ಮಡಿಕೇರಿ, ಜು. 25: ಕಳೆದ ವರ್ಷ ಸಂಭವಿಸಿದ ಬೆಳೆ ಹಾನಿ ಪರಿಹಾರ ಸಂಬಂಧ ಇದುವರೆಗೆ ಸುಮಾರು 47.96 ಕೋಟಿ ರೂ.ವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜು ಮಾಹಿತಿ ನೀಡಿದ್ದಾರೆ. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಅವರು ಮಾಹಿತಿ ನೀಡಿದರು. ಕೃಷಿ ಇಲಾಖೆ ವತಿಯಿಂದ ಕೃಷಿ ಯಂತ್ರೋಪಕರಣಗಳ ವಿತರಣೆ, ಕೃಷಿ ಹೊಂಡ ನಿರ್ಮಾಣ, ಭತ್ತ ಬೀಜ ವಿತರಣೆ, ಹಾಗೆಯೇ ಸುಮಾರು 2,574 ಟಾರ್ಪಲ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಸದಸ್ಯ ಶ್ರೀನಿವಾಸ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅನುದಾನ ದಡಿ ಸಹಾಯಧನ ಕಲ್ಪಿಸಬೇಕು. ಹೆಚ್ಚುವರಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸುವಂತಾಗ ಬೇಕು ಎಂದು ಮನವಿ ಮಾಡಿದರು.ಕೃಷಿ ಯಂತ್ರೋಪಕರಣಗಳನ್ನು ಸ್ಥಳೀಯ ವ್ಯಾಪಾರಿಗಳಿಂದ ಖರೀದಿಸ ಬೇಕು, ಹೊರ ಜಿಲ್ಲೆಯಿಂದ ಖರೀದಿ ಮಾಡಬಾರದು ಎಂದು ಅಧ್ಯಕ್ಷ ಹರೀಶ್ ಸೂಚಿಸಿದರು. ಮೊದಲೇ ಜಿಲ್ಲೆಯ (ಮೊದಲ ಪುಟದಿಂದ) ವ್ಯಾಪಾರಿಗಳು ವ್ಯಾಪಾರವಿಲ್ಲದೆ ಕಷ್ಟದಲ್ಲಿದ್ದಾರೆ. ಅವರಿಗೂ ವ್ಯಾಪಾರ ಕೊಡಿ ಎಂದು ಹೇಳಿದರು.
ಕಸ ವಿಲೇವಾರಿ ಘಟಕ
ಸದಸ್ಯರಾದ ಶಿವುಮಾದಪ್ಪ ಅವರು ಕುಟ್ಟ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಂಬಂಧಿಸಿದಂತೆ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಅವರಿಂದ ಪ್ರಶಸ್ತಿ ಪಡೆದಿದೆ. ಆದರೆ ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಇದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಆದರೂ ಸಹ ಇಂತಹ ದೂರುಗಳು ಬರುವದರಿಂದ ಬೇಸರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ಅವರು ಜಿಲ್ಲೆಯ 104 ಗ್ರಾ.ಪಂ.ಗಳಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಕ್ರಮವಹಿಸಲಾಗಿದೆ. ಕುಟ್ಟ ಗ್ರಾ.ಪಂ. ಕಸ ವಿಲೇವಾರಿ ಸಂಬಂಧಿಸಿದಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಿದ ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಅವರು ಕುಟ್ಟ ಗ್ರಾ.ಪಂ.ಗೆ ಭೇಟಿ ನೀಡಲಾಗಿತ್ತು, ಕುಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಉತ್ತಮ ಘನತ್ಯಾಜ್ಯ ನಿರ್ವಹಣೆ ಮಾಡಲಾಗು ತ್ತಿದೆ ಎಂದು ಹೇಳಿದರು.
