ಬೆಂಗಳೂರು, ಜು. 26: ದೇಶದೆಲ್ಲೆಡೆ ಇಂದು ಕಾರ್ಗಿಲ್ ವಿಜಯೋತ್ಸವದ 20ನೇ ಸಂಭ್ರಮಾಚರಣೆ ನಡುವೆ, ಕರ್ನಾಟಕದ 29ನೇ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ರಾಜಧಾನಿ ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಿವಮೊಗ್ಗದ ಶಾಸಕ, ರಾಜ್ಯದ ಮಾಜೀ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.ಇಂದು ಸಂಜೆ 6.30ಕ್ಕೆ ರಾಜ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಯಡಿಯೂರಪ್ಪ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.ಛಲ ಎಂದರೆ ಯಡಿಯೂರಪ್ಪ, ಯಡಿಯೂರಪ್ಪ ಎಂದರೆ ಛಲ ಎಂಬದು ರಾಜ್ಯದ ಬಹಳಷ್ಟು ಜನರಿಗೆ ಗೊತ್ತಿದೆ. ರಾಜ್ಯದ ರಾಜಕೀಯ ಚಿತ್ರ ವಿಚಿತ್ರ ತಿರುವುಗಳತ್ತ ಸಾಗಿ ನಿರೀಕ್ಷೆ ಮಾಡಲಾಗದ ಘಟನಾವಳಿಗಳು ಜರುಗುತ್ತಿರುವಾಗ ಅವರು ನಾಲ್ಕನೇ ಭಾರಿಗೆ ನೂತನ ಮುಖ್ಯಮಂತ್ರಿಯಾಗಿ ಮತ್ತೆ ಪ್ರಮಾಣ ವಚನ ಸ್ವೀಕರಿಸಿ, ಹೊಸ ಸವಾಲು ಎದುರಿಸಲು ಹೊರಟಿರುವದು ನಿಜಕ್ಕೂ ಗಮನಿಸಬೇಕಾದ ವಿಷಯವೇ ಆಗಿದೆ. ಕಳೆದ ವಿಧಾನಸಭೆಯಲ್ಲಿ ಯಾವದೇ ಪಕ್ಷಕ್ಕೆ ಬಹುಮತ ಬರಲಿಲ್ಲ ನಿಜ. ಆದರೆ ನಾನೇ ಮುಂದಿನ ಮುಖ್ಯಮಂತ್ರಿ ಎಂದೂ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದರು. ಪ್ರಧಾನಿ ಸೇರಿದಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡುವದಾಗಿ ಹೇಳಿದ್ದರು. ಆಗ ಅವರ ಮಾತನ್ನು ಕೇಳಿ ಎಲ್ಲರು ಇವರಿಗೆ ಏನಾಗಿದೆ? ಇದು ಸಾಧ್ಯವೆ ? ಏಕೆ ಹೀಗೆ ಹೇಳುತ್ತಿದ್ದಾರೆ? ಎಂಬ ಪ್ರಶ್ನೆಗಳು ರಾಜಕೀಯ ಪಡಸಾಲೆಯಲ್ಲಿ ತೂರಿ ಬಂದವು. ಯಡಿಯೂರಪ್ಪ ನಗೆಪಾಟಲಿಗೆ ಗುರಿಯಾದರು!
ಆದರೆ ಮುಂದೆ ನಡೆದಿದ್ದೆ ಬೇರೆ. ಫಲಿತಾಂಶ ಪ್ರಕಟವಾಗಿ ಅವರು ಹೇಳಿದ ದಿನವೇ ಕರಾರುವಕ್ಕಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ದೇಶದ ರಾಜಕೀಯ ಚರಿತ್ರೆಯಲ್ಲಿ ಒಬ್ಬ ನಾಯಕ ಅದೂ ಫಲಿತಾಂಶ ಪ್ರಕಟವಾಗುವ ಮೊದಲೇ, ನಾನೇ ಮುಂದಿನ ಸಿಎಂ ಎಂದು ಹೇಳಿ, ಅದೂ ಹೇಳಿದ ದಿನವೇ ಕರಾರುವಕ್ಕಾಗಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದು ದೇಶದ ರಾಜಕೀಯದಲ್ಲಿ ಬಹಳ ವಿರಳ ಚರಿತ್ರೆ ಇತಿಹಾಸ ಎನ್ನಬಹುದು. ಅಂತಹ ಕೀರ್ತಿ ಯಡಿಯೂರಪ್ಪ ಅವರ ರಾಜಕೀಯ ಜೀವನದಲ್ಲಿ ಹಾಸುಹೊಕ್ಕಾಗಿತ್ತು ಎಂಬದನ್ನೂ ಸುಲಭವಾಗಿ ಮರೆಯುವಂತಿಲ್ಲ.
