ಮಡಿಕೇರಿ, ಜು. 27: ದಕ್ಷಿಣ ಕೊಡಗಿನ ಕೆ. ಬಾಡಗ ಗ್ರಾಮ ಪಂಚಾಯಿತಿಗೆ ಸೇರಿರುವ ಕಟ್ಟಡವೊಂದನ್ನು ವೀರಾಜಪೇಟೆ ತಾಲೂಕು ಪಂಚಾಯಿತಿ ಮುಖಾಂತರ ಅಲ್ಲಿನ ಮಹಿಳಾ ಕ್ಲಬ್‍ವೊಂದಕ್ಕೆ ಭೋಗ್ಯಕ್ಕೆ ನೀಡಿರುವ ಪ್ರಸಂಗ ಬಹಿರಂಗಗೊಂಡಿದೆ. ಹೀಗಾಗಿ ಪ್ರಸಕ್ತ ಕೆ. ಬಾಡಗ ಗ್ರಾಮ ಪಂಚಾಯಿತಿಯ ದೈನಂದಿನ ಕೆಲಸ ಕಾರ್ಯಗಳನ್ನು ಖಾಸಗಿ ಕಟ್ಟಡವೊಂದರಲ್ಲಿ ನಡೆಸುವಂತಾಗಿದೆ. ಹೀಗಾಗಿ ಕೆ. ಬಾಡಗ ಗ್ರಾ.ಪಂ. ಬಹುತೇಕ ಕೆಲಸ ಕಾರ್ಯಗಳು ಇಂದು ಕುಟ್ಟ ಚೂರಿಕಾಡುವಿನ ರಸ್ತೆ ಬದಿಯ ತೋಟದೊಳಗೆ ಇರುವ ಖಾಸಗಿ ಬಾಡಿಗೆ ಕಟ್ಟಡದಲ್ಲಿ ನಡೆಯುವಂತಾಗಿದೆ. ಅಲ್ಲದೆ ಈ ಕಟ್ಟಡಕ್ಕೆ ಮಾಸಿಕ ರೂ. 3 ಸಾವಿರ ಬಾಡಿಗೆ ಪಾವತಿಸಬೇಕಾಗಿದೆ.
ಕಾರಣ ‘ಶಕ್ತಿ’ಗೆ ಲಭಿಸಿರುವ ಮಾಹಿತಿಯಂತೆ ಹಿಂದೆ ಮಂಡಲ ಪಂಚಾಯಿತಿಯಾಗಿದ್ದ ಸಂದರ್ಭ ಕೆ. ಬಾಡಗ ಕೇಂದ್ರ ಸ್ಥಳವಿದ್ದು ಸ್ವಂತ ಕಟ್ಟಡದಲ್ಲಿ ಕೆಲಸ ಕಾರ್ಯಗಳ ನಿರ್ವಹಣೆಯಾಗುತ್ತಿತ್ತು. ಗ್ರಾಮ ಪಂಚಾಯಿತಿಗಳಾಗಿ ಪುನರ್ವಿಂಗ ಡಣೆ ವೇಳೆ ಗ್ರಾ.ಪಂ. ಕೇಂದ್ರ ಕುಟ್ಟ ದಲ್ಲಿ ಸ್ಥಾಪಿತಗೊಳ್ಳುವಂತಾಯಿತು.
ಈ ಸಂದರ್ಭ ಅಂದಿನ ವೀರಾಜಪೇಟೆ ತಾ.ಪಂ.ನಿಂದ ಕೆ. ಬಾಡಗದ ಖಾಲಿ ಕಟ್ಟವನ್ನು ರಾಜಕೀಯ ಪ್ರಭಾವ ಬಳಸಿ ಅಲ್ಲಿನ
(ಮೊದಲ ಪುಟದಿಂದ) ಮಹಿಳಾ ಸಂಘವನ್ನು ತಾತ್ಕಾಲಿಕವಾಗಿ ಪಡೆದುಕೊಂಡಿದೆ. ಅನಂತರದಲ್ಲಿ 10 ವರ್ಷಗಳಿಗೆ ಕಟ್ಟಡ ಬಳಸಿಕೊಳ್ಳಲು ಒಡಂಬಡಿಕೆ ಮಾಡಿಕೊಂಡಿದೆ. ಈಗ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ನಾಲ್ಕಾರು ಗ್ರಾಮ ಪಂಚಾಯಿತಿಗಳು ನೂತನವಾಗಿ ಅಸ್ತಿತ್ವಕ್ಕೆ ಬರುವಂತಾಗಿದ್ದು, ಈ ಪೈಕಿ ಕೆ. ಬಾಡಗ ಪಂಚಾಯಿತಿ ಕೂಡ ಒಂದಾಗಿದೆ. ಆದರೆ ಈ ಹಿಂದೆ ಹೊಂದಿ ಕೊಂಡಿರುವ ಈ ಕಟ್ಟಡವನ್ನು ಮಹಿಳಾ ಸಂಘ ಹಿಂತಿರುಗಿಸದೆ ವಿವಾದ ಹುಟ್ಟಿಕೊಂಡಿದೆ.
