ಮಡಿಕೇರಿ, ಜು.27: ಕೊಡಗಿನ ಕಕ್ಕಡ ಮಾಸದಲ್ಲಿ ಮಳೆ ಹಾಗೂ ಚಳಿಯ ನಡುವೆ (ಆಟಿಮಾಸ) ಆಹಾರವಾಗಿ ಮಾಂಸಾಹಾರಿಗಳು ಏಡಿಯನ್ನು (ಞಂಡ್) ಭಕ್ಷಿಸುವದು ವಿಶೇಷ. ವರ್ಷಂಪ್ರತಿ ಮಳೆಗಾಲದ ಈ ಸಂದರ್ಭ ಸಸ್ಯಾಹಾರಿಗಳು ಕಣಿಲೆ, ಕೆಸು, ಮರಕೆಸು ಇತ್ಯಾದಿಯನ್ನು ಉಷ್ಣಕಾರಕ ಪದಾರ್ಥವಾಗಿ ಯಥೇಚ್ಛ ಬಳಸುತ್ತಾರೆ.

ಅಂತೆಯೇ ಮಾಂಸಾಹಾರಿಗಳು ಕೋಳಿ, ಏಡಿ ಮುಂತಾದ ಭಕ್ಷ್ಯವನ್ನು ಸವಿಯುತ್ತಾರೆ. ಅಲ್ಲದೆ ‘ಕಕ್ಕಡ ಸೊಪ್ಪು’ ಎಂಬ ಖ್ಯಾತಿಯ ಔಷಧಿಯ ಗುಣವುಳ್ಳ ಗಿಡದ ದಂಟು ಹಾಗೂ ಎಲೆಗಳನ್ನು ಬೇಯಿಸಿ, ಆ ಮೂಲಕ ಅನ್ನ, ಪಾಯಸ, ಹಿಟ್ಟು ತಯಾರಿಸಿ ಮೆಲ್ಲುತ್ತಾರೆ. ಈಗ ಮಡಿಕೇರಿಯಲ್ಲಿ ಕಕ್ಕಡ ಏಡಿಗೆ ಭಾರೀ ಬೇಡಿಕೆಯಿದ್ದು, ಬಸ್ ನಿಲ್ದಾಣ ಬಳಿ ಮಾರಾಟದಲ್ಲಿ ತೊಡಗಿರುವ ಕುಮಾರ್ ಕೆ.ಜಿ.ಯೊಂದಕ್ಕೆ ರೂ. 250ರಿಂದ 300ಕ್ಕೆ ಗ್ರಾಹಕರು ಖರೀದಿಸುತ್ತಿದ್ದಾರೆ ಎಂದು ನಗು ಬೀರಿದ್ದಾರೆ.