ಕುಶಾಲನಗರ, ಜು. 24: ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ ತಾ. 25 ರಂದು (ಇಂದು) ರಂದು ಕುಶಾಲನಗರದಲ್ಲಿ ನಡೆಯಲಿದೆ.

ಸ್ಥಳೀಯ ಕನ್ನಡ ಭಾರತಿ ಪಪೂ ಕಾಲೇಜಿನಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರಘು ಹೆಬ್ಬಾಲೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಕೂಡಿಗೆ ಡಯಟ್ ಹಿರಿಯ ಉಪನ್ಯಾಸಕ ಕೆ.ವಿ. ಸುರೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ, ಭಾರತೀಯ ಪತ್ರಕರ್ತರ ಒಕ್ಕೂಟದ ನಿರ್ದೇಶಕ ಎಸ್.ಎ. ಮುರಳೀಧರ್, ತಾಲೂಕು ಸಂಘದ ಅಧ್ಯಕ್ಷ ಎಚ್.ಆರ್. ಹರೀಶ್ ಕುಮಾರ್, ಪಪಂ ಸದಸ್ಯರು ಹಾಗೂ ಕಾಲೇಜು ಕಾರ್ಯಾಧ್ಯಕ್ಷ ಜಯವರ್ಧನ್, ಪ್ರಾಂಶುಪಾಲ ಎಸ್.ಟಿ. ಪುರುಷೋತ್ತಮ್ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಗೌರವ ಪ್ರಶಸ್ತಿಗೆ ಭಾಜನರಾದ ಎಂ.ಎನ್.ಚಂದ್ರಮೋಹನ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪಡೆದ ಸುನಿಲ್ ಪೊನ್ನೇಟಿ, ತಾಲೂಕು ಸಂಘದ ಪ್ರಶಸ್ತಿ ವಿಜೇತರಾದ ಕೆ.ಕೆ. ನಾಗರಾಜಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವದು ಎಂದು ಸಂಘದ ಕಾರ್ಯದರ್ಶಿ ಬಿ.ಎಸ್. ಲೋಕೇಶ್ ಸಾಗರ್ ತಿಳಿಸಿದ್ದಾರೆ.