ನಾಪೋಕ್ಲು, ಜು. 24: ಚೆಯ್ಯಂಡಾಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನರಿಯಂದಡ ಗ್ರಾಮದಲ್ಲಿ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳಲ್ಲಿ ಕಾಡಾನೆಗಳ ಹಿಂಡಿನ ದಾಳಿಯಿಂದಾಗಿ ಅಪಾರ ಪ್ರಮಾಣದ ಕೃಷಿಫಸಲುಗಳು ಧ್ವಂಸಗೊಂಡಿದ್ದು, ಕಾಫಿ ಬೆಳೆಗಾರರು ಮತ್ತು ಕೃಷಿಕರಲ್ಲಿ ಆತಂಕ ಮೂಡಿಸಿವೆ.
ನರಿಯಂದಡ ಗ್ರಾಮದ ಪೊಕ್ಕೊಳಂಡ್ರ, ಬೊವ್ವೇರಿಯಂಡ, ಬಿಲಿಯಂಡ್ರ, ಮಕ್ಕಿಮನೆ, ತೋಟಂಬೈಲು ಕುಟುಂಬಸ್ಥರ ತೋಟ ಹಾಗೂ ಗದ್ದೆಗಳಿಗೆ ದಾಳಿ ಇಟ್ಟಿರುವ ಮರಿಯಾನೆ ಸಹಿತ ಏಳು ಕಾಡಾನೆಗಳ ಹಿಂಡು ಕಾಫಿತೋಟ ಹಾಗೂ ಭತ್ತದ ಗದ್ದೆಗಳಿಗೆ ದಾಳಿ ಇಟ್ಟಿರುವ ಕಾಡಾನೆಗಳ ಹಿಂಡು ಫಸಲುಭರಿತ ಕಾಫಿಗಿಡಗಳು ಸೇರಿದಂತೆ ನಾಟಿ ಮಾಡಿದ ಭತ್ತದ ಪೈರುಗಳನ್ನು ನಾಶಪಡಿಸಿವೆ.
ಪ್ರಸಕ್ತ ಮಳೆಯಲ್ಲಿ ಚೇಲಾವರ ಹೊಳೆ ತುಂಬಿಹರಿಯುತ್ತಿರುವದರಿಂದ ಮರಿಯಾನೆ ಜೊತೆಗಿರುವ ಆರು ಕಾಡಾನೆಗಳ ಹಿಂಡಿಗೆ ಹೊಳೆ ದಾಟಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನರಿಯಂದಡ ಗ್ರಾಮದ ತೋಟಗಳಲ್ಲಿ ಬೀಡುಬಿಟ್ಟಿವೆ. ಗ್ರಾಮದ ಮನೆಗಳ ಸಮೀಪ ಸುಳಿದಾಡುತ್ತಿರುವ ಕಾಡಾನೆಗಳ ಹಿಂಡಿನಿಂದಾಗಿ ಗ್ರಾಮಸ್ಥರು ಮನೆಯಿಂದ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನರಿಯಂದಡ ಗ್ರಾಮದ ಪೊಕ್ಕೊಳಂಡ್ರ ಪೂಣಚ್ಚ ಅವರ ಗದ್ದೆ ಸಂಪೂರ್ಣ ನಾಶವಾಗಿದೆ. ಪೊಕ್ಕೊಳಂಡ್ರ ನಾಣಯ್ಯ ಅವರ ತೋಟದ ತೆಂಗು, ಅಡಿಕೆ, ಬಾಳೆ ಗಿಡಗಳು ಸೇರಿ ಕಾಫಿತೋಟಕ್ಕೆ ಲಗ್ಗೆ ಇಟ್ಟಿರುವ ಕಾಡಾನೆಗಳ ಹಿಂಡು ಫಸಲುಭರಿತ ಕಾಫಿಗಿಡಗಳನ್ನು ತುಳಿದು ಧ್ವಂಸಗೊಳಿಸಿರುವದರಿಂದ ವರ್ಷಪೂರ್ತಿ ಕಷ್ಟಪಟ್ಟು ಬೆಳೆಸಿದ ಕೃಷಿಫಸಲುಗಳು ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗಟ್ಟಲು ಪ್ರಯತ್ನಿಸಿದರಾದರೂ ತಿರುಗಿ ಬೀಳುವ ಕಾಡಾನೆಗಳು ಕಾಫಿತೋಟಗಳಲ್ಲಿ ಮತ್ತಷ್ಟು ಫಸಲುಗಳನ್ನು ಧ್ವಂಸಗೊಳಿಸಿವೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳವದರೊಂದಿಗೆ ಕೃಷಿಫಸಲು ನಷ್ಟಕ್ಕೊಳಗಾಗಿರುವ ಕೃಷಿಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ನರಿಯಂದಡ ಗ್ರಾಮದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.