ಮಡಿಕೇರಿ, ಜು. 25: ಮೂರು ದಶಕಗಳ ಹಿಂದೆ ದಾನಿಗಳು ನೀಡಿರುವ ನಿವೇಶನದಲ್ಲಿ ಸರಕಾರದಿಂದ ಕಟ್ಟಡವನ್ನು ನಿರ್ಮಿಸುವದರೊಂದಿಗೆ ಆರಂಭಗೊಂಡಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ಇಂದು ತ್ರಿಶಂಕು ಸ್ಥಿತಿಯಲ್ಲಿದೆ. ಪರಿಣಾಮ ಇಲ್ಲಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಿತ್ಯವೂ ಆತಂಕದ ನಡುವೆ ಪಠ್ಯಕ್ರಮಗಳಲ್ಲಿ ತೊಡಗುವಂತಾಗಿದೆ.
ಕುಶಾಲನಗರದಿಂದ ಕೂಡಿಗೆಯತ್ತ ತೆರಳುವ ಹೆದ್ದಾರಿಯ ಅಂಚಿನಲ್ಲಿ ಈ ಗುಮ್ಮನಕೊಲ್ಲಿ ಶಾಲೆ ಇದ್ದು, ಒಂದನೇ ತರಗತಿಯಿಂದ ಏಳನೆಯ ತರಗತಿ ತನಕ ಸಾವಿರಾರು ಮಂದಿ ವಿದ್ಯಾರ್ಥಿಗಳು ಕಳೆದ ಮೂರು ದಶಕಗಳಲ್ಲಿ ವಿದ್ಯೆ ಕಲಿತು ಹೋಗಿದ್ದಾಗಿದೆ.
ಪ್ರಸಕ್ತ ಈ ಶಾಲೆಯಲ್ಲಿ ಸುಮಾರು 85 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಹೆದ್ದಾರಿಯ ಅಂಚಿನಲ್ಲಿರುವ ಈ ಶಾಲೆಗೆ ತಡೆಗೋಡೆ ಇತ್ಯಾದಿ ಇಲ್ಲದಿರುವ ಕಾರಣ ನಿರಂತರ ವಾಹನಗಳ ಸಂಚಾರ ನಡುವೆ ಶಿಕ್ಷಕರು ಕ್ಷಣ ಕ್ಷಣವೂ ಆತಂಕಪಡುತ್ತಿದ್ದಾರೆ. ಮಕ್ಕಳು ರಸ್ತೆಯತ್ತ ತೆರಳದಂತೆ ಹರಸಹಾಸ ಪಡುತ್ತಿದ್ದಾರೆ.
ವಿವಾದದ ಗೂಡು: ಮೇಲ್ನೋಟಕ್ಕೆ ಇದೊಂದು ಸುಂದರ ಸರಕಾರಿ ಶಾಲೆಯಂತೆ ಗೋಚರಿಸಿದರೂ ಸದಾ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿರುವ ಗೂಡು ಇದಾಗಿದೆ. ಕಾರಣ 1980ರ ದಶಕದಲ್ಲಿ ಗ್ರಾಮದ ಹಿರಿಯರೊಬ್ಬರು ನೀಡಿರುವ ಶಾಲಾ ನಿವೇಶನವನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಕಾರದ ಹೆಸರಿಗೆ ದಾಖಲೆ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ಇನ್ನೊಂದೆಡೆ ಈ ಶಾಲೆಗೆ ಹೊಂದಿಕೊಂಡಂತೆ ಶ್ರೀ ಬಸವಣ್ಣ ದೇವರ ಗುಡಿಯಿದ್ದು, ತಕರಾರು ಹುಟ್ಟಿಕೊಳ್ಳಲು ಪ್ರಮುಖ ಕಾರಣವಾಗಿದೆ. ಸರಕಾರದಿಂದ ನಡೆಸಿಕೊಂಡು ಬಂದಿರುವ ಶಾಲೆಯ ನಿವೇಶನಕ್ಕೆ ಸಂಬಂಧಿಸಿದಂತೆ ಇದೀಗ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಲಾಗಿದೆ.
