ಸೋಮವಾರಪೇಟೆ, ಜು.27: ಜಿಲ್ಲೆಯ ಮಟ್ಟಿಗೆ ಅರೇಬಿಕಾ ಕಾಫಿಯ ಕಣಜ ಎಂದೇ ಪ್ರಖ್ಯಾತಿ ಪಡೆದಿರುವ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಬಿಳಿಕಾಂಡಕೊರಕದ ಹಾವಳಿಗೆ ತಡೆಯಿಲ್ಲದಂತಾಗಿದ್ದು, ಕೀಟ ಬಾಧೆಯಿಂದ 10 ರಿಂದ 15 ವರ್ಷದ ಕಾಫಿ ಗಿಡಗಳನ್ನು ಬುಡ ಸಹಿತ ಕೀಳಲಾಗುತ್ತಿದೆ.
23,950 ಹೆಕ್ಟೇರ್ನಲ್ಲಿ ಅರೇಬಿಕಾ: ಕೊಡಗು ಜಿಲ್ಲೆಯಲ್ಲಿ 1,02,525 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದ್ದು, 74,495ಹೆಕ್ಟೇರ್ನಲ್ಲಿ ರೋಬಸ್ಟಾ, 28,030ಹೆಕ್ಟೇರ್ನಲ್ಲಿ ಅರೇಬಿಕಾ ಕಾಫಿ ಬೆಳೆಯಲಾಗುತ್ತಿದೆ. ಸೋಮವಾರಪೇಟೆ ತಾಲೂಕು ಅರೇಬಿಕಾ ಕಾಫಿ ಬೆಳೆಯಲು ಸೂಕ್ತ ಪ್ರದೇಶವಾಗಿ ರುವದರಿಂದ, ಸೋಮವಾರಪೇಟೆ ತಾಲೂಕಿನಲ್ಲಿಯೇ 23,950 ಹೆಕ್ಟೇರ್ನಲ್ಲಿ ಅರೇಬಿಕಾ, 5,890 ಹೆಕ್ಟೇರ್ನಲ್ಲಿ ರೋಬಸ್ಟಾ ಬೆಳೆಯಲಾಗುತ್ತಿದೆ.
ಅರೇಬಿಕಾ ಕಾಫಿ ತೋಟವನ್ನು ವರ್ಷವಿಡೀ ಆರೈಕೆ ಮಾಡಬೇಕಿದ್ದು, ಕಾಲಕಾಲಕ್ಕೆ ತಕ್ಕಂತೆ ಗೊಬ್ಬರ, ಕ್ರಿಮಿನಾಶಕ, ಕಳೆ ತೆಗೆಯುವದು, ನೆರಳು ನಿವಾರಣೆ, ಸುಣ್ಣ ಸಿಂಪರಣೆ ಸೇರಿದಂತೆ ಇನ್ನಿತರ ಕೆಲಸಗಳನ್ನು ನಿರ್ವಹಿಸಬೇಕಿದೆ.
ಅರೇಬಿಕಾ ತೋಟ ಖಾಲಿ ಖಾಲಿ: ಬಿಳಿಕಾಂಡಕೊರಕ ಕೀಟದ ಹಾವಳಿಗೆ ಕಾಫಿ ತೋಟಗಳಲ್ಲಿ ಫಸಲು ನೀಡುವ ಆರೋಗ್ಯವಂತ ಗಿಡಗಳು ನಾಶವಾಗುತ್ತಿವೆ. ರೋಗಬಾಧೆ ಇತರ ಗಿಡಗಳಿಗೂ ಹರಡುತ್ತದೆ ಎಂಬ ಕಾರಣದಿಂದ ರೋಗಪೀಡಿತ ಗಿಡಗಳನ್ನು ಕಿತ್ತು ಸುಡಲಾಗುತ್ತಿರುವ ದರಿಂದ ಅರೇಬಿಕಾ ತೋಟ ಖಾಲಿ ಖಾಲಿಯಾಗುತ್ತಿದೆ.
