ಕೂಡಿಗೆ, ಜು. 24 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಕಳೆದ ವಾರ್ಡ್ ಸಭೆ ಮತ್ತು ಮಾಸಿಕ ಸಭೆಗಳಲ್ಲಿ ಚರ್ಚಿತಗೊಂಡ ವಿಷಯಗಳ ಪ್ರಸ್ತಾವನೆ ಮಾಡಿದ ಸಂದರ್ಭ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಯೋಜನೆಯಡಿಯಲ್ಲಿ ರೂ. 2 ಲಕ್ಷ ರೂಗಳನ್ನು ಬ್ಯಾಡಗೊಟ್ಟ ಪರಿಶಿಷ್ಟ ಜಾತಿ ಕಾಲೋನಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮೀಸಲಿರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಅಲ್ಲದೆ, ಸೀಗೆಹೊಸೂರು, ಭುವನಗಿರಿ ರಸ್ತೆಯಲ್ಲಿ ಕಲ್ಲು ತುಂಬಿದ ಲಾರಿಗಳು ಸಂಚರಿಸುತ್ತಿರುವ ವಿಷಯದ ಬಗ್ಗೆ ಆ ವಾರ್ಡಿನ ಸದಸ್ಯರಾದ ಟಿ.ಕೆ.ವಿಶ್ವನಾಥ್, ಮಂಜಯ್ಯ, ದಸ್ವಿ ಅವರು ಪ್ರಸ್ತಾಪಿಸಿ, ಕಾನೂನಾತ್ಮಕವಾಗಿ ಕಲ್ಲು ತುಂಬಿದ ಲಾರಿಗಳು ಚಲಿಸುತ್ತಿದ್ದರೂ, ಗ್ರಾಮಾಂತರ ಪ್ರದೇಶದ ರಸ್ತೆಗಳಾಗಿರುವುದರಿಂದ ಲಾರಿಗಳಲ್ಲಿ ತುಂಬಿಸಿದ ಕಲ್ಲುಗಳ ಸಾಮಾಥ್ರ್ಯಕ್ಕನುಗಣವಾಗಿ ರಸ್ತೆ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಯವರು ಕಾರ್ಯೋನ್ಮುಖರಾಗಬೇಕೆಂದು ಸಭೆಯ ಮುಖೇನ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸದಸ್ಯರಾದ ಕೆ.ವೈ.ರವಿ, ರಾಮಚಂದ್ರ, ಹೆಚ್.ಎಸ್.ರವಿ ಅವರು, ಈಗಾಗಲೇ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶುಚಿತ್ವಕ್ಕೆ ಹೆಚ್ಚಿನ ಆಧ್ಯತೆ ನೀಡಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಸುಚಿತ್ವ ಮಾಡಲು ಕ್ರಮಕೈಗೊಳ್ಳಬೇಕು ಎಂದು ಚರ್ಚಿಸಿದರು.

ಹಾರಂಗಿ ಅಣೆಕಟ್ಟೆಯಿಂದ ಈಗಾಗಲೇ ನಾಲೆಗಳಿಂದ ನೀರನ್ನು ಹರಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೆಚ್ಚು ಅಚ್ಚುಕಟ್ಟು ಪ್ರದೇಶವಿರುವುದರಿಂದ ಡಿಸೆಂಬರ್ ಅಂತ್ಯದವರೆಗೆ 200 ಕ್ಯೂಸೆಕ್ ನೀರನ್ನಾದರೂ ಉಪ ನಾಲೆಗಳ ಮೂಲಕ ಹರಿಸಿ ಬೇಸಾಯಕ್ಕೆ ಅನುವು ಮಾಡಿಕೊಡಬೇಕು ಎಂದು ಸದಸ್ಯ ಹೆಚ್.ಎಸ್.ರವಿ ಅವರು ಚರ್ಚಿಸಿ, ಹಾರಂಗಿ ಅಚ್ಚುಕಟ್ಟು ಪ್ರದೇಶದ ಕಾರ್ಯಪಾಲಕ ಅಭಿಯಂತರರಿಗೆ ಪತ್ರ ಸಲ್ಲಿಸಲು ಒಕ್ಕೊರಲಿನ ತೀರ್ಮಾನ ಮಾಡಲಾಯಿತು. ಹಾಗೂ 9/11 ಎನ್‍ಒಸಿ ನೀಡುವ ಬಗ್ಗೆ ಚರ್ಚೆ ನಡೆದವು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಲೀಲಾ ಅವರು ಮಾತನಾಡಿ, ಈಗಾಗಲೇ ಗ್ರಾಮ ಪಂಚಾಯ್ತಿಗೆ ಮನೆಗಳು ಮಂಜೂರಾಗಿದ್ದು, ಅದರಂತೆ ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಲಾಗಿದೆ. ಅಲ್ಲದೆ, ಮಂದಿನ ದಿನಗಳಲ್ಲಿ ಆಶ್ರಯ ಯೋಜನೆಯ ಅಡಿಯಲ್ಲಿ ಮನೆಗಳನ್ನು ಮಂಜೂರು ಮಾಡಲು ಮೇಲ್ಮಟ್ಟದ ಅಧಿಕಾರಿಗಳಿಗೆ ಒತ್ತಾಯಿಸಲು ತೀರ್ಮಾನಿಸಲಾಗಿದೆ ಎಂದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಶ್ವಿನಿ ಅವರು ಮಾತನಾಡಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗಾಗಲೇ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಲಾಗಿದೆ. ಮುಂದಿನ ದಿನಗಳಲ್ಲಿ 14ನೇ ಹಣಕಾಸು ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುವದು. ಗ್ರಾಮಸ್ಥರು ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗೆ ಹೆಸರು ನೋಂದಾಯಿಸಿಕೊಳ್ಳಲು ಸದಸ್ಯರ ಸಹಕಾರ ಮುಖ್ಯ. ಈಗಾಗಲೇ ಈ ಹಿಂದೆ ಸಭೆಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಆ ಅರ್ಜಿಗಳ ಬಗ್ಗೆ ಚರ್ಚೆಗಳನ್ನು ನಡೆಸಲಾಗಿದ್ದು, ಕ್ರಮಕೈಗೊಳ್ಳಲಾಗುವದು ಎಂದರು. ಈ ಸಂದರ್ಭ ಉಪಾಧ್ಯಕ್ಷ ಗಿರೀಶ್‍ಕುಮಾರ್ ಹಾಗೂ ಸದಸ್ಯರು ಸಭೆಯಲ್ಲಿದ್ದರು.