ಮಡಿಕೇರಿ, ಜು. 25: ಕಳೆದ ತಿಂಗಳು ಕೋಟ್ಯಂತರ ರೂಪಾಯಿ ಮರಗಳ್ಳತನ ಪ್ರಕರಣದಲ್ಲಿ ಪೊಲೀಸ್ ಇಲಾಖೆಯಿಂದ ಬಂಧಿಸಲ್ಪಟ್ಟಿರುವ ನೋಬನ್ ಹಾಗೂ ಆತನ ಸಹಚರರ ಮೇಲಿನ ತನಿಖೆಗೆ ರೋಚಕ ತಿರುವು ಲಭಿಸಿದೆ. ಬಂಧಿತ ಆರೋಪಿಗಳು ಅನೇಕ ಕಡೆಗಳಲ್ಲಿ ಬೇರೆ ಬೇರೆ ಬೆಳೆಗಾರರ ಖಾಸಗಿ ತೋಟಗಳು ಸೇರಿದಂತೆ; ಸರಕಾರಕ್ಕೆ ಸಂಬಂಧಿಸಿ ರುವ ಅರಣ್ಯ ಇಲಾಖೆಯ ಜಾಗದಿಂದಲೂ ಮರಗಳ್ಳತನ ಮಾಡಿರುವದು ಬಹಿರಂಗಗೊಂಡಿದೆ.ಮರದಂಧೆಯ ಪ್ರಮುಖ ಆರೋಪಿ ನೋಬನ್ ಹಾಗೂ ಈತನ ಸಹಚರರಾದ ರಾಜೇಂದ್ರ, ಅಯ್ಯಪ್ಪ ಮತ್ತು ದಾವೂದ್‍ನನ್ನು ಬಂಧಿಸಿರುವ ಪೊಲೀಸರಿಗೆ; ಇತರ ಹತ್ತಾರು ಮಂದಿ ತಲೆ ಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಪ್ರಕರಣದ ವಿಚಾರಣೆಯೊಂದಿಗೆ ವಾಸ್ತವವನ್ನು ಬಯಲಿಗೆಳೆಯುವದು ಸವಾಲಾಗಿ ಪರಣಮಿಸಿದೆ.ತನಿಖೆಯ ಪ್ರಾರಂಭಿಕ ಹಂತದಲ್ಲಿ; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ ವಿಚಾರಣೆ ಸಂದರ್ಭ ಆರೋಪಿಗಳು ದಕ್ಷಿಣ ಕೊಡಗಿನ ವೆಸ್ಟ್‍ನೆಮ್ಮಲೆ ಹಾಗೂ ತಿತಿಮತಿ ಬಳಿಯ ಹೆಬ್ಬಾಲೆ ರಕ್ಷಿತಾರಣ್ಯದಲ್ಲಿ ಮರಗಳ್ಳತನ ಮಾಡಿರುವದು ಬೆಳಕಿಗೆ ಬಂದಿದೆ. ಸ್ವತಃ ನೋಬನ್ ಅಲ್ಲಲ್ಲಿ ಅಕ್ರಮ ದಂಧೆಕೋರರನ್ನು ಬಳಸಿಕೊಂಡು ಮರಗಳ್ಳತನ ನಡೆಸಿರುವದು ಪೊಲೀಸ್ ಇಲಾಖೆಯ ತನಿಖೆ ಸಂದರ್ಭ ದೃಢಪಟ್ಟಿದೆ.ನಿರಂತರ ಸವಾಲು : ಈತನ ಕೃತ್ಯಗಳ ಬಗ್ಗೆ ಪೊಲೀಸ್ ಇಲಾಖೆಗೆ ನಿಖರ ಮಾಹಿತಿ ನೀಡುತ್ತಿದ್ದ ಪರಿಣಾಮ; ಸಾಕಷ್ಟು ತಂತ್ರಗಾರಿಕೆ ಯಿಂದ ರಹಸ್ಯ ಕಾರ್ಯಾಚರಣೆ ಮೂಲಕ ಕಳೆದ ತಿಂಗಳು ಆರೋಪಿಗಳ ಬಂಧನ ಸಾಧ್ಯವಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.