ಹಿಂದಿನ ನೆನಪು
ಆ ಹಿಂದೊಮ್ಮೆ ಮುಖ್ಯಮಂತ್ರಿಯಾಗಿದ್ದ ಅವರು, ಭ್ರಷ್ಟಾಚಾರದ ಆರೋಪ ಕೇಳಿ ಬಂದ ನಂತರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ, ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿದ್ದರು. ಆಗ ರಾಜ್ಯ ಬಿಜೆಪಿಯಲ್ಲಿ, ಯಡಿಯೂರಪ್ಪ ಹೇಳಿದ್ದೇ ವೇದವಾಕ್ಯ. ಅದನ್ನು ಮೀರಿ ನಡೆಯುವ ಸಾಹಸ ರಾಜ್ಯದ ನಾಯಕರಿಗೂ ಇರಲಿಲ್ಲ. ಕೇಂದ್ರದ ನಾಯಕರಿಗೂ ಇರಲಿಲ್ಲ ಎಂಬದು ಸ್ಪಷ್ಟ.
(ಮೊದಲ ಪುಟದಿಂದ) ಮುಂದೆ ಅವರು ಬಿಜೆಪಿಯನ್ನು ತೊರೆದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಿಕೊಂಡರು. ಆಗ ರಾಜ್ಯದ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ರಾಜ್ಯಭಾರ ಮಾಡುತ್ತಿದ್ದರು. ಯಾವದೇ ಕಾರಣಕ್ಕೂ ಶೆಟ್ಟರ್, ಹೊಸ ಬಜೆಟ್ ಮಂಡಿಸಲು ಬಿಡುವದಿಲ್ಲ ಎಂದು ಯಡಿಯೂರಪ್ಪ ಅಬ್ಬರಿಸಿದ್ದರು. ಅಷ್ಟೇ ಅಲ್ಲ, ಈ ಜನ್ಮದಲ್ಲಿ ಮತ್ತೆ ಎಂದೂ ಬಿಜೆಪಿಗೆ ಮರಳುವದಿಲ್ಲ. ಪಕ್ಷದ ನಾಯಕರನ್ನು ಸಮರ್ಥನೆ ಮಾಡಿಕೊಳ್ಳುವಲ್ಲಿ ಬಿಜೆಪಿ ನಾಯಕರು ಸೋನಿಯಾ ಗಾಂಧಿ ಅವರನ್ನು ನೋಡಿ ಕಲಿಯಬೇಕು ಎಂದು ಅವರನ್ನು ಹಾಡಿ ಹೊಗಳಿ, ಬಿಜೆಪಿನಾಯಕರನ್ನು ಚಕಿತಗೊಳಿಸಿ ದ್ದರು. ನಂತರದ ಬೆಳವಣಿಗೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟರೆ ಬೇರೆ ನಾಯಕರೇ ಇಲ್ಲ ಎಂಬದು ಅನುಮಾನಕ್ಕೆ ಎಡೆ ಇಲ್ಲದಂತೆ ಸಾಬೀತಾಗಿದೆ.
ಈಜನ್ಮದಲ್ಲಿ ಎಂದೂ ಬಿಜೆಪಿಗೆ ಮರಳುವದಿಲ್ಲ ಎಂದು ಸಾರಿ ಹೇಳಿದ್ದ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದಿದ್ದು ಅಚ್ಚರಿಯಲ್ಲ. ಅವರೇ ಮೂರು ವರ್ಷಗಳ ಕಾಲ ರಾಜ್ಯದ ಅಧ್ಯಕ್ಷರಾಗಿ, ಈಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹೊಸ ಭಾಷ್ಯ... ಬರೆಯಲು ಹೊರಟಿರುವದೇ ಅಚ್ಚರಿ ಪಡಬೇಕಾದ ಸಂಗತಿ.
