ಸೋಮವಾರಪೇಟೆ, ಜು. 24: ಹಚ್ಚಹಸಿರಿನ ಗಿರಿಕಂದರಗಳ ಸಾಲು, ಬೆಟ್ಟದ ತುದಿಯನ್ನು ಸ್ಪರ್ಶಿಸಿ ತೇಲುವ ಮೋಡಗಳು.., ಸುತ್ತಲೂ ಹಸಿರನ್ನೇ ಹೊದ್ದು ಮಲಗಿರುವಂತೆ ಕಾಣುವ ಪ್ರದೇಶ.., ಎರಡೂ ಬದಿಯಲ್ಲಿ ಬೆಟ್ಟ.., ನಡುವೆ ಹಾಲಿನ ಹೊಳೆಯಂತೆ ಹರಿಯುತ್ತಿರುವ ಜಲಧಾರೆಯ ವೈಭವ.., ಜುಳುಜುಳು ನಾದದೊಂದಿಗೆ ಕಣ್ಮನ ತಣಿಸುವ ಸೌಂದರ್ಯದ ಜಲಕನ್ಯೆ ಮಲ್ಲಳ್ಳಿ ಜಲಪಾತ ಮಳೆಗೆ ಮೈದಳೆದಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗು ತ್ತಿರುವದ ರಿಂದ ಮಲ್ಲಳ್ಳಿ ಜಲಪಾತ ದಿನದಿಂದ ದಿನಕ್ಕೆ ತನ್ನ ಸೌಂದರ್ಯ ವನ್ನು ದ್ವಿಗುಣಗೊಳಿಸಿಕೊಳ್ಳುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ. ಮುಂಗಾರಿನ ವಿಳಂಬ ದಿಂದಾಗಿ ಈಗಷ್ಟೇ ತನ್ನ ಸೌಂದರ್ಯ ವನ್ನು ಇಮ್ಮಡಿಸಿಕೊಳ್ಳುತ್ತಿ ರುವ ಮಲ್ಲಳ್ಳಿ ಜಲಧಾರೆಯನ್ನು ನೋಡಲು ಸಾವಿರಾರು ಮಂದಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು, ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿ ದ್ದಾರೆ. ನಿಸರ್ಗ ರಮಣೀಯತೆಯನ್ನು ತನ್ನೊಡಲಲ್ಲಿರಿಸಿಕೊಂಡಿರುವ ಪುಷ್ಪಗಿರಿ ಬೆಟ್ಟತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದ ಬೃಹತ್ ಕಲ್ಲು ಬಂಡೆ ಯಿಂದ ಕೆಳಭಾಗಕ್ಕೆ ಭೋರ್ಗರೆ ಯುತ್ತಾ ಧುಮುಕಿ ಜಲಧಾರೆಯಾಗಿ ಪ್ರವಹಿಸುವ ದೃಶ್ಯ ಮನಮೋಹಕ ವಾಗಿದೆ. ಜಲಪಾತದಲ್ಲಿ ನಡೆಯುವ ಅವಘಡಗಳನ್ನು ತಪ್ಪಿಸಲು ನೀರಿನೊಳಗೆ ಯಾರೂ ಇಳಿಯದಂತೆ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್ ಅಳವಡಿಸಲಾಗಿದೆ. ಜಲಪಾತದ ಮೇಲ್ಭಾಗದಲ್ಲಿರುವ ಬೃಹತ್ ಗಾತ್ರದ ಕಲ್ಲುಗಳು ಅತ್ಯಂತ ಆಕರ್ಷಣೀಯ ಸ್ಥಳವಾಗಿದ್ದು, ಇಲ್ಲಿ ನಿಂತು ಜಲಪಾತದ ಸೌಂದರ್ಯ ವನ್ನು ಕಣ್ಮುಂಬಿಕೊಳ್ಳುತ್ತಾ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಜಲಪಾತದ ಅಂದವನ್ನು ಸೆರೆಹಿಡಿದು ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ. ಗೆಳೆಯರೊಂದಿಗೆ ಸೆಲ್ಫಿ ತೆಗೆದು ಕೊಂಡು ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗುತ್ತಿದ್ದಾರೆ. ಕೊಡಗು ಸೇರಿದಂತೆ ಹೊರ ಜಿಲ್ಲೆಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವದು ವಿಶೇಷ ವಾಗಿದೆ. ರಾಜಧಾನಿ ಬೆಂಗಳೂರಿ ನಿಂದಲೇ ಅತೀ ಹೆಚ್ಚು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುವದು ಜಲಪಾತದ ಆಕರ್ಷಣೀಯ ಸೌಂದರ್ಯಕ್ಕೆ ಸಾಕ್ಷಿಯಾಗಿದೆ. ಪ್ರವಾಸಿಗರ ರಕ್ಷಣೆ, ಮಾಹಿತಿಗಾಗಿ ಇಲಾಖೆಯಿಂದ ಪ್ರವಾಸಿ ಮಿತ್ರರನ್ನು ಇಲ್ಲಿಗೆ ನಿಯೋಜಿಸಲಾಗಿದ್ದು, ಇವರು ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಮಾಹಿತಿ, ಮೊಬೈಲ್ ನಂಬರ್‍ಗಳನ್ನು ನಮೂದಿಸಿಕೊಳ್ಳುವ ಮೂಲಕ ಜಲಪಾತದ ಬಗ್ಗೆ ಮಾಹಿತಿಯನ್ನೂ ನೀಡುತ್ತಿದ್ದಾರೆ. ಜಲಪಾತದ ಬಳಿಗೆ ಮದ್ಯವನ್ನು ಕೊಂಡೊಯ್ಯದಂತೆ, ನೀರಿಗೆ ಇಳಿಯದಂತೆ, ಅಪಾಯ ಕಾರಿ ಸ್ಥಳಗಳತ್ತ ತೆರಳದಂತೆ ಎಚ್ಚರಿಕೆಯನ್ನು ನೀಡುತ್ತಾರೆ.

ಮಲ್ಲಳ್ಳಿ ಜಲಪಾತದವರೆಗೂ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿರು ವದರಿಂದ ಪ್ರವಾಸಿಗರು ನಡೆಯುವ ಪ್ರಯಾಸ ತಪ್ಪಿದಂತಾಗಿದೆ. ಹಾಲ್ನೊರೆ ಯಂತಹ ನೀರಿನ ವೈಭವ.., ಜುಳುಜುಳು ನಾದದೊಂದಿಗೆ ಹೃನ್ಮನ ತಣಿಸುವ ಸೌಂದರ್ಯದ ಖನಿ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಇದು ಸುಸಂದರ್ಭವಾಗಿದೆ.

- ವಿಜಯ್ ಹಾನಗಲ್