ಕುಶಾಲನಗರ, ಜು. 24: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೊರತೆಯಿಂದ ನಾಟಿ ಕಾರ್ಯ ವಿಳಂಭವಾಗಿದ್ದು ಪ್ರಸಕ್ತ ಚುರುಕು ಗೊಂಡಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್. ಎಸ್. ರಾಜಶೇಖರ್ ತಿಳಿಸಿದ್ದಾರೆ.
ಅವರು ಶಕ್ತಿಯೊಂದಿಗೆ ಮಾಹಿತಿ ನೀಡಿದ್ದು ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ 4 ಸಾವಿರ ಹೆಕ್ಟೇರ್ ವ್ಯಾಪ್ತಿಯ ಭೂಮಿಯಲ್ಲಿ ಮುಸುಕಿನ ಜೋಳ ಬೆಳೆಯುವ ಗುರಿ ಹೊಂದಲಾಗಿದ್ದು 2890 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಬೆಳೆ ಚೇತರಿಸಿಕೊಳ್ಳುತ್ತಿರುವದಾಗಿ ತಿಳಿಸಿದ್ದಾರೆ.
ರೈತರಿಗೆ ವಿವಿಧ ತಳಿಗಳಾದ ಗಂಗಾ ಕಾವೇರಿ, ಪಯನೀರ್, ಪ್ರಿನ್ಸ್, ಕಾವೇರಿ ಸೀಡ್ಸ್ ಬೀಜ ಬಿತ್ತಲು ಸಹಾಯಧನ ಕಲ್ಪಿಸಲಾಗಿದೆ ಎಂದರಲ್ಲದೆ ಹೋಬಳಿಯಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು ಕೇವಲ 450 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಕೊರತೆಯಿಂದ ನಾಟಿ ಕಾರ್ಯ ವಿಳಂಬಗೊಳ್ಳುತ್ತಿದೆ. ರೈತರಿಗೆ ಕೃಷಿ ಇಲಾಖೆ ಮೂಲಕ ಹೈಟೆಕ್ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲಾಗುತ್ತಿದೆ. ಕಳೆ ತೆಗೆಯುವ ಯಂತ್ರ, ಪವರ್ ಸ್ಪ್ರೇಯರ್ಸ್ ಸಹಾಯಧನ ನೀಡುವ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ ಎಂದು ರಾಜಶೇಖರ್ ತಿಳಿಸಿದ್ದಾರೆ.
ಭತ್ತದ ಸಸಿಮಡಿಗೆ ಎಲ್ಲೆಡೆ ನಾಟಿ ಮಾಡಲಾಗಿದೆ. ರೋಗ ಕೀಟ ಹತೋಟಿಗೆ ಕೂಡ ಕೀಟನಾಶಕ ಗಳನ್ನು ನೀಡಿ ಆ ಬಗ್ಗೆ ರೈತರಿಗೆ ಮಾಹಿತಿ ಒದಗಿಸಲಾಗಿದೆ ಎಂದ ಅವರು ಹೆಚ್ಚಿನ ಮಾಹಿತಿಗೆ ಕುಶಾಲನಗರ ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.
- ವರದಿ : ಚಂದ್ರಮೋಹನ್