ಗ್ರಾಮಸ್ಥರ ಅಸಮಾಧಾನ: ಇತ್ತೀಚೆಗೆ ಕೆ. ಬಾಡಗ ಗ್ರಾಮ ವ್ಯಾಪ್ತಿಯ ಚೂರಿಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಜಿ.ಪಂ. ಅಧ್ಯಕ್ಷರ ಸಮ್ಮುಖದ ಸಭೆಯಲ್ಲಿ ಗ್ರಾಮಸ್ಥರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತಮಗೆ ಗ್ರಾ.ಪಂ. ಕಚೇರಿ ಇಲ್ಲದೆ ಖಾಸಗಿ ವ್ಯಕ್ತಿಯೊಬ್ಬರ ತೋಟದೊಳಗೆ ಕೆಲಸ ಕಾರ್ಯನಿರ್ವಹಿಸಲು ಮುಜುಗರ ಪಡುವಂತಾಗಿದೆ ಎಂದು ಸ್ವತಃ ಗ್ರಾ.ಪಂ. ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಾ; ಪಂಚಾಯಿತಿ ಕಟ್ಟಡವನ್ನು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಹಿಸುವಂತೆ ಒತ್ತಾಯಿಸಿದರು.
ಈ ಬಗ್ಗೆ ವೀರಾಜಪೇಟೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಗಮನ ಸೆಳೆದು ಅಗತ್ಯ ಕ್ರಮವಹಿಸಲಾ ಗುವದು ಎಂದು ಅಧ್ಯಕ್ಷರು ಭರವಸೆ ನೀಡಿದರು.
ಗ್ರಾಮಸ್ಥರ ಆಕ್ರೋಶ: ಅಲ್ಲಿನ ಗ್ರಾ..ಪಂ. ಅಧ್ಯಕ್ಷೆ ಕೆ.ಎಂ. ಉಷಾ, ಮಾಜಿ ಸದಸ್ಯ ಅನಿಲ್ ಉತ್ತಪ್ಪ, ಜಿ. ರಾಜ ಮೊದಲಾದವರು ಮಾತನಾಡಿ, ಗ್ರಾ.ಪಂ. ಅಧ್ಯಕ್ಷರ ಹೆಸರಿನಲ್ಲಿ ಆರ್.ಟಿ.ಸಿ. ಸಹಿತ ಪ್ರತ್ಯೇಕ ಜಾಗ ಕೂಡ ಇದ್ದರೂ, ಸ್ಥಳಾಭಾವದಿಂದ ಗ್ರಾಮ ಸಭೆಗಳನ್ನು ನಡೆಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿ.ಪಂ. ಪ್ರತಿನಿಧಿಗಳು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರಾನ್ಸ್ ಅವರಿಗೆ ಸೂಚನೆ ನೀಡಿ, ತಕ್ಷಣ ಗ್ರಾಮ ಸಭೆ ಆಯೋಜಿಸಿ ಜನತೆಯ ಕುಂದು ಕೊರತೆ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲು ತಿಳಿ ಹೇಳಿದರು. ಅಲ್ಲದೆ ಈ ಪ್ರದೇಶಗಳಲ್ಲಿ ವಿಪರೀತ ಕಾಡಾನೆ ಹಾವಳಿ ನಡುವೆ ಸಾರಿಗೆ ವ್ಯವಸ್ಥೆಯೂ ಇಲ್ಲದೆ, ಸಂಜೆ ವೇಳೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಶಾಲಾ-ಕಾಲೇಜು ಮಕ್ಕಳ ತಿರುಗಾಟ ಸಹಿತ ಮನೆಗಳಿಂದ ಹೊರ ಬರಲು ಭಯದ ವಾತಾವರಣ ಇರುವದಾಗಿ ಬೊಟ್ಟು ಮಾಡಿದರು.
ಅರಣ್ಯ ಇಲಾಖೆಯಿಂದ ಸೂಕ್ತ ಕ್ರಮದೊಂದಿಗೆ, ಬಸ್ ವ್ಯವಸ್ಥೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆಯಲಾಗುವದು ಎಂದು ಭರವಸೆ ನೀಡಲಾಯಿತು. ಗ್ರಾ.ಪಂ. ಅಧಿಕಾರಿ ಪ್ರಾನ್ಸ್ ವಂದಿಸಿದರು.