ಕುಶಾಲನಗರ, ಜು. 25: ಇತಿಹಾಸದ ಕಾಲಘಟ್ಟದಲ್ಲಿ ಜನರ ಆಲೋಚನೆಗಳನ್ನು ಬದಲಿಸುವಲ್ಲಿ ಪತ್ರಿಕೆಗಳು ಅಭೂತಪೂರ್ವ ಪಾತ್ರ ವಹಿಸಿದೆ ಎಂದು ಕೂಡಿಗೆ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ವಿ.ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಸ್ಥಳೀಯ ಕನ್ನಡ ಭಾರತಿ ಪಪೂ ಕಾಲೇಜಿನ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆಗಳು ಜನರ ಅವಿಭಾಜ್ಯ ಅಂಗವಾಗುವದರೊಂದಿಗೆ ದಿನನಿತ್ಯದ ಜೀವನದಲ್ಲಿ ಒಡನಾಡಿಯಂತೆ ಹಾಸುಹೊಕ್ಕಾಗಿದ್ದು ಪತ್ರಕರ್ತರು ಹೊಣೆಗಾರಿಕೆ ಅರಿತು ಕೆಲಸ ನಿರ್ವಹಿಸಬೇಕಾಗಿದೆ ಎಂದರು. ವಿದ್ಯಾರ್ಥಿಗಳು ನಕಾರಾತ್ಮಕ ಚಿಂತನೆ ಮಾಡುವದು ಅಪಾಯಕಾರಿ ಬೆಳವಣಿಗೆಯಾಗಿದ್ದು ಮಾದಕ ವಸ್ತುಗಳ ವ್ಯಸನಿಗಳಾಗದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕೆÀ್ಷ ಸವಿತಾ ರೈ, ಪತ್ರಿಕಾ ರಂಗದಲ್ಲಿ ವಿಷಯ ಜ್ಞಾನ ಅಗತ್ಯವಾಗಿದ್ದು ನಾಗಾಲೋಟ ಸಲ್ಲದು ಎಂದರಲ್ಲದೆ, ರಂಗದಲ್ಲಿ ಮಾನದಂಡದ ಅವಶ್ಯಕತೆ ಇದೆ. ಪ್ರತಿಯೊಬ್ಬರೂ ಗುರು ಮತ್ತು ಗುರಿ ಹೊಂದುವ ಮೂಲಕ ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಜಯವರ್ಧನ್ ಮಾತನಾಡಿ, ಪತ್ರಿಕೆಗಳ ಮೂಲಕ ಸಮಾಜದ ಆಗುಹೋಗುಗಳ ಬಗ್ಗೆ ಮಾಹಿತಿ ಅರಿಯಲು ಸಾಧ್ಯ. ಈ ಮೂಲಕ ಪತ್ರಿಕೆಗಳು ಸಮಾಜಕ್ಕೆ ಗುರುವಿನ ಸ್ಥಾನ ಕಲ್ಪಿಸಿದೆ ಎಂದು ಅಭಿಪ್ರಾಯಿಸಿದರು.
ಸಂಘದ ರಾಷ್ಟ್ರೀಯ ಒಕ್ಕೂಟದ ನಿರ್ದೇಶಕ ಎಸ್.ಎ. ಮುರಳೀಧರ್ ಮಾತನಾಡಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಹೊಂದಬೇಕಾದಲ್ಲಿ ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಬೇಕೆಂದು ಕರೆ ನೀಡಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಉತ್ತಮ ಬರವಣಿಗೆಗಳ ಮೂಲಕ ಸಮಾಜದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಪತ್ರಕರ್ತರಿಗೆ ಅವಕಾಶವಿದೆ ಎಂದರು.ಕುಶಾಲನಗರ ಪತ್ರಕರ್ತರ ಸಂಘದ ಅಧ್ಯಕ್ಷ ರಘು ಹೆಬ್ಬಾಲೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಇಂಟರ್ನ್ಯಾಷನಲ್ ಫೌಂಡೇಶನ್ ಗೌರವ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಎಂ.ಎನ್.ಚಂದ್ರಮೋಹನ್, ಪತ್ರಕರ್ತರ ಸಂಘದ ಜಿಲ್ಲಾ ಮತ್ತು ತಾಲೂಕು ಸಂಘದ ಪ್ರಶಸ್ತಿ ವಿಜೇತ ಸುನೀಲ್ ಪೊನ್ನೇಟಿ ಮತ್ತು ಕೆ.ಕೆ.ನಾಗರಾಜಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಕಾರ್ಯದರ್ಶಿ ಬಿ.ಎಸ್.ಲೋಕೇಶ್ ಸಾಗರ್ ಸ್ವಾಗತಿಸಿ, ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು, ಕುಡೆಕಲ್ ಗಣೇಶ್ ಸನ್ಮಾನಿತರನ್ನು ಪರಿಚಯಿಸಿದರು, ಸುನೀಲ್ ಪೊನ್ನೇಟಿ ಕಾರ್ಯಕ್ರಮ ನಿರೂಪಿಸಿ, ಕೆ.ಕೆ. ನಾಗರಾಜಶೆಟ್ಟಿ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಕಾಲೇಜು ಆವರಣದಲ್ಲಿ ಗಿಡ ನೆಡಲಾಯಿತು. ಕಾಲೇಜು ಪ್ರಾಂಶುಪಾಲ ಪುರುಷೋತ್ತಮ್, ಸಂಘದ ಪದಾಧಿಕಾರಿಗಳಾದ ಎಚ್.ವಿ.ವಿನೋದ್, ಎಚ್.ಜಿ.ಜಗದೀಶ್, ಎನ್.ಎ.ಅಶ್ವಥ್, ಕೆ.ಎಸ್.ನಾಗೇಶ್, ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಪ್ರೆಸ್ ಕ್ಲಬ್ ಟ್ರಸ್ಟ್ನ ಗೌರವಾಧ್ಯಕ್ಷ ಪ್ರಭುದೇವ್ ಮತ್ತಿತರರು ಇದ್ದರು.