ಕರಿಕೆ, ಜು. 24: ಇಲ್ಲಿಗೆ ಸಮೀಪದ ಚೆತ್ತುಕಾಯ ಕುಂಡತ್ತಿಕಾನದಲ್ಲಿ ಗಾಳಿ ಮಳೆಗೆ ಮನೆಯೊಂದು ಬಿದ್ದ ಘಟನೆ ನಡೆದಿದೆ.

ಕುಂಡತ್ತಿಕಾನ ನಿವಾಸಿ ಶಿವಪ್ರಸಾದ್ ಎಂಬವರು ನೂತನವಾಗಿ ಮನೆ ನಿರ್ಮಾಣ ಮಾಡುತ್ತಿದ್ದು, ಅದರ ಸಮೀಪದಲ್ಲಿ ವಾಸಕ್ಕೆಂದು ತಾತ್ಕಾಲಿಕವಾಗಿ ಮರದ ಕಂಬ ಅಳವಡಿಸಿ ಸಿಮೆಂಟ್ ಶೀಟಿನ ಗೋಡೆ ನಿರ್ಮಿಸಿ ಹೆಂಚು ಹಾಕಿ ಗುಡಿಸಲು ನಿರ್ಮಿಸಿ ವಾಸವಾಗಿದ್ದರು.

ಈ ಭಾಗದಲ್ಲಿ ಸುರಿದ ವಿಪರೀತ ಗಾಳಿ ಮಳೆಯಿಂದಾಗಿ ಗುಡಿಸಲು ಮಣ್ಣುಪಾಲಾಗಿದೆ. ಪತಿ-ಪತ್ನಿ ಕೂಲಿ ಕೆಲಸಕ್ಕೆ ಹಾಗೂ ಮಕ್ಕಳು ಶಾಲೆಗೆ ತೆರಳಿದ ಪರಿಣಾಮ ಪ್ರಾಣಪಾಯದಿಂದ ಪಾರಾಗಿದ್ದು, ಅಂದಾಜು ನಲವತ್ತು ಸಾವಿರ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಪ್ರಭಾಕರ್, ಗ್ರಾಮ ಸಹಾಯಕ ಜನಾರ್ಧನ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಇದುವರೆಗೆ ಗ್ರಾಮದಲ್ಲಿ ವರುಣನ ಅಬ್ಬರದ ಪರಿಣಾಮ ಒಂಭತ್ತು ಮನೆಗಳಿಗೆ ಹಾನಿ ಸಂಭವಿಸಿದೆ.