ಇದುವರೆಗೆ ಮೂರು ಬಾರಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿ ಈಗ ನಾಲ್ಕನೇ ಬಾರಿ ಮುಖ್ಯಮಂತ್ರಿ ಯಾಗುತ್ತಿದ್ದಾರೆ. ಮೊದಲ ಬಾರಿ ಮೂರೂವರೆ ವರ್ಷಗಳ ಕಾಲ ಅಧಿಕಾರ ಮಾಡಿದ್ದರು. ಎರಡು ಮತ್ತು ಮೂರನೇ ಸಲ ಕೇವಲ 9 ದಿನ, 3 ದಿನಕ್ಕೆ ಅಧಿಕಾರ ಕಳೆದುಕೊಂಡಿದ್ದರು.
ಅವರು 2007ರಲ್ಲಿ ತಮ್ಮ ಹೆಸರನ್ನು ಯಡ್ಯೂರಪ್ಪ ಎಂದು ಬದಲಾವಣೆ ಮಾಡಿಕೊಂಡರು ಅದೂ ಜ್ಯೋತಿಷಿಯ ಸಲಹೆ ಮೇರೆಗೆ ಎಂಬದು ಗುಟ್ಟಾಗಿ ಉಳಿದಿಲ್ಲ.
ಶಿಕಾರಿಪುರ ಎಂದಾಕ್ಷಣ ನಮ್ಮೆಲ್ಲರಿಗೂ ನೆನಪಾಗುವ ಒಂದು ಹೆಸರು ಎಂದರೆ ರಾಜ್ಯ ಕಂಡ ಧೀಮಂತ ನಾಯಕ, ಹುಟ್ಟು ಹೋರಾಟಗಾರ ಬೂಕನಕೆರೆ ಸಿದ್ಧಲಿಂಗಯ್ಯ ಯಡಿಯೂರಪ್ಪ.
ಸಿದ್ಧಲಿಂಗಯ್ಯ ಪುಟ್ಟ ತಾಯಮ್ಮ ದಂಪತಿಗೆ 1943ರ ಫೆಬ್ರವರಿ 27ರಂದು ಜನಿಸಿದ ಅವರು ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆದು ನಿಲ್ಲುತ್ತಾರೆ ಎಂದೂ ಯಾರೊಬ್ಬರೂ ಊಹಿಸಿರಲಿಲ್ಲ.
ಅವರು ಮುಖ್ಯಮಂತ್ರಿ ಯಾಗುತ್ತಿರುವದು ಯಾರಿಗೂ ಈಗ ಅಚ್ಚರಿ ಸಂಗತಿಯಾಗಿ ಕಾಣುತ್ತಿಲ್ಲ. ಆದರೆ, ಅಧಿಕಾರವನ್ನು ಈಗಿನ ವಿಚಿತ್ರ ರಾಜಕೀಯ ಸನ್ನಿವೇಶದಲ್ಲಿ ಎಷ್ಟು ದಿನ ಉಳಿಸಿಕೊಳ್ಳುತ್ತಾರೆ ಎಂಬದು ಯಕ್ಷ ಪ್ರಶ್ನೆಯಾಗಿದೆ. ಎಲ್ಲಾ ಅಡೆತಡೆಗಳನ್ನು ಮೀರಿ ಉಳಿದ ಮೂರೂವರೆ ವರ್ಷಗಳ ಆಡಳಿತವನ್ನು ಅವರು ಪೂರ್ಣಗೊಳಿಸಿದರೆ ರಾಜಕೀಯ ಚರಿತ್ರೆಯಲ್ಲಿ ಮತ್ತೊಮ್ಮೆ ಅವರ ಹೆಸರು ರಾರಾಜಿಸಲಿದೆ ಎಂಬದನ್ನು ಅಲ್ಲಗೆಳೆಯುವಂತಿಲ್ಲ. ಯಾವದನ್ನೂ ಅವರು ವಿಶ್ವಾಸಮತ ಸಾಬೀತು ಪಡಿಸಿದ ಬಳಿಕವಷ್ಟೇ ಈ ಸಂದರ್ಭ ನಿರೀಕ್ಷಿಸಲು ಸಾಧ್ಯ.
