ಸೋಮವಾರಪೇಟೆ, ಜು. 25: ಇಲ್ಲಿನ ಪಟ್ಟಣ ಪಂಚಾಯಿತಿ ರಸ್ತೆಯಲ್ಲಿನ ಗುಂಡಿಗಳು ಕಪ್ಪುಚುಕ್ಕೆಯಂತಾಗಿವೆ. ನಗರೋತ್ಥಾನ ಯೋಜನೆಯಡಿ ಹಲವಷ್ಟು ರಸ್ತೆಗಳನ್ನು ಡಾಂಬರೀಕಣ ಮಾಡಲಾಗಿದ್ದರೂ, ಭಾರೀ ಗುಂಡಿಗಳು ನಿರ್ಮಾಣವಾಗಿರುವ ರಸ್ತೆಗಳನ್ನು ಹಾಗೆಯೇ ಬಿಡಲಾಗಿದೆ.
ಸಣ್ಣಪುಟ್ಟ ಗುಂಡಿಗಳು ನಿರ್ಮಾಣವಾಗಿದ್ದ ರಸ್ತೆ, ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನು ಮರು ಡಾಂಬರೀಕರಣ ಮಾಡಿದ್ದರೆ, ಬೃಹತ್ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿರುವ ರಸ್ತೆಗಳತ್ತ ಪಂಚಾಯಿತಿ ದೃಷ್ಟಿ ಹರಿಸಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಪ.ಪಂ. ವ್ಯಾಪ್ತಿಯಲ್ಲಿರುವ ಎಸ್.ಜೆ.ಎಂ. ಶಾಲೆಯ ಬಳಿಯಿಂದ ಕಟ್ಟೆ ಬಸವೇಶ್ವರ ದೇವಾಲಯದ ವರೆಗಿನ ಸುಮಾರು 150 ಮೀಟರ್ ರಸ್ತೆಯಲ್ಲಿ 30ಕ್ಕೂ ಅಧಿಕ ಗುಂಡಿಗಳು ನಿರ್ಮಾಣವಾಗಿದ್ದು, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ.
ಈ ರಸ್ತೆಯ ಮೂಲಕವೇ ಕರ್ಕಳ್ಳಿ, ನೇಗಳ್ಳೆ-ಕರ್ಕಳ್ಳಿ, ಬೇಳೂರು ಗ್ರಾ.ಪಂ.ನ ಹಳ್ಳದಿಣ್ಣೆ, ಬೇಳೂರುಬಾಣೆ, ಕರ್ಕಳ್ಳಿ ಬಾಣೆ ಗ್ರಾಮಗಳಿಗೆ ತೆರಳಬೇಕಿದ್ದು, ಅಡುಗೆ ಅನಿಲದ ಉಗ್ರಾಣಕ್ಕೂ ಸಹ ಇದೇ ರಸ್ತೆಯನ್ನು ಅವಲಂಭಿಸಬೇಕಿದೆ.
ಇದರೊಂದಿಗೆ ದಿನಂಪ್ರತಿ ಸಾವಿರಾರು ವಾಹನಗಳು, ಶಾಲಾ ಕಾಲೇಜುಗಳ ನೂರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಗುಂಡಿಗಳ ನಡುವೆ ಸರ್ಕಸ್ ಮಾಡಬೇಕಿದೆ.
ಈ ಬಗ್ಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಗಮನ ಸೆಳೆದರೂ ಯಾವದೇ ಪ್ರಯೋಜನವಾಗಿಲ್ಲ. ಮೂರು ದಿನದೊಳಗೆ ವೆಟ್‍ಮಿಕ್ಸ್ ಹಾಕಿ ಗುಂಡಿಗಳನ್ನು ಮುಚ್ಚಲಾಗುವದು ಎಂದು ಮುಖ್ಯಾಧಿಕಾರಿ ನಟರಾಜ್ ನೀಡಿದ್ದ ಭರವಸೆಯೂ ಸುಳ್ಳಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದಿನ ಮೂರು ದಿನಗಳ ಒಳಗೆ ಗುಂಡಿಗಳನ್ನು ಮುಚ್ಚದೇ ಹೋದಲ್ಲಿ ರಸ್ತೆಯ ಗುಂಡಿಗಳಿಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಲಾಗುವದು ಎಂದು ಆಟೋ ಚಾಲಕರು ಎಚ್ಚರಿಸಿದ್ದಾರೆ.