ತನಿಖೆಗೆ ಹಿನ್ನೆಡೆ : ನೋಬನ್ ಹಾಗೂ ಇತರ ಮೂವರ ಬಂಧನ ಬೆನ್ನಲ್ಲೇ ಹನ್ನೊಂದಕ್ಕೂ ಅಧಿಕ ಮಂದಿ ತಲೆಮರೆಸಿ ಕೊಂಡಿದ್ದು; ಇಡೀ ಹಗರಣದ ತನಿಖೆಗೆ ಸ್ವಲ್ಪಮಟ್ಟಿಗೆ ಹಿನ್ನೆಡೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ, ತಲೆಮರೆಸಿಕೊಂಡಿರುವ ವ್ಯಕ್ತಿಗಳು ನಿರೀಕ್ಷಣಾ ಜಾಮೀನು ಕೋರಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಬಂಧಿತರು ಕೂಡ ಜಾಮೀನು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಬೇರೆ ಬೇರೆ ಪ್ರಕರಣಗಳ ತನಿಖೆಗೆ ಪೂರಕ ದಾಖಲಾತಿಗಳೊಂದಿಗೆ ಮಾಹಿತಿ ಸಂಗ್ರಹಿಸಲು ಆಗಿಲ್ಲವೆಂದು ತನಿಖಾಧಿಕಾರಿಗಳು ವ್ಯಾಖ್ಯಾನಿಸಿದ್ದಾರೆ.
ಅರಣ್ಯ ಇಲಾಖೆಯ ಜಾಗದಲ್ಲಿ ಮರಗಳ ಹನನ ಸಂಬಂಧ; ಅರಣ್ಯ ಅಧಿಕಾರಿಗಳು ಕೂಡ ಪ್ರತ್ಯೇಕ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಇನ್ನೊಂದೆಡೆ ನೋಬನ್ ಹೊಂದಿರುವ ಅಕ್ರಮ ಆಸ್ತಿ ಸಂಬಂಧವೂ ಆದಾಯ ತೆರಿಗೆ ಇಲಾಖೆ ಹಾಗೂ ಗುಪ್ತಚರ ವಿಭಾಗದಿಂದ ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ಸಂಬಂಧಪಟ್ಟವರು ಮುಂದಿನ ಕ್ರಮಕ್ಕಾಗಿ ಕೋರಿರುವ ಬಗ್ಗೆ ಮೂಲಗಳು ಖಚಿತಪಡಿಸಿವೆ.
ಅನೇಕ ಅಂಶ ಬೆಳಕಿಗೆ : ಪ್ರಾರಂಭದಲ್ಲಿ ಪೊಲೀಸರು ನೋಬನ್ ಸಹಿತ ನಾಲ್ವರನ್ನು ಬಂಧಿಸಿದ ಬೆನ್ನಲ್ಲೇ; ನ್ಯಾಯಾಲಯ ಆರೋಪಿ ಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದರಿಂದ ಅನೇಕ ಅಕ್ರಮ ಸಂಗತಿಗಳನ್ನು ಬಯಲಿ ಗೆಳೆಯಲು ಸಾಧ್ಯವಾಗಿದ್ದು; ಆತನ ನಕಲಿ ದಾಖಲೆ ಸೃಷ್ಟಿ; ವಾಹನಗಳ ಬೇನಾಮಿ ನೋಂದಾಣಿ; ಇಲಾಖೆಗಳ ಮುದ್ರೆ ಹಾಗೂ ಅಧಿಕಾರಿಗಳ ನಕಲಿ ಸಹಿ ಇತ್ಯಾದಿ ಕೃತ್ಯಗಳು ಬೆಳಕಿಗೆ ಬಂದಿರು ವದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ.