ಮಡಿಕೇರಿ, ಜು. 24: ಕರ್ನಾಟಕ ರಾಜ್ಯದಲ್ಲಿನ ರಾಜಕೀಯ ಚದುರಂಗದಾಟದಲ್ಲಿ ಅಧಿಕಾರದಲ್ಲಿದ್ದ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಪತನಗೊಳ್ಳುವದರೊಂದಿಗೆ 2018ರ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದ ಬಿಜೆಪಿ ಪಾಳಯದಲ್ಲಿ ಹೊಸ ಉತ್ಸಾಹ ಮೂಡಿದೆ.
ಇದೀಗ ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಯಾಗುವದು ಬಹುತೇಕ ಖಚಿತ ಎನ್ನುವಂತಾಗಿದೆ. ಈ ಬೆಳವಣಿಗೆ ಕಳೆದ ಹಲವು ವರ್ಷಗಳಿಂದ ಬಹುತೇಕ ಎಲ್ಲಾ ಚುನಾವಣೆಗಳಲ್ಲಿ ಜಯಭೇರಿ ಬಾರಿಸುವದರೊಂದಿಗೆ ಬಿಜೆಪಿಯ ಭದ್ರಕೋಟೆ ಎಂದೇ ಹೆಸರಾಗಿರುವ ಕೊಡಗು ಜಿಲ್ಲೆಯ ಲ್ಲಿಯೂ ಸಂಚಲನ ಮೂಡಿಸಿದೆ.
2008ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರ ನಡೆಸಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯ ಶಾಕಸದ್ವಯರಿಗೂ ಉನ್ನತ ಸ್ಥಾನ ಲಭಿಸಿತ್ತು. ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಸ್ಪೀಕರ್ ಹುದ್ದೆಯನ್ನು ಅಲಂಕರಿಸಿದರೆ; ಸರಕಾರದ ಆಡಳಿತಾವಧಿಯ ಕೊನೆಯ ಹಂತದಲ್ಲಿ ಮಡಿಕೇರಿ ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್ ಅವರೂ ರಾಜ್ಯದ ಸಚಿವರಾಗುವದ ರೊಂದಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿರುವದು ಇತಿಹಾಸವಾಗಿದೆ.
ಆ ನಂತರ 2013ರಲ್ಲಿ ನಡೆದ ಮತ್ತೊಂದು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಪೂರ್ಣ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಈ ಅವಧಿಯಲ್ಲಿ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳಿಂದಲೂ ಬಿಜೆಪಿಯ ಶಾಸಕರುಗಳೇ ಚುನಾಯಿತರಾಗಿದ್ದರೂ ವಿಪಕ್ಷ ಸದಸ್ಯರಾಗಿ ಕಾರ್ಯನಿರ್ವಹಿ ಸುವಂತಾಗಿತ್ತು. ಮಾತ್ರವಲ್ಲ ಕೊಡಗು ಜಿಲ್ಲೆಗೆ ಜಿಲ್ಲೆಯ ಹೊರತಾದವರು ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದರು.
2018 ರಲ್ಲಿ ..,
2018ರಲ್ಲಿ ನಡೆದ ಇನ್ನೊಂದು ವಿಧಾನಸಭಾ ಚುನಾವಣೆಯಲ್ಲಿಯೂ ಇದೇ ಶಾಸಕದ್ವಯರು ಜಿಲ್ಲೆಯಿಂದ ಚುನಾಯಿಸಲ್ಪಟ್ಟರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ವಿಫಲಗೊಂಡಿದ್ದರಿಂದ ಇಬ್ಬರೂ ಕೇವಲ ಶಾಸಕರುಗಳಾಗಿಯೇ ಈ ತನಕ ಕರ್ತವ್ಯನಿರ್ವಹಿಸುವಂತಾಗಿತ್ತು. ಈ ನಡುವೆ ಎದುರಾದ ವಿಧಾನ ಪರಿಷತ್ ಚುನಾವಣೆ ಹಲವು ತಿಂಗಳ ಹಿಂದೆಯಷ್ಟೆ ನಡೆದ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಗೆ ಜಿಲ್ಲೆಯಲ್ಲಿ ಹೆಚ್ಚಿನ ಬೆಂಬಲ ಕಂಡು ಬಂದಿದ್ದು, ಕೊಡಗು ಬಹುತೇಕ ಹಲವಾರು ವರ್ಷಗಳಿಂದ ಬಿಜೆಪಿಯ ಭದ್ರನೆಲೆ ಎಂದು ಸಾಬೀತಾಗುತ್ತಲೇ ಬಂದಿದೆ.
