ನಾಪೋಕ್ಲು, ಜು. 22: ಪಟ್ಟಣದ ಮುಖ್ಯರಸ್ತೆಯಲ್ಲಿ ಬೀದಿ ದೀಪಗಳ ವ್ಯವಸ್ಥೆಯಿಲ್ಲದೇ ಸಮಸ್ಯೆಯುಂಟಾಗಿದೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ವ್ಯವಸ್ಥಿತ ಬಸ್ ನಿಲ್ದಾಣವಿಲ್ಲ. ಮುಖ್ಯರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ಜೊತೆಗೆ ಸಂಜೆಯ ವೇಳೆ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಅಧಿಕಗೊಳ್ಳುತ್ತಿದೆ. ಆದರೆ ಮುಖ್ಯ ರಸ್ತೆಯಲ್ಲಿ ಬೀದಿದೀಪಗಳಿಲ್ಲದೆ ಜನರ, ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ನಾಗರಿಕರು ಟೀಕಿಸಿದ್ದಾರೆ.
ಗ್ರಾಮ ಪಂಚಾಯಿತಿ ವತಿಯಿಂದ ಪಟ್ಟಣದಲ್ಲಿ ಹಾಗೂ ಪಟ್ಟಣವನ್ನು ಸಂಪರ್ಕಿಸುವ ಮುಖ್ಯರಸ್ತೆಗಳಲ್ಲಿ ಬೀದಿ ದೀಪಗಳನ್ನು ಈ ಹಿಂದೆಯೇ ಅಳವಡಿಸಲಾಗಿದೆ. ಸಿಡಿಲಿನಿಂದಾಗಿ ವಿದ್ಯುತ್ ತಂತಿಗಳು ಸುಟ್ಟು ಹೋಗಿರುವದರಿಂದ ಬೀದಿ ದೀಪಗಳ ಸಂಪರ್ಕ ಕಡಿತಗೊಂಡಿದೆ. ಈಗಾಗಲೇ ಬಸ್ ನಿಲ್ದಾಣದವರೆಗೆ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಪೆಟ್ರೋಲ್ ಬಂಕ್ವರೆಗೆ ಹಲವು ದೀಪಗಳನ್ನು ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕಿದೆ. ಬೀದಿ ದೀಪಗಳನ್ನು ಅಳವಡಿಸಲು ಗ್ರಾಮ ಪಂಚಾಯಿತಿ ವತಿಯಿಂದ ಟೆಂಡರ್ ಕರೆಯಲಾಗುವದು. ಪಟ್ಟಣದಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ನಾಪೋಕ್ಲು ಪಂಚಾಯಿತಿಗೆ ಕಾಯಂ ಪಿಡಿಓ ನೇಮಕವಾಗಿಲ್ಲ. ಹಿಂದೆ ಇದ್ದವರಿಗೆ ವರ್ಗಾವಣೆ ನೀಡಲಾಗಿದೆ. ತಾತ್ಕಾಲಿಕವಾಗಿ ನೇಮಕಗೊಂಡಿರುವ ಪಿಡಿಓ ಕಾರ್ಯನಿರ್ವಹಿಸುತ್ತಿರುವದರಿಂದ ಟೆಂಡರ್ ಕಾರ್ಯದಲ್ಲಿ ವಿಳಂಬವಾಗಿದೆ ಎಂದರು.
ಪಟ್ಟಣ ಮಾತ್ರವಲ್ಲ, ಬೇತು ಗ್ರಾಮದ ರಸ್ತೆ, ಮಕ್ಕಿ ಶಾಸ್ತಾವು ದೇವಾಲಯದ ರಸ್ತೆ ಸೇರಿದಂತೆ ಹಲವು ಭಾಗಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಕೆಲವು ಭಾಗಗಳಿಗೆ ನಿರ್ವಹಣೆಯ ಸಮಸ್ಯೆ ಎದುರಾಗಿದೆ ಎಂದು ಸಾಬಾ ತಿಮ್ಮಯ್ಯ ಹೇಳಿದರು.