ಊರಿನ ಹಿರಿಯರೊಬ್ಬರು ಅಂದು ನೀಡಿರುವ ಈ ಶಾಲೆಯ ನಿವೇಶನವನ್ನು ಹಿಂಪಡೆಯುವ ಯತ್ನದಲ್ಲಿ ಜಾಗ ಮಾಲೀಕರ ಮೊಮ್ಮಕ್ಕಳು ತಕರಾರು ತೆಗೆದಿದ್ದಾರೆ. ಪಕ್ಕದ ದೇವಾಲಯ ಸಮಿತಿಯಿಂದಲೂ ವ್ಯಾಜ್ಯ ಹೂಡಲಾಗಿದೆ ಎಂದು ತಿಳಿದು ಬಂದಿದೆ. ಪರಿಣಾಮವಾಗಿ ವಿವಾದ ನ್ಯಾಯಾಲಯದಲ್ಲಿರುವ ಮೇರೆಗೆ, ಯಥಾಸ್ಥಿತಿ ಕಾಯ್ದುಕೊಳ್ಳಬೇಕಿದೆ.
ಆ ಸಲುವಾಗಿ ಇಲ್ಲಿ ಶಾಲಾ ಆವರಣಕ್ಕೆ ತಡೆಗೋಡೆ ನಿರ್ಮಿಸಲು ಅಸಾಧ್ಯವಾಗಿದೆ. ಹೀಗಾಗಿ ಶಾಲಾ ಅವಧಿ ಮುಗಿದ ನಂತರ ಈ ಪರಿಸರದಲ್ಲಿ ಅಡ್ಡಾಡಿ ದನಗಳು, ಗಾಂಜಾ ಅಡ್ಡೆ-ಪುಂಡರ ಹಾವಳಿಗೆ ಸಿಲುಕುವಂತಾಗಿದೆ ಎಂದು ಗ್ರಾಮವಾಸಿಗಳು ಮತ್ತು ಮಕ್ಕಳ ಪೋಷಕರು ಅಸಮಾಧಾನ ತೋಡಿಕೊಂಡಿದ್ದಾರೆ.
ದಿನಗಳು ಉರುಳಿದಂತೆ ಗುಮ್ಮನಕೊಲ್ಲಿ ಸರಕಾರಿ ಶಾಲೆಯ ವಿವಾದ ಸಾಕಷ್ಟು ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಆ ದಿಸೆಯಲ್ಲಿ ಈ ಶಾಲೆಯ ಮುಖ್ಯೋಪಾಧ್ಯಾಯರ ಸಹಿತ ಅಸಹಾಯಕ ಶಿಕ್ಷಕರು, ವಿದ್ಯಾರ್ಥಿಗಳ ರಕ್ಷಣೆಗಾಗಿ ಕನಿಷ್ಟ ಶಾಲಾ ಆವರಣಕ್ಕೆ ತಂತಿ ಬೇಲಿ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳ ಮೊರೆ ಹೋಗಿದ್ದಾರೆ. ಆದರೆ ಗ್ರಾ.ಪಂ. ಸಹಿತ ಎಲ್ಲ ಜನಪ್ರತಿನಿಧಿಗಳು ವಿವಾದ ನ್ಯಾಯಾಲಯದಲ್ಲಿರುವ ಅಂಶ ಕೇಳಿ ಅತ್ತ ಬೆನ್ನು ತಿರುಗಿಸಿದ್ದಾರೆ. ಪರಿಣಾಮ ಶಿಕ್ಷಕರು ಮಾತ್ರ ನಿತ್ಯ ಕಲಿಕೆಗೆ ಬರಲಿರುವ ಮಕ್ಕಳ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾರದೆ, ಸದಾ ಆತಂಕದಲ್ಲಿ ದಿನಕಳೆಯುತ್ತಿದ್ದಾರೆ. ಇಲ್ಲಿನ ಮಕ್ಕಳು ಹಾಗೂ ಶಿಕ್ಷಕರು ಸದ್ಯದ ಮಟ್ಟಿಗೆ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದಾರೆ. -ಶ್ರೀಸುತ