ಇದೀಗ ಹೊಸ ನಿರೀಕ್ಷೆ
ರಾಜ್ಯದಲ್ಲಿ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ ಇದೀಗ ಸಮ್ಮಿಶ್ರ ಸರಕಾರ ಪತನಗೊಂಡಿದ್ದು; ಬಿಜೆಪಿ ಮತ್ತೊಮ್ಮೆ ಪುಟಿದೆದ್ದಿದೆ. ಇದೀಗ ರಚನೆಗೊಳ್ಳಲಿರುವ ಬಿಜೆಪಿ ಸರಕಾರದಲ್ಲಿ ಕೊಡಗಿನ ಯಾರಿಗೆ ಸಚಿವ ಸಂಪುಟದಲ್ಲಿ ಅವಕಾಶ ಸಿಗಬಹುದು ಎಂಬ ಹೊಸ ನಿರೀಕ್ಷೆ, ಚರ್ಚೆಗಳು ಆರಂಭಗೊಂಡಿವೆ.
ಜಿಲ್ಲೆಯಲ್ಲಿ ಈ ಬಾರಿ ಮೂವರಿದ್ದಾರೆ
ಪ್ರಸ್ತುತ ಕೊಡಗಿನ ಎರಡು ಕ್ಷೇತ್ರಗಳಾದ ಮಡಿಕೇರಿ ಹಾಗೂ ವೀರಾಜಪೇಟೆ ಯಿಂದ ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರುಗಳು ಶಾಸಕರಾಗಿ ದ್ದಾರೆ. ಈ ಬಾರಿ ಇವರೊಂದಿಗೆ ಮೇಲ್ಮನೆಯ ಸದಸ್ಯ ರಾಗಿ ಎಂ.ಪಿ. ಸುನಿಲ್ ಸುಬ್ರಮಣಿ ಅವರೂ ಇರುವದರಿಂದ ಬಿಜೆಪಿ ಪಾಳಯದಲ್ಲಿ ಮಾತ್ರವಲ್ಲ ಜಿಲ್ಲೆಯ ಜನತೆಯಲ್ಲೂ ಕುತೂಹಲ ಹೆಚ್ಚುತ್ತಿದೆ.
ಈ ಹಿಂದೆ ಬಿಜೆಪಿ ಸರಕಾರದಲ್ಲಿ ಸ್ಪೀಕರ್ ಹುದ್ದೆಯಲ್ಲಿದ್ದ ಕೆ.ಜಿ. ಬೋಪಯ್ಯ ಅವರು ಬಿ.ಎಸ್. ಯಡಿಯೂರಪ್ಪ ಅವರಿಗೆ ಹೆಚ್ಚು ಆಪ್ತರು ಎಂಬ ಮಾತೂ ಇದೆ. ಇದರೊಂದಿಗೆ ಅವರು ವಕೀಲರಾಗಿಯೂ ಇರುವದು ಈ ಬಾರಿ ಮತ್ತೆ ಸ್ಪೀಕರ್ ಆಗಲಿದ್ದಾರೆಯೇ ಎಂಬ ಚರ್ಚೆಗೆ ಕಾರಣವಾಗಿದೆ. ಆದರೆ ಕೆಲವು ಖಚಿತ ಮೂಲಗಳ ಪ್ರಕಾರ ಬೋಪಯ್ಯ ಅವರಿಗೆ ಸ್ಪೀಕರ್ ಸ್ಥಾನದ ಬದಲು ಸಚಿವ ಸ್ಥಾನದ ಬಯಕೆ ಇರುವದಾಗಿ ಹೇಳಲಾಗುತ್ತಿದೆ. ಇವರು ಶಾಸಕರಾಗಿರುವದು ಇದೀಗ ನಾಲ್ಕನೇ ಬಾರಿಗೆ. ಈ ಹಿಂದೆ 2004ರಲ್ಲಿ ಮಡಿಕೇರಿ ಕ್ಷೇತ್ರದಿಂದ ಜಯಗಳಿಸಿದ್ದ ಬೋಪಯ್ಯ ನಂತರದ ಮೂರು ಚುನಾವಣೆಗಳಲ್ಲೂ ವೀರಾಜಪೇಟೆ ಕ್ಷೇತ್ರದಿಂದ ಆಯ್ಕೆಗೊಂಡಿದ್ದಾರೆ.