ಅರೇಬಿಕಾ ಕಾಫಿಗೆ ಬಿಳಿಕಾಂಡ ಕೊರಕ ಕೀಟ ಅತೀ ಬೇಗ ಬಾಧಿಸುತ್ತಿದ್ದು, ಆರೋಗ್ಯವಂತ ಗಿಡಗಳ ಕಾಂಡದೊಳಗೆ ಸೇರಿಕೊಂಡು ಸಂತಾನೋತ್ಪತ್ತಿ ಮಾಡುತ್ತವೆ. ಕಾಂಡದೊಳಗೆ ಕೊರೆಯುವದರಿಂದ ಕೆಲ ದಿನಗಳಲ್ಲಿಯೇ ಆರೋಗ್ಯವಂತ ಗಿಡಗಳು ಒಣಗುತ್ತಿವೆ. ಒಮ್ಮೊಮ್ಮೆ ಬಂಪರ್ ಫಸಲು ಬಿಟ್ಟಿರುವ ಗಿಡಗಳನ್ನೂ ಸಹ ಬೇರು ಸಹಿತ ಕಿತ್ತು ಹಾಕಬೇಕಾದ ಅನಿವಾರ್ಯತೆ ಬೆಳೆಗಾರರಿಗೆ ಒದಗಿದ್ದು, ಕಾಂಡಕೊರಕ ಕೀಟ ಬೆಳೆಗಾರರ ಬದುಕನ್ನೂ ಕೊರೆಯುತ್ತಿದೆ.
ಎಕರೆಯೊಂದರಲ್ಲಿ 700 ರಿಂದ 800 ಕಾಫಿಗಿಡಗಳು ಇದ್ದರೆ, ಅದರಲ್ಲಿ ಫಸಲು ಕೊಡುವ ನೂರು ಗಿಡಗಳು ಕಾಂಡಕೊರಕ ಕೀಟಬಾಧೆಗೆ ತುತ್ತಾಗುತ್ತಿವೆ. ರೋಗಪೀಡಿತ ಗಿಡಗಳನ್ನು ಕಿತ್ತು ಸುಡದಿದ್ದರೆ ಕೀಟಗಳು ಕಾಫಿ ಗಿಡದ ಕಾಂಡವನ್ನು ತಿಂದು ಮುಗಿಸಿದ ನಂತರ
ಬೇರೆ ಆರೋಗ್ಯವಂತ ಗಿಡಗಳಿಗೆ ಸೇರುತ್ತವೆ.
ಫಸಲಿನ ಗಿಡಕ್ಕೆ ಕೀಟ: ಸಾಧಾರಣವಾಗಿ ಬಿಳಿಕಾಂಡಕೊರಕದ ಕೀಟ ಹೆಚ್ಚು ಫಸಲು ಇರುವ ಗಿಡಗಳನ್ನೇ ಬಾಧಿಸುತ್ತಿದೆ. ಕಾಫಿ ಗಿಡದ ಕಾಂಡವನ್ನೇ ಕೊರೆಯುವ ಕೀಟ, ಆ ಗಿಡವನ್ನು ಸಂಪೂರ್ಣವಾಗಿ ಸಾಯಿಸಿ ಮತ್ತೊಂದು ಗಿಡಕ್ಕೆ ಹಾರುತ್ತದೆ. ಇದಕ್ಕೆ ನಿಯಂತ್ರಣ ಹಾಕದೇ ಹೋದರೆ ಒಂದೇ ವರ್ಷದಲ್ಲಿ ನೂರಾರು ಗಿಡಗಳು ನಾಶವಾಗುತ್ತವೆ. 8 ರಿಂದ 10 ವರ್ಷದ ಗಿಡಗಳಿಗೆ ರೋಗ ಬಾಧೆ ತಗುಲಿದರೆ, ಅದನ್ನು ಬುಡ ಸಹಿತ ಕಿತ್ತು, ಹೊಸ ಗಿಡ ಹಾಕಬೇಕು. ಈ ಗಿಡದಿಂದ ಫಸಲು ಪಡೆಯಲು ಕನಿಷ್ಟ 4 ವರ್ಷ ಕಾಯಬೇಕು ಎಂದು ತಣ್ಣೀರುಹಳ್ಳ ಗ್ರಾಮದ ಬೆಳೆಗಾರ ರಾಮ್ಪ್ರಸಾದ್ ಅಭಿಪ್ರಾಯಿಸಿದ್ದಾರೆ.
