ಸೋಮವಾರಪೇಟೆ, ಜು.25: ಇಲ್ಲಿನ ಪಟ್ಟಣ ಪಂಚಾಯಿತಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ತಾಲೂಕು ಕಚೇರಿಯ ಕಟ್ಟಡ ಮಳೆಗಾಲದಲ್ಲಿ ಸೋರುತ್ತಿರುವದರಿಂದ ಕೆಲವೊಂದು ಕೊಠಡಿಗಳಲ್ಲಿರುವ ಕಡತಗಳನ್ನು ನೀರಿನಿಂದ ರಕ್ಷಿಸಲು ಪಟ್ಟಣ ಪಂಚಾಯಿತಿಯ ಹಳೆಯ ಕಟ್ಟಡವನ್ನು ಒದಗಿಸುವಂತೆ ತಹಶೀಲ್ದಾರ್ ಗೋವಿಂದ ರಾಜು ಅವರು ಮನವಿ ಸಲ್ಲಿಸಿದ್ದ ಹಿನ್ನೆಲೆ, ಜಿಲ್ಲಾಧಿಗಳು ಪ.ಪಂ.ನ ಹಳೆಯ ಕಟ್ಟಡವನ್ನು ಪರಿಶೀಲಿಸಿದರು.

ತಾಲೂಕು ಕಚೇರಿಯ ಕೆಲ ವಿಭಾಗಗಳನ್ನು ಪಟ್ಟಣ ಪಂಚಾಯಿತಿಯ ಕಟ್ಟಡಕ್ಕೆ ಸ್ಥಳಾಂತರಿಸಿದರೆ ಪ.ಪಂ. ಕೆಲಸ ಕಾರ್ಯಗಳಿಗೆ ಸಮಸ್ಯೆ ಎದುರಾಗುತ್ತದೆ. ಪಂಚಾಯಿತಿಯ ಹಲವಷ್ಟು ಉಪಕರಣ, ಸಾಮಗ್ರಿಗಳನ್ನು ದಾಸ್ತಾನಿರಿಸಲು ಹಳೆಯ ಕಟ್ಟಡದ ಅವಶ್ಯಕತೆಯಿದೆ ಎಂದು ಸ್ಥಳದಲ್ಲಿದ್ದ ಸದಸ್ಯರುಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಇದೇ ಸಂದರ್ಭ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು 9 ತಿಂಗಳು ಕಳೆದರೂ ಇಂದಿಗೂ ಆಡಳಿತ ಮಂಡಳಿ ರಚನೆಯಾಗಿಲ್ಲ. ಇದರಿಂದಾಗಿ ಪಂಚಾಯಿತಿ ಅಭಿವೃದ್ಧಿ ನಿಂತ ನೀರಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಅವಕಾಶವೂ ಇಲ್ಲವಾಗಿದೆ ಎಂದು ಸದಸ್ಯರುಗಳು? ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಇದರೊಂದಿಗೆ ಪಟ್ಟಣ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್, ಆರೋಗ್ಯ ನಿರೀಕ್ಷಕ, ರಾಜಸ್ವ ನಿರೀಕ್ಷಕರ ಹುದ್ದೆಗಳು ಖಾಲಿ ಉಳಿದಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಶುಚಿತ್ವವೂ ಇಲ್ಲವಾಗಿದೆ. ಈ ಹಿನ್ನೆಲೆ ತಕ್ಷಣ ಆಡಳಿತ ಮಂಡಳಿ ರಚನೆಗೆ ಕ್ರಮ ಕೈಗೊಳ್ಳಬೇಕೆಂದು ಸದಸ್ಯರುಗಳು ಮನವಿ ಸಲ್ಲಿಸಿದರು.

ಈ ಬಗ್ಗೆ ತಾವು ಸರ್ಕಾರದ ಗಮನ ಸೆಳೆಯುವದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಕಡುಬಡವರು ನಿವೇಶನ, ಮನೆ ಇಲ್ಲದೇ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರದ ಜಾಗ ಗುರುತಿಸಿ ಬಡ ಮಂದಿಗೆ ನಿವೇಶನ ಒದಗಿಸಲು ಕ್ರಮ ವಹಿಸಬೇಕೆಂದು ಸದಸ್ಯ ಪಿ.ಕೆ. ಚಂದ್ರು ಅವರು ಮನವಿ ಮಾಡಿದರು.

ಈ ಸಂದರ್ಭ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಪ.ಪಂ. ಮುಖ್ಯಾಧಿಕಾರಿ ನಟರಾಜ್, ಅಭಿಯಂತರ ವೀರೇಂದ್ರ, ಪಂಚಾಯಿತಿ ಸದಸ್ಯರುಗಳಾದ ಬಿ.ಆರ್. ಮಹೇಶ್, ಶೀಲಾ ಡಿಸೋಜ, ಜಯಂತಿ ಶಿವಕುಮಾರ್, ನಳಿನಿ ಗಣೇಶ್ ಅವರುಗಳು ಉಪಸ್ಥಿತರಿದ್ದರು.

ನಂತರ ತಾಲೂಕು ಕಚೇರಿಗೆ ತೆರಳಿದ ಜಿಲ್ಲಾಧಿಕಾರಿಗಳು, ಶಿಥಿಲಾವಸ್ಥೆಗೆ ತಲುಪುತ್ತಿರುವ ಕಟ್ಟಡವನ್ನು ಪರಿಶೀಲಿಸಿದರು. ಕಟ್ಟಡ ದುರಸ್ತಿಗೆ ನೂತನ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಹಶೀಲ್ದಾರ್‍ಗೆ ಸೂಚಿಸಿದರು.