿ ಹೆಚ್ಚೆಚ್ಚು ಕವಿಗಳು, ಸಾಹಿತಿಗಳು ರೂಪುಗೊಳ್ಳುತ್ತಿದೆ. ಸಾಹಿತ್ಯ ಹಾಗೂ ಸಾಧನೆಗಳು ನಡೆಯುತ್ತಿದೆ. ಪ್ರತಿ ವರ್ಷ ಒಂದೊಂದು ಚುನಾವಣೆಗಳು ಬರುತ್ತಿರುವದರಿಂದ ನೀತಿ ಸಂಹಿತೆಯಿಂದಾಗಿ ಸಮ್ಮೇಳನಗಳು ಮುಂದೆ ಹೋಗುತ್ತಿವೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಮಾತನಾಡಿ ಕನ್ನಡ ಭಾಷೆಯನ್ನು ತಾತ್ಸಾರ ಮಾಡುವದರಿಂದಲೇ ಬೇರೆ ಭಾಷೆಗಳು ಮೇಲ್ದರ್ಜೆಗೆ ಹೋಗುತ್ತಿದೆ. ಅದರಲ್ಲಿ ಇಂಗ್ಲೀಷ್ ಭಾಷೆ ಉಳಿದ ಭಾಷೆಗಳನ್ನು ತಿಂದು ಹಾಕುತ್ತಿದೆ. ಕನ್ನಡದ ಬಗ್ಗೆ ಕೀಳರಿಮೆಯನ್ನು ಬಿಟ್ಟು ಎಲ್ಲರೂ ಮಾತೃಭಾಷೆ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧÀ್ಯಕ್ಷೆ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಸಮ್ಮೇಳನ ಅಧ್ಯಕ್ಷರಿಗೆ ಧ್ವಜ ಹಸ್ತಾಂತರ ಮಾಡಿದರು.

ಸಮ್ಮೇಳದ ಅಧ್ಯಕ್ಷತೆಯನ್ನು ನಾಯಕಂಡ ಬೇಬಿ ಚಿಣ್ಣಪ್ಪ ವಹಿಸಿದ್ದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ, ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಕಾಂತಿ ಸತೀಶ್, ತಾಲೂಕು ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ, ತಾಲೂಕು ಪಂಚಾಯತ್ ಸದಸ್ಯರಾದ ಪ್ರಶಾಂತ್ ಉತ್ತಪ್ಪ, ಆಲತಂಡ ಸೀತಮ್ಮ, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಬಿಇಒ ಶ್ರೀಶೈಲಾ ಬಿಳಗಿ ಮತ್ತಿತರರು ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು, ಸ್ತ್ರೀಶಕ್ತಿ ಸಂಘಟನೆಗಳು ಸಹಕಾರ ನೀಡಿದ್ದವು. ಸಮ್ಮೇಳನಕ್ಕೆ ಸರ್ವರಿಗೂ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದರು.

ಪುಸ್ತಕ ಬಿಡುಗಡೆ

ನಿಕಟಪೂರ್ವ ಅಧÀ್ಯಕ್ಷೆ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ರಚಿಸಿದ ಕಾದಂಬರಿ ಜೀವನ ಚಕ್ರ ಸುಳಿಯಲ್ಲಿ ಮತ್ತು ಮನದ ಮಲ್ಲಿಗೆ ಕವನ ಸಂಕಲನವನ್ನು ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಶಶಿ ಸುಬ್ರಮಣಿ ಬಿಡುಗಡೆಗೊಳಿಸಿದರು.

ಸಾಧಕರಿಗೆ ಸನ್ಮಾನ

ಶತಾಯುಷಿಗಳಾದ ಕಾಣತಂಡ ಬೊಳ್ಯವ್ವ , ಸಾಹಿತ್ಯ ಕ್ಷೇತ್ರದಲ್ಲಿ ಮುಲ್ಲೇಂಗಡ ಬೇಬಿ ಚೋಂದಮ್ಮ, ಸಾಮಾಜಿಕ ಕ್ಷೇತ್ರ ಪುಟ್ಟಿಚಂಡ ಅಯ್ಯಣ್ಣ ಮತ್ತು ಮಾತಂಡ ಕಂಬು ಉತ್ತಯ್ಯ , eನಪದ ಕ್ಷೇತ್ರ ಚಟ್ಟಕುಟ್ಟಡ ಬೆಳ್ಳಿಯಪ್ಪ, ಮತ್ತು ಬೀಕಚಂಡ ನಂಜಪ್ಪ , ಕ್ರೀಡಾ ಕ್ಷೇತ್ರದಲ್ಲಿ ಬಿ.ಬಿ.ಜಾಜಿ, ಕೃಷಿ ಕ್ಷೇತ್ರ ಬಿ.ಕೆ.ರಮೇಶ್ ಹಾಗೂ ಕೆ.ಎ.ಹಂಸ , ಪತ್ರಿಕೋದ್ಯಮ ಡಿ. ಮಂಜುನಾಥ್, ಶಿಕ್ಷಣ ಕ್ಷೇತ್ರ ಪಿ. ಲಕ್ಷ್ಮೀನಾರಾಯಣ್ ಮತ್ತು ಪಿ.ಜಿ. ಪಾರ್ವತಿ, ಸೇವಾ ಕ್ಷೇತ್ರದಲ್ಲಿ ಧರ್ಮಸ್ಥಳ ಜಿಲ್ಲಾ ಯೋಜನಾಧಿಕಾರಿ ಸದಾಶಿವ ಗೌಡ ಅವರನ್ನು ಸನ್ಮಾನಿಸಲಾಯಿತು.