ಮಡಿಕೇರಿ, ಜು. 26: ಭಾರತೀಯ ಮಾನಸಿಕ ಆರೋಗ್ಯ ಸಂಸ್ಥೆ ಕರ್ನಾಟಕ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರ ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ವಲಯಗಳ 52 ನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ಸಮುದಾಯ ಜಾಗೃತಿ ಕಾರ್ಯಕ್ರಮವು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಹಲವು ವರ್ಷಗಳ ಹಿಂದೆ ಶೈಕ್ಷಣಿಕ ವಿಷಯದಲ್ಲಿ ಮಾತ್ರ ವಿದ್ಯಾರ್ಥಿಗಳ ಪೈಪೋಟಿ ಕಂಡುಬರುತ್ತಿತ್ತು. ಆದರೆ ಇತ್ತೀಚೆಗೆ ಪ್ರತಿಯೊಂದು ಕ್ಷೇತ್ರಗಳಲ್ಲೂ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ರೋಲ್ ಮಾಡಲ್ಗಳಂತಿದ್ದಾರೆ ಎಂದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುಮನ್ ಡಿಪಿ. ಅವರು ಮಾತನಾಡಿ ಜೀವನದಲ್ಲಿ ಪ್ರತಿಯೊಬ್ಬರೂ ಕಷ್ಟ, ಸಮಸ್ಯೆ ಎದುರಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಡ್ರಗ್ಸ್ ಸೇವನೆ, ಧೂಮಪಾನ, ಮದ್ಯಪಾನ ಮಾಡುವದರಿಂದ ನೋವು ಮರೆತು ನೆಮ್ಮದಿ ಪಡೆಯಬಹುದು ಎಂಬದು ಒಳ್ಳೆಯ ಚಿಂತನೆಯಲ್ಲ. ಒತ್ತಡದಿಂದ ಹೊರಬರಲು ಕೆಟ್ಟ ಚಟಗಳಿಗೆ ಬಲಿಯಾಗಬೇಕಿಲ್ಲ. ಬದಲಾಗಿ ಪುಸ್ತಕ ಓದುವದು, ಬರೆಯುವದು, ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ಸಲಹೆ ಮಾಡಿದರು.
ಕೊಡಗು ವೈದ್ಯಕೀಯ ಹಾಗೂ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಕೆ.ಬಿ. ಕಾರ್ಯಪ್ಪ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಮಾನಸಿಕ ಆರೋಗ್ಯ ಅತ್ಯಂತ ಮುಖ್ಯವಾಗಿದೆ. ಕ್ರೀಡೆ, ಯೋಗಾಭ್ಯಾಸ, ಪುಸ್ತಕ ಓದುವದು ಇವುಗಳಿಂದ ನಮ್ಮಲ್ಲಿರುವ ಒತ್ತಡವನ್ನು ಕಡಿಮೆಗೊಳಿಸಬಹುದು. ಕೆಟ್ಟ ಚಟಗಳಿಗೆ ಬಲಿಯಾಗಿ ಮಾನಸಿಕವಾಗಿ ದುರ್ಬಲರಾದರೆ ನಮ್ಮ ಸಾಮರ್ಥ್ಯ ಕುಂದುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಒಳ್ಳೆಯ ವಿಚಾರಗಳತ್ತ ಯೋಚಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲ ವಿಜಯ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮನೋ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎನ್.ವಿ. ರೂಪೇಶ್ ಗೋಪಾಲ್, ಪ್ರಮುಖರಾದ ಮೇರಿ ನಾಣಯ್ಯ, ವಿಶ್ವನಾಥ್ ಮತ್ತಿತರರು ಭಾಗವಹಿಸಿದ್ದರು.