ಮಡಿಕೇರಿ, ಜು. 26 : ಕೊಡಗಿನ ಜಾನಪದ ಆಚರಣೆ ಕಕ್ಕಡ ಪದಿನೆಟ್ಟ್ ನಮ್ಮೆಯನ್ನು ಪ್ರತಿವರ್ಷದಂತೆ ಈ ಬಾರಿಯೂ ಸಾರ್ವತ್ರಿಕವಾಗಿ ಆಚರಿಸಲು ಕೊಡವ ನ್ಯಾಷನಲ್ ಕೌನ್ಸಿಲ್ ನಿರ್ಧರಿಸಿದ್ದು, ಆ.3 ರಂದು ಕಾರ್ಯಕ್ರಮ ಮಡಿಕೇರಿ ಸಮೀಪದ ಕ್ಯಾಪಿಟಲ್ ವಿಲೇಜ್‍ನಲ್ಲಿ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 24ನೇ ವರ್ಷದ ಸಾರ್ವತ್ರಿಕ ಕಕ್ಕಡ ಪದಿನೆಟ್ಟ್ ನಮ್ಮೆಯನ್ನು ಆಚರಿಸುವ ಮೂಲಕ ಸಿಎನ್‍ಸಿಯ ಹಕ್ಕೊತ್ತಾಯಗಳನ್ನು ಆಡಳಿತ ವ್ಯವಸ್ಥೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುವದು ಎಂದರು.
ಕೃಷಿ ಚಟುವಟಿಕೆ ಹಿನ್ನೆಲೆಯಲ್ಲಿ ಬುಡಕಟ್ಟು ಜನಾಂಗವಾದ ಕೊಡವರು ಕಕ್ಕಡ ಪದಿನೆಟ್ಟ್ ನಮ್ಮೆಯನ್ನು ಆಚರಿಸುತ್ತಾರೆ. ಕ್ಯಾಪಿಟಲ್ ವಿಲೆÉೀಜ್ ಭತ್ತದ ಗದ್ದೆಯಲ್ಲಿ ಸಿಎನ್‍ಸಿ ಮೂಲಕ ನಾಟಿ ಕಾರ್ಯ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು. 18 ಬಗೆಯ ಔಷಧೀಯ ಗುಣಗಳನ್ನು ಹೊಂದಿರುವ ಮದ್ದ್ ಸೊಪ್ಪಿನ ಪಾಯಸ ಸೇರಿದಂತೆ ಕಕ್ಕಡ ತಿಂಗಳಿನಲ್ಲಿ ಸೇವಿಸುವ ವಿವಿಧ ಭಕ್ಷ್ಯ ಭೋಜನದ ವ್ಯವಸ್ಥೆಯನ್ನು ಮಾಡಲಾಗುವದು.
ಕೊಡವರ ಉನ್ನತ ಸಂಸ್ಕøತಿ ಮತ್ತು ಶ್ರೇಷ್ಠ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಈ ರೀತಿಯ ಜಾನಪದೀಯ ಆಚರಣೆಗಳನ್ನು ಸಾರ್ವತ್ರಿಕವಾಗಿ ಆಚರಿಸುವದು ಸೂಕ್ತವೆಂದರು. ಕಕ್ಕಡ ಪದಿನೆಟ್ಟ್‍ನ್ನು ಅರ್ಥಪೂರ್ಣವಾಗಿ ಆಚರಿಸುವದರೊಂದಿಗೆ ಕೊಡವರ ಪರವಾದ ಹಕ್ಕೊತ್ತಾಯಗಳನ್ನು ಮಂಡಿಸಲಾಗುವದು ಎಂದು ತಿಳಿಸಿದರು.
ಕೊಡವ ಬುಡಕಟ್ಟು ಕುಲಕ್ಕೆ ಸಂವಿಧಾನದ 342ನೇ ವಿಧಿ ಪ್ರಕಾರ ರಾಜ್ಯಾಂಗ ಖಾತರಿ ನೀಡಬೇಕು ಮತ್ತು ಕೊಡವ ಭಾಷೆಯನ್ನು ಸಂವಿಧಾನದ 8ನೇ ಷೆಡ್ಯೂಲ್‍ಗೆ ಸೇರಿಸಬೇಕೆಂದು ನಾಚಪ್ಪ ಒತ್ತಾಯಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೊಡವ ಕುಲಶಾಸ್ತ್ರ ಅಧ್ಯಯನ ಅಂತಿಮ ಹಂತದಲ್ಲಿದ್ದು, ದಾಖಲೆಗಳ ಕ್ರೋಢೀಕರಣದ ಪ್ರಕ್ರಿಯೆ ನಡೆಯುತ್ತಿದೆ. ಕೊಡವರ ನೈಜ ಹಕ್ಕುಗಳನ್ನು ಮುಂದಿಟ್ಟುಕೊಂಡು ಸಿಎನ್‍ಸಿ ಹೋರಾಟ ನಡೆಸುತ್ತಿದೆಯೆ ಎಂದು ಸ್ಪಷ್ಟಪಡಿಸಿದರು.
ಶಾಂತಿಯುತ ಹೋರಾಟದ ಮೂಲಕ ಜಯ ಗಳಿಸುವದಾಗಿ ವಿಶ್ವಾಸ ವ್ಯಕ್ತಪಡಿಸಿದ ನಾಚಪ್ಪ, ಸಂವಿಧಾನ ನೀಡಿರುವ ಸಮಾನ ಅವಕಾಶಗಳನ್ನು ಬಳಸಿಕೊಳ್ಳಲು ಕೊಡವರಿಗೂ ಹಕ್ಕಿದೆ. ಆದರೆ, ಬೆರಳೆಣಿಕೆಯಷ್ಟಿರುವ ಕೊಡವ ಮುಖಂಡರೆನಿಸಿಕೊಂಡವರು ಸಂವಿಧಾನ ವಿರೋಧಿ ಅಭಿಪ್ರಾಯವನ್ನು ಮಂಡಿಸಿ ಕೊಡವರ ಬೇಡಿಕೆಗೆ ವಿರುದ್ಧವಾದ ನಡೆಯನ್ನು ಪ್ರದರ್ಶಿಸುತ್ತಲೆ ಬಂದಿದ್ದಾರೆ ಎಂದು ನಾಚಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಎನ್‍ಸಿ ಪ್ರಮುಖರಾದ ಪುಲ್ಲೇರ ಕಾಳಪ್ಪ, ಚಂಬಂಡ ಜನತ್ ಹಾಗೂ ಕೂಪದಿರ ಸಾಬು ಉಪಸ್ಥಿತರಿದ್ದರು.