ಐದು ಬಾರಿಯ ಶಾಸಕ ರಂಜನ್
2008ರ ಬಿಜೆಪಿ ಸರಕಾರದ ಸಂಪುಟದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾಗಿ ಹೆಸರು ಮಾಡಿದ್ದ ಅಪ್ಪಚ್ಚು ರಂಜನ್ 2018ರಲ್ಲಿ ನಡೆದ ಚುನಾವಣೆಯೂ ಸೇರಿದಂತೆ ಒಟ್ಟು ಆರನೇ ಬಾರಿಗೆ 1994ರಲ್ಲಿ ಹಾಗೂ 1999ರಲ್ಲಿ ಸೋಮವಾರ ಪೇಟೆ ಕ್ಷೇತ್ರದಿಂದ ಗೆಲವು ಸಾಧಿಸಿದ್ದ ಅವರು 2004ರ ಚುನಾವಣೆಯಲ್ಲಿ ಪರಾಭವಗೊಂಡಗೂ ಬಳಿಕ ನಡೆದ ಚುನಾವಣೆಗಳಲ್ಲಿ (2008, 2013 ಹಾಗೂ 2018) ಮಡಿಕೇರಿ ಕ್ಷೇತ್ರದಿಂದ ಮತ್ತೆ ಸತತ ಮೂರು ಬಾರಿ ಆಯ್ಕೆಗೊಂಡಿದ್ದಾರೆ.
ಮೇಲ್ಮನೆಯಲ್ಲಿ ಸುನಿಲ್
ವಿಧಾನ ಪರಿಷತ್ಗೆ ಕೊಡಗು ಜಿಲ್ಲೆಯಿಂದ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯ ಮತ್ತೋರ್ವ ಪ್ರಮುಖ ಪಕ್ಷ ಸಂಘಟನೆಯಲ್ಲಿ ಗುರುತಿಸಿ ಕೊಂಡಿರುವ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಗೆಲವು ಸಾಧಿಸಿದ್ದು, ಇವರೂ ಸೇರಿ ಈ ಬಾರಿ ಕೊಡಗಿನಿಂದ ಬಿಜೆಪಿಯ ಮೂವರು ಪ್ರತಿನಿಧಿಗಳಿದ್ದಾರೆ. ಈ ಬಾರಿಯ ಬಿಜೆಪಿ ಸರಕಾರದ ರಚನೆಯಲ್ಲಿ ಪಕ್ಷದ ಹೈಕಮಾಂಡ್ನ ನಿಖರ ನಿಲುವೂ ಪರಿಣಾಮ ಬೀರಲಿದೆ ಎಂಬ ಮಾತೂ ಕೇಳಿ ಬಂದಿದೆ.
ಹೊಸ ಸರಕಾರದಲ್ಲಿ ಯಾರ್ಯಾರಿಗೆ ಸ್ಥಾನಮಾನ ಸಿಗಬಹುದೆಂಬ ಕುತೂಹಲ ಇಡೀ ರಾಜ್ಯದಲ್ಲಿರುವಂತೆ ಕೊಡಗಿನಲ್ಲೂ ಆರಂಭಗೊಂಡಿದೆ. ಸಂಪುಟದಲ್ಲಿ ಶಾಸಕರಿಗೆ ಮಾತ್ರ ಅವಕಾಶ ಸಿಗುವದೇ; ಮೇಲ್ಮನೆ ಸದಸ್ಯರನ್ನೂ ಪರಿಗಣಿಸಲಾಗುವದೇ ಎಂಬ ಕೌತುಕ ಒಂದೆಡೆಯಾದರೆ; ಸಮ್ಮಿಶ್ರ ಸರಕಾರದ ಪತನಕ್ಕೆ ಕಾರಣರಾಗಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ‘ಕೈ’ ಕೊಟ್ಟಿರುವ ಅತೃಪ್ತ ಶಾಸಕರ ವಿಚಾರವೇನು ಎಂಬಿತ್ಯಾದಿ ಚರ್ಚೆಗಳು ರಾಜಕೀಯ ವಲಯದಲ್ಲಿ ಹೆಚ್ಚಾಗುತ್ತಿದ್ದು; ಮುಂದಿನ ಎಲ್ಲಾ ಬೆಳವಣಿಗೆಗಳನ್ನು ಕಾದುನೋಡಬೇಕಿದೆ.
-ಶಶಿ ಸೋಮಯ್ಯ