ಬಿಗಿ ಭದ್ರತೆ
ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದÀ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಮೂವರು ಜಂಟಿ ಆಯುಕ್ತರು. ನಾಲ್ವರು ಉಪಪೊಲೀಸ್ ಆಯುಕ್ತರು ಹಾಗೂ ಆರು ಮಂದಿ ಸಹಾಯಕ ಪೊಲೀಸ್ ಆಯುಕ್ತರನ್ನು ಭದ್ರತೆ ಉಸ್ತುವಾರಿಯಾಗಿ ನೇಮಿಸಲಾಗಿದೆ. ಒಂದು ಸಾವಿರ ಪೊಲೀಸರನ್ನು ರಾಜಭವನದ ಬಳಿ ನಿಯೋಜಿಸ ಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭ ವೀಕ್ಷಣೆಗೆ ಮೂರು ಸಾವಿರ ಮಂದಿಗೆ ಪಾಸ್ ವಿತರಣೆ ಮಾಡಲಾಗಿತ್ತು.
ಬಿಜೆಪಿ ಶಾಸಕರು, ಪಕ್ಷದ ಮುಖಂಡರು ಸೇರಿದಂತೆ ಕೇಂದ್ರ ಸಚಿವ ಸದಾನಂದಗೌಡ, ಮಾಜೀ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಮಾಜೀ ರಾಜ್ಯಪಾಲ ರಾಮ ಜೋಯಿಸ್ ಸೇರಿದಂತೆ ಕಾಂಗ್ರೆಸ್ ಉಚ್ಚಾಟಿತ ಶಾಸಕ ರೋಷನ್ ಬೇಗ್ ಮೊದಲಾದವರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕದ ರಾಜ್ಯಪಾಲ ವಜೂಭಾಯ್ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದ ಸಂದರ್ಭ ಕೇವಲ ನಾಲ್ಕಾರು ನಿಮಿಷಗಳ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆ ಬಳಿಕ ರಾಜಭವನದಲ್ಲಿ ಗಣ್ಯರಿಗೆ ಚಹಾಕೂಟ ಏರ್ಪಡಿಸಲಾಗಿತ್ತು.
ನೇಕಾರರ ಸಾಲ ಮನ್ನಾ, 29ಕ್ಕೆ ಬಹುಮತ ಸಾಬೀತು
ಜು.29ಕ್ಕೆ ಬಹುಮತ ಸಾಬೀತು ಪಡಿಸುವದಾಗಿ ನೂತನ ಸಿ.ಎಂ. ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ಪ್ರಮಾಣವಚನ ಸ್ವೀಕರಿಸಿ, ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿರುವ ಯಡಿಯೂರಪ್ಪ, ತಮ್ಮ ನೇತೃತ್ವದ ಸರ್ಕಾರದ ಮೊದಲ ನಿರ್ಣಯಗಳನ್ನು ತಿಳಿಸಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯದಿಂದಲೂ ಅನುದಾನ ನೀಡಲಾಗುವದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಕೇಂದ್ರ ಸರಕಾರ ತಿಂಗಳಿಗೆ 2 ಸಾವಿರ ರೂಪಾಯಿಯಂತೆ ವಾರ್ಷಿಕ 6 ಸಾವಿರ ರೂಪಾಯಿ ನೀಡುತ್ತಿದೆ. ಈ ಯೋಜನೆಗೆ ರಾಜ್ಯ ಸರಕಾರವೂ ಅನುದಾನ ನೀಡಲಿದ್ದು, 3 ಕಂತುಗಳಲ್ಲಿ ಒಟ್ಟಾರೆ 4 ಸಾವಿರ ರೂಪಾಯಿ ಹಣವನ್ನು ರೈತರ ಖಾತೆಗೆ ತಲಪಲಿದೆ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಣಯದಿಂದ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಒಟ್ಟಾರೆ 10 ಸಾವಿರ ರೂಪಾಯಿ ಹಣ ಸಿಗಲಿದೆ. ನೇಕಾರರ 100 ಕೋಟಿ ರೂಪಾಯಿ ಸಾಲ ಮನ್ನಾವನ್ನೂ ಸಿ.ಎಂ. ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.