ಜಿ.ಪಂ. ಸದಸ್ಯೆ ಪಂಕಜ ಅವರು ಮಾಯಮುಡಿ ಗ್ರಾಮದಲ್ಲಿನ ಪ್ರೌಢಶಾಲಾ ಮೈದಾನವನ್ನು ಸಮತಟ್ಟು ಮಾಡಬೇಕು. ಶಾಲಾ ರಸ್ತೆ ಕುಸಿದಿದ್ದು, ಅದನ್ನು ಸರಿಪಡಿಸುವಂತಾಗಬೇಕು ಎಂದು ಒತ್ತಾಯಿಸಿದರು. ಮಾಯ ಮುಡಿ ಪ್ರೌಢ ಶಾಲೆಗೆ ಖಾಯಂ ಶಿಕ್ಷಕರನ್ನು ನಿಯೋಜಿಸು ವಂತಾಗಬೇಕು ಎಂದು ಹೇಳಿದರು.
ಸದಸ್ಯೆ ಸುನಿತಾ ಅವರು ತಮ್ಮ ಜಿ.ಪಂ. ವ್ಯಾಪ್ತಿಯ ಶಾಲೆಗಳಿಗೆ ಪೀಠೋಪಕರಣ ಮತ್ತು ಪಾಠೋಪಕರಣ ಒದಗಿಸಬೇಕು ಎಂದರು. ಪೂರ್ಣಿಮ ಗೋಪಾಲ್ ಅವರು ಸೋಮವಾರಪೇಟೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರೊಬ್ಬರು ಗೈರು ಆಗುತ್ತಿದ್ದು, ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಸಮುದಾಯ ಆಸ್ಪತ್ರೆಗಳಲ್ಲಿ ವೈದ್ಯರ ಖಾಲಿ ಹುದ್ದೆ ಭರ್ತಿ ಸಂಬಂಧ ಮಾಹಿತಿ ನೀಡುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ವೈದ್ಯರ ಕೊರತೆಯಿದ್ದು, ಹಂತ ಹಂತವಾಗಿ ಭರ್ತಿ ಮಾಡಲಾಗುವದು ಎಂದು ಜಿ.ಪಂ. ಸಿಇಒ ತಿಳಿಸಿದರು.
ಕರಿಕೆ, ತೋಳೂರು ಶೆಟ್ಟಳ್ಳಿ, ಗೌಡಳ್ಳಿ, ದೊಡ್ಡ ಮಳ್ತೆ, ನಾಪೋಕ್ಲು ಆಸ್ಪತ್ರೆಗಳಿಗೆ ವೈದ್ಯರನ್ನು ನಿಯೋಜಿಸು ವಂತೆ ಸದಸ್ಯರಾದ ಕವಿತಾ ಪ್ರಭಾಕರ್, ದೀಪಕ್, ಮುರಳಿ ಕರುಂಬಮಯ್ಯ ಅವರು ಮನವಿ ಮಾಡಿದರು.
ಮೂಕೊಂಡ ವಿಜು ಸುಬ್ರಮಣಿ ಅವರು ಸಿದ್ದಾಪುರ ಮತ್ತು ಪಾಲಿಬೆಟ್ಟ ಮತ್ತಿತರ ಕಡೆಗಳಲ್ಲಿ ಡೆಂಗ್ಯು ನಿಯಂತ್ರಣ ಮಾಡಬೇಕಿದೆ. ಈ ಭಾಗದಲ್ಲಿ ಬಡ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಸಂಬಂಧ ಹೆಚ್ಚಿನ ಜಾಗೃತಿ ಮೂಡಿಸ ಬೇಕು ಎಂದು ಅವರು ಹೇಳಿದರು.
ಸದಸ್ಯೆ ಶ್ರೀಜಾ ಸಾಜಿ ಅವರು ಆರೋಗ್ಯ ರಕ್ಷಾ ಸಮಿತಿ ಸಭೆಗಳು ನಿರಂತರವಾಗಿ ನಡೆಯಬೇಕು. ಸಮಿತಿ ಸದ್ಯರು ಪಾಲ್ಗೊಳ್ಳುವಂತಾಗಬೇಕು ಎಂದು ಹೇಳಿದರು.
