*ಗೋಣಿಕೊಪ್ಪಲು, ಜು. 26: ಮನೆಯಲ್ಲಿ ಯಾರು ಇಲ್ಲದ ಸಮಯವನ್ನೇ ಉಪಯೋಗಿಸಿಕೊಂಡ ಕಳ್ಳರು 2 ಲಕ್ಷಕ್ಕೂ ಹೆಚ್ಚು ನಗದು ಹಾಗೂ 84 ಗ್ರಾಂ. ಚಿನ್ನ ದೋಚಿರುವ ಕೃತ್ಯ ಗೋಣಿಕೊಪ್ಪಲು ಪೆÇಲೀಸ್ ಠಾಣೆಯ ವ್ಯಾಪ್ತಿಯ ಚೆನ್ನಂಗೊಲ್ಲಿ ಪೈಸಾರಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ರಾಜಣ್ಣ ಅವರ ಮನೆಯನ್ನು ಕಳ್ಳರು ದೋಚಿದ್ದು, ಮನೆಯಲ್ಲಿದ್ದ ಎರಡು ಲಕ್ಷದ ಆರು ಸಾವಿರ ನಗದು ಮತ್ತು 84 ಗ್ರಾಂ. ಚಿನ್ನ ಕಳ್ಳರ ಪಾಲಾಗಿದೆ.
ಹಾಡಹಗಲಿನಲ್ಲಿ ಈ ಘಟನೆ ನಡೆದಿದೆ. ಮನೆಯ ಮಾಲೀಕ ಹಾಗೂ ಅವರ ಮಕ್ಕಳು ಗೋಣಿಕೊಪ್ಪಲು ಪಟ್ಟಣದಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಮಗ ಹಾಗೂ ತನ್ನ ಗಂಡನಿಗೆ ಮಧ್ಯಾಹ್ನದ ಊಟ ತೆಗೆದುಕೊಂಡು ರಾಜಣ್ಣನವರ ಪತ್ನಿ ಶೋಭಾ ಹಾಗೂ ಸೊಸೆ ಹೊರ ಹೋದ ಸಮಯವನ್ನೇ ಬಳಸಿಕೊಂಡ ಕಳ್ಳರು ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಊಟ ಕೊಟ್ಟು ಸಂಜೆಯ ಹೊತ್ತಿಗೆ ಮನೆಗೆ ಹಿಂದಿರುಗಿ ಮನೆಯ ಬಾಗಿಲು ತೆಗೆಯಲು ಮುಂದಾದ ಸಂದರ್ಭ ಬಾಗಿಲಿನ ಬೀಗ ಮುರಿದಿರುವದು ಗೋಚರಿಸಿದೆ. ಮನೆಯ ಒಳಗೆ ಹೋಗಿ ನೋಡಿದಾಗ ಗೋದ್ರೇಜ್ ಬೀರುವಿನ ಬಾಗಿಲು ಮುರಿದಿರುವ ಕಳ್ಳರು ಹಣ ಹಾಗೂ ಚಿನ್ನದ ಚೈನು, ಉಂಗುರ, ಬಳೆ ಇನ್ನಿತರ ಆಭರಣಗಳನ್ನು ದೋಚಿರುವದು ಕಂಡುಬಂದಿದೆ. ಗಾಬರಿಗೊಂಡ ಮನೆಯ ಮಾಲೀಕರು ತಕ್ಷಣವೇ ಸ್ಥಳೀಯ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಗೋಣಿಕೊಪ್ಪಲು ಪೆÇಲೀಸ್ ಠಾಣಾಧಿಕಾರಿ ಶ್ರೀಧರ್ ಭೇಟಿ ನೀಡಿದ್ದಾರೆ. ಜಿಲ್ಲಾ ಶ್ವಾನ ದಳ, ಬೆಳರಚ್ಚು ತಜ್ಞರ ತಂಡ ಪರಿಶೀಲನೆ ನಡೆಸಿದ್ದಾರೆ. ಪೆÇಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದು, ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ವೃತ್ತ ನಿರೀಕ್ಷಕ ದಿವಾಕರ್ ಮಾಹಿತಿ ನೀಡಿದ್ದಾರೆ.
- ವರದಿ : ಎನ್.ಎನ್. ದಿನೇಶ್