ಸುಟ್ಟರಷ್ಟೇ ಹತೋಟಿ: ಬಿಳಿಕಾಂಡಕೊರಕ (ಕ್ಸೈಲೋಟ್ರೀಕಸ್ ಕ್ವಾಡ್ರಿಪಸ್) ಅರೇಬಿಕಾ ಕಾಫಿಯನ್ನು ಪೀಡಿಸುವ ಅತೀ ಭಯಂಕರ ಕೀಟವಾಗಿದ್ದು, ಏಪ್ರಿಲ್-ಮೇ ಮತ್ತು ಅಕ್ಟೋಬರ್-ಡಿಸೆಂಬರ್ನಲ್ಲಿ ಕೀಟನಾಶಕವನ್ನು ಸಿಂಪಡಿಸಬೇಕು. ಕೀಟ ಪೀಡಿತ ಗಿಡಗಳನ್ನು ಬುಡಸಹಿತ ಕಿತ್ತು ಸುಟ್ಟು ಹಾಕಬೇಕು. ಈ ಕೆಲಸವನ್ನು ಎಲ್ಲಾ ಬೆಳೆಗಾರರು ಸಾಮೂಹಿಕವಾಗಿ ನಿಗದಿತ ಸಮಯದಲ್ಲಿ ಮಾಡಿದರೆ ರೋಗಬಾಧೆ ಹತೋಟಿ ಸಾಧ್ಯವೆಂದು ತಜ್ಞರು ಅಭಿಪ್ರಾಯಿಸುತ್ತಾರೆ.
ಮೋಹಕ ಬಲೆ ತಂತ್ರಜ್ಞಾನ: ಇತ್ತೀಚಿನ ದಿನಗಳಲ್ಲಿ ಮೋಹಕ ಬಲೆ ತಂತ್ರಜ್ಞಾನದ ಬಳಕೆಯು ಕೀಟ ನಿಯಂತ್ರಣದ ಒಂದು ಭಾಗವಾಗಿದೆ. ವಿಜ್ಞಾನಿಗಳು ಈ ಕಾರ್ಯಕ್ರಮದಡಿ ಯಲ್ಲಿ ಬೋರರ್ ಕೀಟದ ಲೈಂಗಿಕಾ ಕಷರ್Àಕಗಳ (ಫೆರಮೋನ್) ಕುರಿತು ಅಧ್ಯಯನವನ್ನು ನಡೆಸಿದ್ದಾರೆ. ಗಂಡು ಕೀಟದ ಫೆರಮೋನನ್ನು ಕೃತಕವಾಗಿ ತಯಾರಿಸಿ ಹೆಣ್ಣು ಕೀಟವನ್ನು ಆಕರ್ಷಿಸಿ, ಮೋಹಕ ಬಲೆಗೆ ಬೀಳಿಸುವ ತಂತ್ರಜ್ಞಾನ ಇದಾಗಿದೆ. ಹೆಚ್ಚಿನ ಬೆಳೆಗಾರರು ಕಾಫಿ ತೋಟಗಳಲ್ಲಿ ಈ ತಂತ್ರಜ್ಞಾನ ಬಳಸಿ ಕೀಟಬಾಧೆಯನ್ನು ನಿಯಂತ್ರಣಕ್ಕೆ ತಂದಿದ್ದರೂ, ಅಕ್ಕಪಕ್ಕದವರ ತೋಟದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದೇ ಇರುವದರಿಂದ ಸಂಪೂರ್ಣ ಕೀಟ ನಿಯಂತ್ರಣ ಅಸಾಧ್ಯವಾಗಿದೆ.