ಮಾದಾಪುರ ಆಸ್ಪತ್ರೆಗೆ ಹೆಚ್ಚುವರಿ ವೈದ್ಯರನ್ನು ನಿಯೋಜಿಸುವಂತಾಗ ಬೇಕು ಎಂದು ಕುಮುದಾ ಧರ್ಮಪ್ಪ ಒತ್ತಾಯಿಸಿದರು.
ಕ್ರೀಡಾ ವಸತಿ ಶಾಲೆಗಳಲ್ಲಿ ಕಡುಬಡ ಮಕ್ಕಳಿಗೆ ಪ್ರವೇಶ ಅವಕಾಶ ನೀಡಬೇಕು ಎಂದು ಶ್ರೀಜಾ ಸಾಜಿ ಅವರು ಮನವಿ ಮಾಡಿದರು.
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಅವರು ಪೋಷಕರು ವಿದ್ಯಾರ್ಥಿಗಳು ಇತರರ ಸಭೆಯನ್ನು ಕಾಲ ಕಾಲಕ್ಕೆ ಕರೆಯಲಾಗುತ್ತದೆ. ಕ್ರೀಡಾ ವಸತಿ ಶಾಲೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಲಿಕೆ ಜೊತೆಯಲ್ಲಿ ಕ್ರೀಡೆಯಲ್ಲಿ ಮುಂದೆ ಬರಲು ಅವಕಾಶ ಮಾಡಲಾಗುತ್ತದೆ ಎಂದರು. ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ವಿದ್ಯಾರ್ಥಿಗಳ ಕಾರ್ಯಕ್ಷಮತೆ ಮತ್ತು ಪ್ರತಿಭೆ ಮೇಲೆ ಪ್ರವೇಶ ನೀಡಲಾಗುತ್ತದೆ ಎಂದರು.
ಸದಸ್ಯ ಪ್ರಥ್ಯು ಅವರು ನಗರದ ಯುವ ಭವನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಡೆಯುತ್ತಿದ್ದು, ಸದ್ಯ ತಾತ್ಕಾಲಿಕವಾಗಿ ಯಾದರೂ ಯುವ ಭವನದವರಿಗೆ ಒಂದು ಕೊಠಡಿ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ತಿತಿಮತಿ ಅಥವಾ ಮಾಯಾಮುಡಿಯಲ್ಲಿ ಬಯಲು ರಂಗ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಬೇಕು ಎಂದು ಸದಸ್ಯೆ ಪಂಕಜ ಹೇಳಿದರು. ಕರ್ನಾಟಕ ಮತ್ತು ಕೇರಳ ಗಡಿಭಾಗ ಕರಿಕೆಯಲ್ಲಿ ಸ್ವಾಗತ ಕಮಾನು ನಿರ್ಮಾಣ ಮಾಡಬೇಕು ಎಂದು ಕವಿತಾ ಪ್ರಭಾಕರ್ ಅವರು ಸಲಹೆ ಮಾಡಿದರು.ಕೋರಂಗಾಲ ಶಾಲೆಯಲ್ಲಿ ಅಡುಗೆಯವರಿಲ್ಲದೆ ತೊಂದರೆ ಆಗುತ್ತಿದೆ; ಅಡುಗೆಯವರನ್ನು ನೇಮಿಸಬೇಕೆಂದು ಕೋರಿದರಲ್ಲದೆ, ಭಾಗಮಂಡಲ ಹಾಗೂ ಕರಿಕೆಗೆ ಖಾಯಂ ವೈದ್ಯರನ್ನು ನೇಮಕ ಮಾಡುವದಲ್ಲದೆ, ವಾಹನ ನಿಯೋಜಿ ಸುವಂತೆ ಮನವಿ ಮಾಡಿದರು.
ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ, ಸದಸ್ಯರಾದ ಕೆ.ಪಿ. ಚಂದ್ರಕಲಾ, ಲೀಲಾವತಿ, ಬಿ.ಕಲಾವತಿ ಪೂವಪ್ಪ, ಕೆ.ಕೆ. ಕುಮಾರ, ಕೆ.ಎಂ.ಲತೀಫ್ ಇತರರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿ ಗಮನ ಸೆಳೆದರು.