ಸುಂಟಿಕೊಪ್ಪ, ಜು.27: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಾರ್ಷಿಕ ಸಭೆಗೆ ಗ್ರಾಮ ಪಂಚಾಯಿತಿ ಸದಸ್ಯರುಗಳು ಗೈರಾಗಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತಪಡಿಸಲಾಯಿತು.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ. ಅಧ್ಯಕ್ಷೆ ರೋಜ್‍ಮೇರಿ ರಾಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಾರ್ಷಿಕ ಸಭೆ ನಡೆಯಿತು.
ಕಾರ್ಯದರ್ಶಿ ಎಂ.ಎಸ್. ಸುನಿಲ್ ಅವರು ಕಳೆದ ವರ್ಷ ನಡೆದ ರಾಷ್ಟ್ರೀಯ ಹಬ್ಬಗಳ ಖರ್ಚು ವೆಚ್ಚದ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಅನಂತರ ಮಾತನಾಡಿದ ಕರ್ನಾಟಕ ರಕ್ಷಾಣಾ ವೇದಿಕೆ ಹೋಬಳಿ ಅಧ್ಯಕ್ಷ ನಾಗೇಶ ಪೂಜಾರಿ ಅವರು ಈ ಸಭೆಗೆ ಹಾಜರಾಗಬೇಕಾದ ಬಹುತೇಕ ಸದಸ್ಯರು ಗೈರು ಹಾಜರಾಗಿದ್ದಾರೆ. ರಾಷ್ಟ್ರೀಯ ಹಬ್ಬಕ್ಕೆ ಜನಪ್ರತಿನಿಧಿಗಳಾದವರು ಗೌರವ ನೀಡುತ್ತಿಲ್ಲ ಎಂದು ಆಕ್ಷೇಪಿಸಿದರು. ಗ್ರಾ.ಪಂ. ಸದಸ್ಯರುಗಳು ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಮಾಸಿಕ ಭತ್ಯೆಯನ್ನು ಬಿಟ್ಟು ಕೊಡಬೇಕೆಂದು ಪಿಎಫ್. ಸಬಾಸ್ಟಿನ್ ಸಲಹೆ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪಿಡಿಓ ವೇಣುಗೋಪಾಲ ಗ್ರಾ.ಪಂ. ಸದಸ್ಯರು ಭತ್ಯೆಯನ್ನು ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿಗೆ ದೇಣಿಗೆ ನೀಡಬೇಕೆಂಬ ಸಲಹೆ ಸಮಂಜಸವಲ್ಲ ಅವರುಗಳಿಂದ ಹಬ್ಬ ಆಚರಣೆಗೆ ವಂತಿಗೆಯನ್ನು ಪಡೆದುಕೊಳ್ಳಬಹುದೆಂದು ತಿಳಿಸಿದರು.
ಸಭೆಯಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಎಸ್.ಎನ್.ಜಯರಾಂ, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಗ್ರಾ.ಪಂ. ಸದಸ್ಯರುಗಳಾದ ಸಿ.ಚಂದ್ರ, ನಾಗರತ್ನ ಸುರೇಶ್, ಶಿವಮ್ಮ ಮಹೇಶ್, ಗಿರಿಜಾ ಉದಯಕುಮಾರ್, ಪಿಡಿಓ ವೇಣುಗೋಪಾಲ್, ಕೃಷಿಯಾಧಿಕಾರಿ ಮನಸ್ವಿ ಇದ್ದರು.