ಹತೋಟಿಗೆ ಬಾರದ ಬಾಧೆ: ಕಾಫಿ ಬೆಳೆಗಾರರು ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಕೂಡ, ಹವಾಮಾನದ ಬದಲಾವಣೆಯಿಂದ ಬಿಳಿಕಾಂಡ ಕೊರಕದ ರೋಗ ಹೆಚ್ಚುತ್ತಿದೆ. ಕಾಫಿ ತೋಟಗಳಿಗೆ ಬೀಳುವ ಅತಿಯಾದ ಬಿಸಿಲು, ಸಮಯಕ್ಕೆ ಸರಿಯಾಗಿ ಮಳೆ ಬೀಳದಿರುವದು, ಕಾಫಿ ತೋಟಗಳಲ್ಲಿ ಸಾಮೂಹಿಕ ನಿರ್ವಹಣೆಯ ಕೊರತೆಯಿಂದ ಕಾಂಡಕೊರಕ ಕೀಟಗಳ ಹಾವಳಿ ಜಾಸ್ತಿಯಾಗಿದೆ ಎಂದು ತೋಳೂರುಶೆಟ್ಟಳ್ಳಿ ಗ್ರಾಮದ ಬೆಳೆಗಾರ ಕೆ.ಕೆ. ಸುಧಾಕರ್ ಅಭಿಪ್ರಾಯಿಸಿದ್ದಾರೆ.
ಇದೀಗ ಮಳೆಗಾಲವಾಗಿರುವ ದರಿಂದ ಕೀಟ ಪೀಡಿತ ಕಾಫಿ ಗಿಡಗಳನ್ನು ಬುಡ ಸಹಿತ ಕಿತ್ತು ಕೆಲವರು ಸೌದೆಯನ್ನಾಗಿಸಿ ಮಾರಾಟ ಮಾಡುತ್ತಿದ್ದರೆ, ಹಲವಷ್ಟು ಬೆಳೆಗಾರರು ಕಿತ್ತ ಕಾಫಿ ಗಿಡಗಳನ್ನು ತೋಟದಲ್ಲಿಯೇ ಸುಟ್ಟು ಹಾಕುತ್ತಿದ್ದಾರೆ. ಎಲ್ಲಾ ಬೆಳೆಗಾರರು ಸಾಮೂಹಿಕವಾಗಿ ಈ ಕೆಲಸವನ್ನು ಮಾಡದೇ ಇರುವದರಿಂದ ಕೀಟದ ಹಾವಳಿಗೆ ತಡೆ ಇಲ್ಲದಂತಾಗಿದೆ.
ತೋಟದಲ್ಲಿ ನೆರಳು ನಿರ್ವಹಣೆಯಿಂದ ಶೇಕಡ 50ರಷ್ಟು ರೋಗಬಾಧೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಒಂದು ಬ್ಯಾರಲ್ ನೀರಿಗೆ, 20ಕೆ.ಜಿ. ಸುಣ್ಣವನ್ನು ಹಾಕಿ, 250ಗ್ರಾಂ ಡಿಡಿಎಲ್ ಅಂಟು ದ್ರಾವಣವನ್ನು ಬೆರೆಸಿ, ಕಾಂಡಕ್ಕೆ ಲೇಪಿಸಬೇಕು. ಸುಣ್ಣದ ಶಾಖಕ್ಕೆ ಲಾರ್ವ (ಕೋಶಾವಸ್ಥೆಯಲ್ಲಿರುವ ಹುಳು) ಸಾಯುತ್ತವೆ. ಇದರಿಂದಾಗಿ ಹಂತಹಂತವಾಗಿ ಕೀಟಬಾಧೆಯನ್ನು ಹತೋಟಿಗೆ ತರಬಹುದಾಗಿದೆ ಎಂದು ಕಾಫಿ ಮಂಡಳಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
- ವಿಜಯ್ ಹಾನಗಲ್